ಇವತ್ತಿನ ಈ ಪೋಸ್ಟ್ ನ ಶೀರ್ಷಿಕೆಯು ಸಣ್ಣ ವಿಷಯವನ್ನು ದೊಡ್ಡದು ಮಾಡುವುದಕ್ಕೆ ಲಾಗಾಯ್ತಿನಿಂದ ಹೇಳುವ ಒಂದು ವಿಡಂಬನಾತ್ಮಕ ಕಮೆಂಟ್ ಆಗಿದೆ. ಕುಂಬಳಕಾಯಿ ಒಂದು ಸೃಷ್ಠಿ ವಿಶೇಷ ಎನ್ನುವುದನ್ನು ಈ ಕಮೆಂಟ್ ಸಾರುತ್ತದೆ. ನಾನು ಹೇಳಹೊರಟಿರುವುದು ಬಳ್ಳಿಯೊಂದರಲ್ಲಿ ಕುಂಬಳದ ಕಾಯಿಗಳು ಹುಟ್ಟಿ ಬೆಳೆದು, ಮೂಡಿಸಿದ ಬೆರಗಿನ ಬಗ್ಗೆ.
ಕೈತೋಟದಲ್ಲಿ ನೆಟ್ಟು ಪೋಷಿಸಿದ ಒಂದು ಕುಂಬಳದ ಬಳ್ಳಿ, ನೆಲದಲ್ಲಿ ಹರಿದಾಡುವ ಬದಲು, ನಮ್ಮ ಕಣ್ಣು ತಪ್ಪಿಸಿ, ಹತ್ತಿರದ ಬೇವಿನ ಮರವನ್ನು ಆಧರಿಸಿ ಮುಂದುವರಿದಿದೆ. ಆ ಮರದೆತ್ತರಕ್ಕೆ ಬೆಳೆದು, ಮೇಲ್ಮಟ್ಟದಲ್ಲಿ ದೊರೆತ ಧಾರಾಳ ಸೂರ್ಯ ರಶ್ಮಿ ಹಾಗೂ ನೆಲದಡಿಯಲ್ಲಿನ ಸತ್ವಗಳನ್ನು ಹೀರಿ ಮರದ ಎಲೆಗಳೊಂದಿಗೆ ಸೊಂಪಾಗಿ ಹಬ್ಬಿ ಪಲ್ಲವಿಸಿದೆ. ಬಳುಕುತ್ತ ನಾಜೂಕಾಗಿ ಸಾಗುತ್ತಲಿದ್ದ ಬಳ್ಳಿಯಲ್ಲಿ ಈಗ ಹತ್ತಿರದಿಂದ ನೋಡಿದರೆ, ಸ್ವರಕ್ಷಣೆಗಾಗಿಯೋ ಎಂದೆನಿಸುವ ಸಣ್ಣ ಸಣ್ಣ ಮುಳ್ಳುಗಳು ಕಾಣುತ್ತಿವೆ. ಈ ಬಳ್ಳಿಯಲ್ಲಿ ಮೂಡಿದ್ದ ಹಳದಿ ರಂಗಿನ ಚೆಂದದ ಹೂವುಗಳು ಅದಕ್ಕೆ ಸೌಂದರ್ಯ ಹಾಗೂ ಮೃದುತ್ವವನ್ನು ಆವಾಹಿಸಿದ್ದರೆ, ಹೂವು ಮರೆಯಾಗಿ ಕಾಯಿಗಳು ಮೂಡಲಾರಂಭಿಸಿದಾಗ ಈ ಬಳ್ಳಿ ಗಟ್ಟಿಮುಟ್ಟಾದ ಹುರಿ ಹಗ್ಗದ ರೀತಿಯಲ್ಲಿ ಮಾರ್ಪಾಡಾಗಿದೆ, ಕಾಯಿಗಳ ಭಾರ ಹೊತ್ತಿದೆ. ಈ ಸೃಷ್ಠಿ ವಿಶೇಷವನ್ನು ಗಮನಿಸಿದಾಗ, ಬಳ್ಳಿ ಹಾಗೂ ಕಾಯಿಯನ್ನು ತಾಯಿ ಹಾಗೂ ಮಗುವಿಗೆ ಹೋಲಿಸುವ ಚೆಂದದ ಹಾಡೊಂದನ್ನು ಮನವು ಗುನುಗಿದೆ
‘ಧರಣಿಗೆ ಗಿರಿ ಭಾರವೇ
ಗಿರಿಗೆ ಮರವು ಭಾರವೇ
ಬಳ್ಳಿಗೆ ಕಾಯಿ ಭಾರವೇ
ಹೆತ್ತ ತಾಯಿಗೆ ಮಗುವು ಭಾರವೇ’
-ಸುಮನಾ