Posted in ಸಣ್ಣ ಕತೆ

ರತ್ನಾಗಿರಿಯ ರಹಸ್ಯ!!! ಭಾಗ-೧

ಮೇಲಿನ ಪದಪುಂಜ ಯಾವುದೋ ಪತ್ತೇದಾರಿ ಕಾದಂಬರಿಯ ಶೀರ್ಷಿಕೆಯಂತೆ ನಿಮಗೆ ಎನಿಸುವುದು ಸಹಜ!. ಕೊಂಕಣ ಪ್ರದೇಶದಲ್ಲಿರುವ ಮಹಾರಾಷ್ಟ್ರದ ‘ರತ್ನಾಗಿರಿ’ ಹಾಗೂ ಸಮೀಪದ ಭೂಭಾಗಗಳಿಂದ ನಮ್ಮ ಮನೆತನಗಳ ಪೂರ್ವಜರು ಹಲವು ನೂರು ವರ್ಷಗಳ ಹಿಂದೆ ವಲಸೆ ಬಂದು ಅವಿಭಜಿತ ದಕ್ಷಿಣಕನ್ನಡ ಹಾಗೂ ಆಸುಪಾಸಿನ ಕಾಡಂಚುಗಳಲ್ಲಿ ನೆಲೆಸಿದ್ದು, ಅದು ಹೇಗೆ ಸಾಧ್ಯವಾಯಿತು, ಅವರು ಇಲ್ಲಿ ಅದ್ಹೇಗೆ ಹೊಂದಿಕೊಂಡಿರಬಹುದು,ಕಾಡು ಬದಿಯನ್ನೇ ಅವರು ಯಾಕೆ ಆಯ್ಕೆ ಮಾಡಿಕೊಂಡರು ಎಂಬುದು ಬಹಳ ರಹಸ್ಯಮಯವಾಗಿ ತೋರಿ ನನ್ನನ್ನು ಅನೇಕ ಸಲ ಕಾಡಿದ್ದುಂಟು. ಅದಕ್ಕೆಂದೇ ರತ್ನಾಗಿರಿಯ ನನ್ನ ಪ್ರವಾಸ ಕಥನಕ್ಕೆ ಈ ಶೀರ್ಷಿಕೆ😊

ನಮ್ಮ ಮೂಲ ಸ್ಥಾನವಾದ, ರತ್ನಾಗಿರಿ ಪ್ರದೇಶವನ್ನು ನೋಡಿ ಬರುವ ಒಂದು ಸುಯೋಗ ಲಭಿಸಿದ್ದು ಸರಿಸುಮಾರು ಎರಡು ತಿಂಗಳುಗಳ ಕೆಳಗೆ ನನ್ನ ಮಗ ಅಲ್ಲಿಗೆ ಹೋಗಿ ಬರುವ ತನ್ನ ಆಸೆಯನ್ನು ನನ್ನ ಮುಂದಿರಿಸಿದಾಗ. ಮಂಗಳೂರಿನಿಂದ ರಾತ್ರೆ ಸುಮಾರು ಎಂಟು ಗಂಟೆಗೆ ರೈಲಿನಲ್ಲಿ ಹೊರಟು, ಒಂದು ಒಳ್ಳೆಯ ನಿದ್ದೆ ಮಾಡಿ ಉಲ್ಲಾಸದಿಂದ ಮರುದಿನ ಬೆಳಿಗ್ಗೆ ಏಳುವಾಗ ರತ್ನಾಗಿರಿ ತಲುಪಿಯಾಗಿತ್ತು. ಹಾಗಾಗಿ ನಿಗದಿತ ವಾಸಸ್ಥಾನವನ್ನು ಸೇರಿ ಹೆಚ್ಚೇನೂ ವಿಳಂಬಿಸದೆ, ಸ್ನಾನ ಪಾನಾದಿಗಳನ್ನು ಪೂರೈಸಿ, ರತ್ನಾಗಿರಿ ದರ್ಶನಕ್ಕೆಂದು ಹೊರಟದ್ದಾಯಿತು.

ಮಂಗಳೂರಿನಂತೆಯೆ ರತ್ನಾಗಿರಿ ಕೂಡಾ ಹಲವು ದೇವಸ್ಥಾನಗಳಿಂದ, ಪ್ರೇಕ್ಷಣೀಯ, ಆಹ್ಲಾದಕರ ಸಮುದ್ರ ತೀರಗಳಿಂದ ಹಾಗೂ ಹಲವಾರು ಸ್ಮಾರಕಗಳಿಂದ ಪ್ರಸಿದ್ಧಿ ಪಡೆದಿದೆ. ಇಲ್ಲಿ ಕಾಣ ಸಿಗುವ ಮಾವಿನ ತೋಪುಗಳು, ಸಹ್ಯಾದ್ರಿ ಬೆಟ್ಟ ಪ್ರದೇಶದ ಹಸಿರು ಕಾಡುಗಳು, ಕಾರಿನಲ್ಲಿ ಸಾಗುತ್ತಿರುವಾಗ ದೂರ ಬೆಟ್ಟದ ಹಸಿರು ಇಳಿಜಾರಿನಲ್ಲಿ ಅಲ್ಲಲ್ಲಿ ಧವಲಧಾರೆಯಂತೆ ಗೋಚರಿಸುವ ಜಲಪಾತಗಳು ಮನೋಹರವಾಗಿವೆ.

ರತ್ನಾಗಿರಿಯಿಂದ ಸಂಗಮೇಶ್ವರ ಎಂಬ ಸ್ಥಳಕ್ಕೆ ಸರಿಸುಮಾರು ೩೦ ಕಿ. ಮೀ., ದೂರವಿದೆ. ಅಲ್ಲಿ, ಅಲಕನಂದಾ, ಶಾಸ್ತ್ರೀ ಮತ್ತು ವರುಣಾ ಎಂಬ ಮೂರು ನದಿಗಳು ಒಂದಾಗಿ ಹರಿಯುವ ಬಹಳ ಸುಂದರ ಸಂಗಮ ಸ್ಥಳವಿದೆ. ಅದರ ತೀರದಲ್ಲಿ ಸುಮಾರು ೧೬೦೦ ವರ್ಷಗಳಷ್ಟು ಹಳೆಯ ಶಿಲಾನಿರ್ಮಿತ, ಕರವೀರ ವಂಶದ ಕರ್ಣನೆಂಬ ರಾಜನು ಕಟ್ಟಿಸಿದ್ದು ಎಂದು ನಂಬಿರುವ, ಕರ್ಣೇಶ್ವರ ಎಂಬ ಈಶ್ವರ ದೇವಸ್ಥಾನ ಹಾಗೂ ಅದರ ಬಳಿಯೇ ಲಕ್ಷೀನರಸಿಂಹ ದೇವರ ಗುಡಿ ಮತ್ತು ಭಕ್ತರ ಅನುಕೂಲಕ್ಕಾಗಿ ಕಟ್ಟಿಸಿರುವಂತೆ ಕಾಣುವ ಹಾಲ್ ಹಾಗೂ ಭೋಜನ ಶಾಲೆಯಿದೆ. ದಾರಿಯಲ್ಲಿ ಕಂಡ ಹಳೆ ಮನೆಗಳ ರಚನೆಯಲ್ಲಿ ಒಂದು ವಿಶಿಷ್ಠತೆಯಿದೆ.

-ಸುಮನಾ😊🙏🌹

Leave a Reply

Your email address will not be published. Required fields are marked *