ಮುಂಡ್ಲಿಯಿಂದ ಮುಂದೆ..
ಮನಸ್ಸಿಲ್ಲದ ಮನಸ್ಸಿನಿಂದ ಮುಂಡ್ಲಿಯಿಂದ ಮುಂದಡಿಯಿಟ್ಟು ಕೊನೆಯ ಬಾರಿ ಎಂಬಂತೆ ಹಿಂದಿರುಗಿ ಸುತ್ತಲೂ ನೋಡಿದಾಗ ತನ್ನಷ್ಟಕ್ಕೆ ವ್ಯಸ್ತ ಸ್ವರ್ಣಾನದಿ ಹರಿಯುತ್ತಲೇ ಇದ್ದಳು. ನೆಟ್ಟ ಮನಸ್ಸನ್ನು ಅಲ್ಲಿಂದ ಕಿತ್ತು, ಕತ್ತು ಮುಂದೆ ಸರಿಸಿದಾಗ ಸುತ್ತಲೂ ಪಸರಿಸಿರುವ ಸಸ್ಯಸಂಕುಲದ ನಡುವಿನ ರಸ್ತೆಯ ಮೇಲೆ ಕಾರು ಸಾಗುತ್ತಿತ್ತು. ಕಾರು ಚಾಲಕ, ಮಾರ್ಗದರ್ಶಕರ ನಡುವೆ ಮುಂದಿನ ತಾಣದ ಬಗ್ಗೆ ಸಂಭಾಷಣೆ ನಡೆಯುತ್ತಿರುವಂತೆಯೆ ಶಿರ್ಲಾಲಿನ ಸಿದ್ಧಗಿರಿ ಕ್ಷೇತ್ರ ಸೇರಿದ್ದೆವು.
ಇಲ್ಲಿ ಕಪ್ಪು ಕಲ್ಲಿನಲ್ಲಿ ನಿರ್ಮಿಸಿ ಪ್ರತಿಷ್ಠಾಪಿಸಿರುವ, ಭಗವಾನ್ ಶ್ರೀ ಆದಿನಾಥ ಸ್ವಾಮಿ, ಭಗವಾನ್ ಶ್ರೀ ಭರತ ಕೇವಲೀ ಸ್ವಾಮಿ ಮತ್ತು ಭಗವಾನ್ ಶ್ರೀ ಬಾಹುಬಲಿ ಕೇವಲೀ ಸ್ವಾಮಿಗಳ ಮೂರ್ತಿಗಳು ಹಾಗೂ ಪ್ರಕೃತಿಯ ಮಡಿಲಲ್ಲಿರುವ ಭಗವಾನ್ ಶ್ರೀ ಅನಂತನಾಥ ಸ್ವಾಮಿ ಬಸದಿ ನಮ್ಮನ್ನು ದಿವ್ಯ ಭಾವಕ್ಕೆ, ಸಂತೃಪ್ತ ಮನಸ್ಥಿತಿಗೆ ಕೊಂಡೊಯ್ದಿದ್ದವು. ಈ ಕ್ಷೇತ್ರದ ಬಗ್ಗೆ ಸ್ಥಳೀಯರೋರ್ವರು, ನಾವು ಅವರಿಗೆ ಅಪರಿಚಿತರಾದರೂ, ಆಸ್ಥೆಯಿಂದ ನೀಡಿದ ಮಾಹಿತಿ, ವಿವರಗಳು ಅವರ ಕ್ಷೇತ್ರದ ಮೇಲಿನ ಶ್ರದ್ಧಾಭಕ್ತಿಯನ್ನು ಸಾರುವಂತಿದ್ದವು ಹಾಗೂ ಅವರೊಂದಿಗಿನ ಸಂವಾದ ಆ ದಿನದ ಒಂದು ವಿಶೇಷವೆನಿಸಿತು. ನಾವು ಹೊರಟು ಬರುವಾಗ ಅವರು ಗಿಡದಿಂದ ಕಿತ್ತುಕೊಟ್ಟ, ನಾನು ಹಿಂದೆಂದೂ ನೋಡಿರದ ಕೆಂಪು ಬಣ್ಣದ ಸುರುಳಿ ಹೂವನ್ನು ಜೋಪಾನ ಮಾಡಿ ನಾಲ್ಕು ದಿನ ಹೂದಾನಿಯಲ್ಲಿಟ್ಟು ಸಂತೋಷಪಟ್ಟೆ. ಚಿತ್ರವನ್ನು ಕೆಳಗೆ ಪೋಸ್ಟ್ ಮಾಡಿದ್ದೇನೆ
ನನ್ನ ತಮ್ಮನಿಗೆ ಛಾಯಾಚಿತ್ರಗ್ರಹಣಕ್ಕೆ ಇದು ಬಹಳ ಒಳ್ಳೆಯ ತಾಣವಾಗಿತ್ತು ಎಂದು ಬೇರೆ ಹೇಳಬೇಕಾಗಿಲ್ಲ ಅವನಂತೆಯೇ ನಾವೆಲ್ಲರೂ ಸ್ವಲ್ಪಹೊತ್ತು ಅದೇ ಕಾಯಕದಲ್ಲಿ ತೊಡಗಿಕೊಂಡು ಆನಂದಿಸಿದೆವು
ನಂತರ ಸಂದರ್ಶಿಸಿದ ಇನ್ನೊಂದು ಪುಣ್ಯ ಕ್ಷೇತ್ರ ವರಂಗ. ಆ ಅನುಭವವನ್ನು ಮುಂದಿನವಾರ ಹಂಚಿಕೊಳ್ಳುವೆ. ಎಲ್ಲರಿಗೂ ನಮಸ್ಕಾರ.
-ಸುಮನಾ