Posted in ಸಣ್ಣ ಕತೆ

ರತ್ನಾಗಿರಿಯ ರಹಸ್ಯ!!! ಭಾಗ-೨

ಕಸಬಾದ ಸಂಗಮೇಶ್ವರದಲ್ಲಿ ಪರಿಸರದೊಂದಿಗೆ ಏಕೋಭಾವಗೊಂಡ ಭಾವನೆ. ನೋಡಿದಷ್ಟು ಉದ್ದಕ್ಕೂ ಹರಿಯುತ್ತಿರುವ ನದಿಯ ನೀರು. ಅಂಚಿಗೆ ಉದ್ದಕ್ಕೂ ಹಬ್ಬಿರುವ ಮೇರು, ಅದರ ಮೇಲೆ ಕಣ್ತಣಿಸುವ ಹಸಿರಿನ ಪೈರು.

ಮಧ್ಯಾನ್ಹದ ನಂತರ ನಾವು ಹೋದದ್ದು, ರತ್ನಾಗಿರಿ ಪೇಟೆಯ ಮಧ್ಯದಲ್ಲೇ ಇರುವ, ‘ಭಾರತದಲ್ಲಿ ಚಳುವಳಿಯ ಜನಕ’ ಎಂದು ಬಣ್ಣಿಸಲಾಗಿರುವ, ಸಾರ್ವಜನಿಕ ಗಣೇಶೋತ್ಸವ ಆಚರಣೆಯನ್ನು ಆರಂಭಿಸಿದ ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ ಜನನಾಯಕ, ಲೋಕಮಾನ್ಯ ಬಾಲಗಂಗಾಧರ ತಿಲಕ ಅವರ ಜನ್ಮಸ್ಥಾನಕ್ಕೆ.

ಸುಮಾರು ೧೫೦ ವರ್ಷಗಳಿಗಿಂತ ಹೆಚ್ಟು ಹಳೆಯದಿರಬಹುದಾದ(ತಿಲಕರು ಜನಿಸಿದ್ದು ೧೮೫೬ ರಲ್ಲಿ) ವ್ಯವಸ್ಥಿತವಾಗಿ ನಿರ್ವಹಿಸಲ್ಪಡುತ್ತಿರುವ ನಿರಾಡಂಬರ ಗಾಂಭೀರ್ಯದ ಈ ಮನೆಯ ಒಳಹೊಕ್ಕಿದ ನಮಗೆ ಅಲ್ಲೇ ಸಮಯ ಕಳೆಯುವ ಆಸೆಯಾಗಿತ್ತು. ಹಳೆಯ ಮನೆಯನ್ನು ಸರಕಾರ ನಡೆಸುವುದಾದರೂ, ಆ ಮನೆಯವರೇ ಅಲ್ಲಿದ್ದಾರೇನೋ ಅನಿಸುವಂತಿತ್ತು ಅಲ್ಲಿನ ಚೊಕ್ಕ ಸರಳ ಸಹಜ ವಾತಾವರಣ. ಸುಮಾರು ಸಮಯ ಅಲ್ಲೇ ಇದ್ದ ನಾವು, ಸಂಜೆ ಐದುಗಂಟೆಗೆ ಬಾಗಿಲು ಮುಚ್ಚುವಾಗ ಹೊರಬಂದು, ಗೇಟಿನ ಹೊರಗಿಂದ ಕ್ಲಿಕ್ಕಿಸಿದ ಮನೆಯ, ಮನೆಯ ಹೊರಗಡೆ ಸ್ಥಾಪಿಸಿರುವ ತಿಲಕರ ಪುತ್ಥಳಿಯ ಫೋಟೋ ಈ ಕೆಳಗೆ ಕೊಟ್ಟಿರುವೆ🙏 ಆ ನಂತರ ಥೀಬಾ ಪಾಯ್ಟ್ ಎಂಬ ಎತ್ತರದ ಸ್ಥಳದಿಂದ ಬಹಳ ಜೋರಾಗಿ ಬೀಸುವ ಗಾಳಿಯ ತಳ್ಳಾಟದ ನಡುವೆ ಮಾಡಿದ ಅರಬ್ಬೀ ಸಮುದ್ರ ವೀಕ್ಷಣೆ ನೆನಪಿನಲ್ಲಿ ಉಳಿಯುವಂತಹುದು.😊

ಮರುದಿನ ಬೆಳಗ್ಗಿನ ಹೊತ್ತು ಮುಂದಿನ ಪ್ರಯಾಣ, ರತ್ನಾಗಿರಿಯಿಂದ ಇಪ್ಪತ್ತೈದು ಕಿಲೋಮೀಟರ್ ನಷ್ಟು ದೂರವಿರುವ, ಗಣಪತಿಫುಲೆ ಎಂಬ ಸಮುದ್ರತೀರದಲ್ಲಿರುವ ಸ್ವಯಂಭು ಗಣಪತಿ ದೇವಳಕ್ಕೆ. ಇಲ್ಲಿ ಸಾಗರದಲೆಗಳು ದೇವಸ್ಥಾನದ ಬಹಳ ಸಮೀಪದವರೆಗೆ ಬಂದು ಹಿಂದಿರುಗುವ ದೃಶ್ಯ ಹೃದಯಂಗಮ. ಈ ದೇವಸ್ಥಾನದ ಹೊರಮೈ, ದೇವರ ಮೂರ್ತಿ, ಪ್ರಸಾದದ ಸಿಂಧೂರ ಎಲ್ಲವೂ ಕೇಸರಿಮಯ. ಸುಂದರವಾಗಿರುವ ಈ ದೇವಸ್ಥಾನದಲ್ಲಿ ಪ್ರಸಾದಭೋಜನವನ್ನು ಸವಿದದ್ದು ನೆನಪಿನ ಬುತ್ತಿಯಲ್ಲಿ ತಾಜಾ ಆಗಿ ಉಳಿದಿದೆ🙏 ಆ ನಂತರ ಸಂದರ್ಶಿಸಿದ ‘ಕೋಳಿಸರೆ’ ಎಂದು ನಾಮಾಂಕಿತ ಪ್ರಕೃತಿಯ ಆಡುಂಬೊಲದ ಬಗ್ಗೆ ಮುಂದಿನವಾರ ಹೇಳಲು ಉತ್ಸುಖಳಾಗಿದ್ದೇನೆ. ಸದ್ಯಕ್ಕೆ ವಿರಾಮ. ನಮಸ್ಕಾರ😊🙏

-ಸುಮನಾ🌹

Leave a Reply

Your email address will not be published. Required fields are marked *