ಎರಡನೆಯ ದಿನದ ಮಧ್ಯಾಹ್ನ, ಗಣಪತಿ ಫುಲೆಯಿಂದ ಮುಂದಕ್ಕೆ, ‘ಕೋಳಿಸರೆ’ ಎಂಬ ಪ್ರಕೃತಿಯ ಆಡುಂಬೊಲವೆಂಬಂತೆ ಮೇಳೈಸುವ ತಗ್ಗು ಪ್ರದೇಶದಲ್ಲಿರುವ ಲಕ್ಷ್ಮೀಕೇಶವ ದೇವಳಕ್ಕೆ, ಮುಂದೇನು? ಮುಂದೇನು? ಎಂದು ಆಸಕ್ತಿ ಹುಟ್ಟಿಸುವ ಮೆಟ್ಟಲುಗಳನ್ನು ಇಳಿಯುತ್ತ ಹೋದೆವು. ಅಲ್ಲಿ ಸುರಿಯುತ್ತಿದ್ದ ಮಳೆ, ಹಕ್ಕಿಗಳ ಕಲರವ, ದೇವಳದ ಬದಿಯಲ್ಲಿ ಹರಿಯುವ ತೆೊರೆಯ ಜುಳುಜುಳು ನಿನಾದ, ಇವುಗಳಿಗೆ ನಾವು ತೆರೆದುಕೊಳ್ಳುತ್ತ ಮುಂದೆ ಮುಂದೆ ಹೋದರೆ, ಮೊದಲ ನೋಟಕ್ಕೆ ಮಾನವರಾರೂ ಕಾಣಲಿಲ್ಲ. ಸ್ವಲ್ಪ ಹೆೊತ್ತಿನ ನಂತರ, ಅನನ್ಯ ಪ್ರಶಾಂತತೆ ಹೊಂದಿರುವ ಮುಖಮುದ್ರೆಯ ಅರ್ಚಕರನ್ನು ಕಂಡಾಗ ಒಮ್ಮೆಗೆ, ಇವರೊಬ್ಬರೇ ಇಲ್ಲಿ… ಯಾವ ಭೀತಿಯೂ ಇಲ್ಲದೆ ಹೇಗೆ ಇದ್ದಾರೆ ಎನಿಸಿತ್ತು. ಮರುಕ್ಷಣದಲ್ಲೇ ಆ ಪರಿಸರದ ವಿಶಿಷ್ಟ ಶಾಂತಿ , ನಮ್ಮನ್ನೂ ಆವರಿಸಿ, ಅಲೌಕಿಕ ಆನಂದ ಪರವಶವಾಗಿಸಿತ್ತು. ಆ ನಂತರ ನಮ್ಮ ಗಮನ, ವಾಡೇಶ್ವರದ ಈಶ್ವರ ಮಂದಿರಕ್ಕೆ. ಕಾರಿನಲ್ಲೇ ಫೆರಿಯನ್ನೇರಿ ಸಮುದ್ರದ ಮೂಲಕ ನಾವು ಅಲ್ಲಿಗೆ ಹೋಗಿ ಬಂದದ್ದು ರೋಚಕವಾಗಿತ್ತು. ಪೇಟೆಯ ನಡುವೆ ಇರುವ ವಾಡೇಶ್ವರ ದೇವಸ್ಥಾನ ಬಹಳ ಜನರು ಸೇರಿ ನಡೆಸುತ್ತಿದ್ದ ಧಾರ್ಮಿಕ ಪಠಣ ಇತ್ಯಾದಿಗಳಿಂದ ವಿಭಿನ್ನ ಅನುಭವ ನೀಡಿತ್ತು.
ಮರುದಿನ ನಮ್ಮ ರತ್ನಾಗಿರಿ ಪ್ರವಾಸದ ಕೊನೆಯ ದಿನ. ಬರ್ಮಾದೇಶದ ರಾಜ ಥೀಬಾ ಎಂಬವರು, ಬ್ರಿಟಿಷರಿಂದ ಪದಚ್ಯುತಗೊಂಡು, ತನ್ನ ಕುಟುಂಬದೊಡನೆ ರತ್ನಾಗಿರಿಯಲ್ಲಿ ಇರಿಸಲ್ಪಟ್ಟಿದ್ದ ಕಟ್ಟಡವನ್ನು ಇಂದು ಥೀಬಾ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ. ಈ ಮ್ಯೂಸಿಯಂನ್ನು ಇನ್ನೂ ಸ್ವಲ್ಪ ಚೆನ್ನಾಗಿ ನಿರ್ವಹಣೆ ಮಾಡಬಹುದೇನೋ ಎಂದೆನಿಸಿದರೂ, ಅಲ್ಲಿ ಕಂಡ ಹಳೆಯ ದಾಖಲೆಗಳು, ಶಿಲ್ಪ ಕೃತಿಗಳು ವಿಶೇಷವೆನಿಸಿದ್ದವು. ಆ ನಂತರ ಹೋದದ್ದು ರತ್ನಾಗಿರಿಯ ಬಹಮನಿ ಸುಲ್ತಾನರ ಕಾಲದ ಕೋಟೆಗೆ. ಅದು ಶಿವಾಜಿ ಮಹಾರಾಜರ ಕಾಲದಲ್ಲಿ ಕಾಲದಲ್ಲಿ ಊರ್ಜಿತಗೊಂಡಿದ್ದು ಅಲ್ಲಿರುವ ಭಗವತೀ ದೇವಸ್ಥಾನ ಭಕ್ತಾದಿಗಳನ್ನು ಸೆಳೆಯುತ್ತದೆ. ಎತ್ತರದ ಕೋಟೆಯ ಸುತ್ತಲ ಗೋಡೆಯ ಬದಿಯಲ್ಲಿ ಒಂದು ಸುತ್ತು ಹಾಕಿದಾಗ, ಅರಬ್ಬೀ ಸಮುದ್ರದ ಹಾಗೂ ರತ್ನಾಗಿರಿಯ ವಿಹಂಗಮ ನೋಟ ದೊರೆಯುತ್ತದೆ ಮತ್ತು ಸಮುದ್ರದ ಕಡೆಯಿಂದ ಬೀಸುವ ಗಾಳಿಯಿಂದ ಹಾಯೆನಿಸುತ್ತದೆ.
ಕಡೆಯ ಕಂತು ಮುಂದಿನವಾರ
ದೀಪಾವಳಿಯ ಶುಭಾಶಯಗಳು
-ಸುಮನಾ