ವರಂಗ ಕ್ಷೇತ್ರ ಮೂಡಿಸಿದ ವಿಶೇಷ ಭಾವತರಂಗಗಳೊಡನೆ ಕಾರನ್ನೇರಿ ನಾವು ಕಾರ್ಕಳಕ್ಕೆ ಹಿಂದಿರುಗಿ, ಆ ರಸ ನಿಮಿಷಗಳನ್ನೆಣಿಸುತ್ತ ಮಧ್ಯಾಹ್ನದ ಭೋಜನವನ್ನು ಉಪಾಹಾರಗೃಹವೊಂದರಲ್ಲಿ ಸವಿದೆವು. ಆ ನಂತರ ಮೊದಲೇ ನಿರ್ಣಯಿಸಿದಂತೆ ನಾವೆಲ್ಲ ಕಾಲೇಜು ಶಿಕ್ಷಣ ಪಡೆದ ಭುವನೇಂದ್ರ ಕಾಲೇಜಿಗೆ ಹೋಗುವ ರಸ್ತೆಯಲ್ಲಿ ಬಲು ಮೆಲ್ಲಮೆಲ್ಲನೆ ಸಾಗಿದೆವು. ಹೊರಗೆ ಸುರಿಯುತ್ತಿದ್ದ ಮಳೆಯನ್ನು ಮೇಲೇರಿಸಿದ ಕಾರಿನ ಗಾಜಿನ ಕಿಟಕಿಯೊಳಗಿಂದ ನೋಡುತ್ತಲಿದ್ದರೆ.. ಮನದಲ್ಲಿ ಆ ಪರಿಸರದಲ್ಲಿ ಗೌರವಾನ್ವಿತ ಗುರುವೃಂದದೊಂದಿಗೆ, ಸಲಿಗೆಯ ಸ್ನೇಹವರ್ಗದೊಂದಿಗೆ ಕಳೆದ ಕಾಲೇಜು ದಿನಗಳ ನೆನಪಿನ ಸುರಿಮಳೆ!
ಕಾರ್ಕಳದ ಪ್ರಸಿದ್ಧ ನೀರುನೆಲೆಗಳಾದ, ರಾಮ ಸಮುದ್ರ, ಆನೆಕೆರೆ ಇವುಗಳ ಬಳಿ ಇಳಿದು, ಆ ಊರಿನೊಂದಿಗಿನ ನೀರ ಋಣವನ್ನು ಕೃತಜ್ಞತೆಯಿಂದ ಜ್ಞಾಪಿಸಿಕೊಂಡೆ. ಇತ್ತೀಚೆಗೆ ನಿರ್ಮಾಣಗೊಂಡಿರುವ ‘ಕೋಟಿ ಚೆನ್ನಯ’ ಕಲಾಕೇಂದ್ರದ ಸುತ್ತುಮದಲಿನ ಪಾರಂಪರಿಕ ಮನೆ, ಅಲ್ಲಿನ ಒಳಗೋಡೆಗಳ ಮೇಲೆ ತುಳುನಾಡಿನ ವೀರರಾದ ಕೋಟಿ-ಚೆನ್ನಯರ ಕುರಿತ ಹಾಡು-ಚಿತ್ರಗಳು, ಅಲ್ಲಿ ಕಲೆಹಾಕಿರುವ ನಮ್ಮ ಹಿರಿಯರ ಜೀವನಪದ್ಧತಿಯನ್ನು ನೆನಪಿಸುವ, ಚೆನ್ನೆಮಣೆಯಿಂದ ತೊಡಗಿ, ಮಣ್ಣು-ಕಬ್ಬಿಣ-ಮರಗಳಿಂದ ಮಾಡಿದ ಪಾತ್ರೆ-ಪರಿಕರಗಳು, ಹೊರಗೆ ಪ್ರಾಂಗಣದಲ್ಲಿ ಸ್ಥಾಪಿಸಿರುವ ಕೋಟಿ-ಚೆನ್ನಯರ ಪ್ರತಿಮೆಗಳು, ನಿರ್ಮಾಣ ಹಂತದಲ್ಲಿರುವ ಜೀವಂತವೇನೋ ಎಂದೆನಿಸುವ ಭೂತಾರಾಧನೆ, ಚಮ್ಮಾರ, ಬಡಗಿ, ರೈತ ಇತ್ಯಾದಿ ಜೀವನ ರೀತಿಯ ಸ್ತಬ್ಧ ಪ್ರತಿಮೆಗಳು ಅಂದು ನಮ್ಮಮನ ಸೆಳೆದ ಸ್ಥಳ. ಇದನ್ನು ಕಾರ್ಕಳದ ಕಲಾಮಂದಿರವೆನ್ನಬಹುದೇನೋ
ರಾಮಸಮುದ್ರದ ದಡದಲ್ಲಿನ ಬಿಳಿ ಕೊಕ್ಕರೆಗಳ ವಾಸಸ್ಥಾನವನ್ನು, ಆನೆಕೆರೆಯ ನೀರಮೇಲೆ ದಟ್ಟವಾಗಿ ಹಬ್ಬಿರುವ ಜೊಂಡಿನ ಮೇಲೆ ಹಗುರ ಹಕ್ಕಿಯು ತೇಲಾಡಿ ಸುಖಿಸುವುದನ್ನು ತಮ್ಮ ತನ್ನ ಕ್ಯಾಮರಾದಲ್ಲಿ ಸುಂದರವಾಗಿ ಸೆರೆ ಹಿಡಿದ. ಆನೆಕೆರೆಯ ಬದಿಯ ತೋಟದಲ್ಲಿ ಕೆಂಪುವರ್ಣದ ರಥಹೂವು ಹಾಗೂ ಅದರ ಮೇಲಿದ್ದ ಹಕ್ಕಿಯನ್ನು ನನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದು, ತಮ್ಮನಿಂದ ಹೊಗಳಿಸಿಕೊಂಡಾಗ, ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಉಬ್ಬಿ ಹೋದೆ
ಅಂದಿನ ನಮ್ಮ ಪ್ರವಾಸವನ್ನು ಉತ್ಸಾಹಪೂರ್ಣವಾಗಿಸಿದ್ದು ತಮ್ಮನ ಮಗ ಮಿಹಿರ ಹಾಗೂ ದೆಹಲಿಯಿಂದ ರಜೆಗೆಂದು ಬಂದಿದ್ದ ಅವನ ಕಸಿನ್ ಅಂದರೆ ನನ್ನ ಕಸಿನ್ ಳ ಮಗ ಕೌಸ್ತುಭ. ಪ್ರಕೃತಿ ಪ್ರಿಯಳಾದ ತಮ್ಮ ನ ಹೆಂಡತಿ ಮಾಯಾ ಪ್ರವಾಸಕ್ಕೆ ಜತೆಯಾದದ್ದು ಹೋಳಿಗೆಯ ಮೇಲಿನ ತುಪ್ಪದಂತಾಯಿತು
ಇಷ್ಟೆಲ್ಲ ಸುತ್ತಿ ಬರುವಾಗ ಇಳಿಹಗಲು. ಮರುಪ್ರಯಾಣಕ್ಕೆ ಅಣಿಯಾಗುತ್ತಿದ್ದಂತೆ, ‘ಅಕ್ಕಾ.. ಗೋಮಟ ಬೆಟ್ಟ, ಚತುರ್ಮುಖ ಬಸದಿ, ಪಡುತಿರುಪತಿ-ವೆಂಕಟರಮಣ ದೇವಸ್ಥಾನಗಳನ್ನು ಸಂದರ್ಶಿಸಲು ಇದೇ ತರಹ ಕಾರ್ಕಳಕ್ಕೆ ಇನ್ನೊಮ್ಮೆ ಬಾ..’..ತಮ್ಮನೆಂದ!
-ಸುಮನಾ