ಕಳೆದ ವಾರ, ನಮ್ಮ ಅಸ್ಮಿತೆಯ ಹೆಗ್ಗುರುತಾದ, ‘ತಿರಂಗ’ ಉತ್ಸವದ ಉತ್ಸಾಹದಲ್ಲಿ ತೇಲಿಹೋಯಿತು. ಮನಸ್ಸು ಅದರಲ್ಲಿ ತಲ್ಲೀನವಾಯಿತು. ಆದುದರಿಂದ ನಮ್ಮೂರಿನ ನನ್ನ ಪ್ರವಾಸದಲ್ಲಿ ‘ವರಂಗ’ ಎಂಬ ಅತಿ ಸುಂದರ, ಸರೋವರದ ಮಧ್ಯೆ ಕಂಗೊಳಿಸುವ ಬಸದಿಯ ಪರಿಸರಕ್ಕೆ ಹೋದ ಕತೆಯನ್ನು ಈ ವಾರ ಹಂಚಿಕೊಳ್ಳುತ್ತಿರುವೆ
ವರಂಗ ಬಸದಿಯ ‘ಪರಿಸರ’ಕ್ಕೆ ಹೋದದ್ದು ಎಂದು ಯಾಕೆ ಉಲ್ಲೇಖ ಮಾಡಿದೆ ಎಂದರೆ ನಾವು ಅಲ್ಲಿಗೆ ಹೋದಾಗ ಮಳೆ ಸುರಿಯುತ್ತಲಿದ್ದ ದಿನಗಳಾದ ಕಾರಣವೋ ಏನೋ, ಸರೋವರವನ್ನು ದಾಟಿ, ಬಸದಿ ತಲುಪಿ ದೇವರ ದರ್ಶನ ಲಭಿಸಲು ಬೇಕಾದ ದೋಣಿ ವಿಹಾರ ವ್ಯವಸ್ಥೆ ಇರಲಿಲ್ಲ. ಆದರೆ ಆ ಪರಿಸರದಲ್ಲಿ ಅಂದು ಕಳೆದ ಆ ಒಂದು ಘಂಟೆ ದಿವ್ಯತೆಯ ವಿರಾಟ್ ಪ್ರದರ್ಶನವೆನಿಸಿತ್ತು.
‘ವರಂಗ’ ಕ್ಷೇತ್ರವು ಶಿರ್ಲಾಲಿನಿಂದ ರಸ್ತೆಯ ಮೂಲಕ ಕಾರಿನಲ್ಲಿ ಹೋದಾಗ ದೂರವೆನಿಸಲಿಲ್ಲ. ಸುಮಾರು ಕಾಲು ಘಂಟೆಯ ಪ್ರಯಾಣದ ನಂತರ ಕಾರಿನಿಂದಿಳಿದು, ಹಸಿರು ಹಸಿರಾದ ಭತ್ತದ ಚಿಗುರು ಹುಲ್ಲಿನ ಆಲ್ಲಾಡುವ ಪ್ರತಿಬಿಂಬಗಳನ್ನು, ತಿಳಿ ನೀರಿನ ತೆಳು ಪದರದೊಳಗೆ ಗದ್ದೆ ಪುಣಿಯ ಮೇಲೆ ನಡೆಯುತ್ತ ನೋಡಿ ವಿಸ್ಮಯ ಪಡುತ್ತ ಮುಂದೆ ಸಾಗಿದಾಗ, ಸಿಕ್ಕ ಸರೋವರದ ಮೆಟ್ಚಿಲುಗಳಿಂದ ಕಂಡ ದೃಶ್ಯ, ಸ್ವರ್ಗದ ಬಾಗಿಲೇ ತೆರೆಯಿತೇನೋ ಎನಿಸುವಂತಿತ್ತು. ಮನೋಹರ, ಶಾಂತ ಸರೋವರ, ಸರೋವರದ ನೀರಿನ ಮೇಲೆ ಹರಿವಾಣದಾಕಾರದಲ್ಲಿ ಶೋಭಿಸುವ ಕಮಲದೆಲೆಗಳು, ನೀರಲ್ಲಿ ಆಡುವ ನೀರು ಹಕ್ಕಿಗಳು, ದೂರದಿಂದ ಕಾಣುವ ಬಸದಿಯ ಕಲಾತ್ಮಕ ಹೊರಮೈ, ದಡದಲ್ಲಿ ಕಂಪು ಬೀರುತ್ತಿರುವ ಸಂಪಿಗೆಯ ಮರಗಳು, ನೀರಿಗೆ ಬಲು ಹತ್ತಿರ ಸಮಾನಾಂತರವಾಗಿ ಹಾರಿ ಮೀನು ಅಥವಾ ಹುಳುಹುಪ್ಪಟೆ ಹಿಡಿಯುವ ಚಾಕಚಕ್ಯತೆ ಪ್ರದರ್ಶಿಸುವ ಹಕ್ಕಿಗಳು.. ಎರಡು ಕಣ್ಣುಗಳು ಸಾಲದು ಎನಿಸಿತು ಆ ಭವ್ಯತೆಯನ್ನು ನೋಡಲು! ಕೆಳಗಿನ ಚಿತ್ರಗಳು ಆ ಸೌಂದರ್ಯವನ್ನು ನಾವು ಬಾಚಿ ತಬ್ಬಿಕೊಳ್ಳಲು ಮಾಡಿದ ಪ್ರಯತ್ನಗಳು
-ಸುಮನಾ