ನಮ್ಮೂರ ಮಣ್ಣ ವಾಸನೆ ನಮಗೆ ಪ್ರಿಯ. ಊರು ಬದಿಗೆ ಹೋದಾಗ, ನಾವು ಬಾಲ್ಯ ಹಾಗೂ ನವತಾರುಣ್ಯದ ದಿನಗಳನ್ನು ಸವಿದ ಮನೆ, ಶಾಲೆ, ಕಾಲೇಜು, ಲೈಬ್ರೆರಿ, ಆ ದಿನಗಳಲ್ಲಿ ಪ್ರಯಾಣಿಸುತ್ತಿದ್ದ ಬಸ್, ಸಿನೆಮಾ ನೋಡುತ್ತಿದ್ದ ಥಿಯೇಟರ್, ಮಸಾಲೆದೋಸೆ ತಿನ್ನುತ್ತಿದ್ದ ಹೋಟೆಲ್, ಚುರುಮುರಿ ಪಚಡಿ ತಿನ್ನುತ್ತಿದ್ದ ಜಾಗೆ, ಬಳೆ -ಕ್ಲಿಪ್ ಅಂಗಡಿ, ಇವುಗಳ ಬಗ್ಗೆ ಒಂದಲ್ಲ, ಎರಡಲ್ಲ ಸಾವಿರ ನೆನಪುಗಳು ಸುಳಿದು ಮನಸ್ಸು ಒದ್ದೆಯಾಗುತ್ತಿರುತ್ತದೆ. ಆದರೆ ಊರು ಬಿಟ್ಟು ಈಚೆ ಬಂದಮೇಲೆ ಅಲ್ಲಿಗೆ ಹೋಗುವುದು ಸಮಾರಂಭಗಳಿಗೆ, ಬಂಧುಗಳ ಭೇಟಿಗೆ ಸೀಮಿತವಾಗುತ್ತದೆ.
ಈ ಸಲ ನಾನು ಕಾರ್ಕಳಕ್ಕೆ ಹೋದದ್ದು, ಒಂದು ಅನ್ವೇಷಣೆಯ ಇಚ್ಛೆಯಿಂದ. ಅದಕ್ಕೆ ಇಂಬು ಕೊಟ್ಟದ್ದು, ನನ್ನ ಸೋದರ ಸಂಬಂಧಿ ಹಾಗೂ ಬಾಲ್ಯಕಾಲದ ಒಡನಾಡಿ ತಮ್ಮ. ನಿಸರ್ಗ ಹಾಗೂ ಪಕ್ಷಿಪ್ರಿಯನಾದ ಆತ, ‘ಅಕ್ಕ, ನೀನು ಬಂದರೆ, ಕಾರ್ಕಳದಲ್ಲಿನ ಕೆಲವು ರಮಣೀಯ ಸ್ಥಳಗಳನ್ನು ತೋರಿಸುವೆ’ ಅಂದಿದ್ದ. ಆತನ ಫೋಟೋಗ್ರಫಿಯ ಫ್ಯಾನ್ ಆದ ನನಗೆ ಅವನು ಕ್ಯಾಮರಾದಲ್ಲಿ ಸೆರೆ ಹಿಡಿಯುವ ಸ್ಪಾಟ್ ಗಳನ್ನು ನೋಡುವ ಕುತೂಹಲವೂ ಇತ್ತು. ಆತನೊಂದಿಗೆ ಮಾತನಾಡಲೂ ಬಹಳಿತ್ತು. ಅಂತೂ ಅವನ ಹಾಗೂ ಅವನ ಕುಟುಂಬದೊಂದಿಗೆ ಕಾರ್ಕಳದಲ್ಲಿ ಕಳೆದ(ಅಲೆದ ಅಂತಲೂ ಹೇಳಬಹುದು!) ಆ ದಿನ ಇಂದಿಗೆ ಸವಿನೆನಪಾಗಿ ನೆಲೆಯೂರಿ ಒಂದು ವಾರ ಆಯಿತು.
ಕಳೆದವಾರ ರಜಾದಿನ ಬೆಳಗ್ಗೆ ಸುಮಾರು ಎಂಟುಗಂಟೆಗೆ ಮನೆಯಿಂದ ಹೊರಟಿದ್ದೆ. ಹಿಂದಿನ ದಿನವಷ್ಟೇ ಅವನ ಹುಟ್ಟುಹಬ್ಬವೆಂದು ಫೇಸ್ಬುಕ್ ಮೆಸೇಜಸ್, ವಾಟ್ಸಪ್ ಸ್ಟೇಟಸ್ನಿಂದ ತಿಳಿದಿತ್ತು. ಸರಿಯಾದ ದಿನಕ್ಕೇ ಹೋಗ್ತಾ ಇದ್ದೇನೆಂಬ ಸಂತೋಷ ಆವರಿಸಿತ್ತು. ಕಾರ್ಕಳ ಪೇಟೆ ಕಳೆದು, ಬಹಳವೇ ಮಾರ್ಪಾಡಾಗಿರುವ ನಂತರದ ದಾರಿಯಲ್ಲಿ ಸುಮಾರು ವರ್ಷಗಳ ನಂತರ, ‘ಇದು ಸರಿಯಾದ ದಾರಿ ಹೌದಲ್ಲವೇ’ ಎಂದು ಸಂದೇಹಿಸಿ ಹೋದದ್ದಾದರೂ ಗೂಗಲ್ ಮ್ಯಾಪ್ಸ್ ಕೃಪೆಯಿಂದ ಸೀದಾ ಏನೂ ಕಷ್ಟವಿಲ್ಲದೆ ಅವರ ಮನೆ ತಲುಪಿದೆ. ತಮ್ಮ ಹಾಗೂ ಅವನ ಕುಟುಂಬ ಉತ್ಸುಕತೆಯಿಂದ ಪ್ರಯಾಣ ಸನ್ನದ್ಧರಾಗಿದ್ದರು. ತಮ್ಮನ ಹೆಂಡತಿ, ಮಗ ಹಾಗೂ ಸೋದರಳಿಯ ಪ್ರಯಾಣಕ್ಕೆ ನಮ್ಮ ಜತೆಯಾದರು.
ಹಚ್ಚ ಹಸುರಿನ ದಾರಿಯಲ್ಲಿ ಸ್ವಲ್ಪ ಸಾಗಿದಾಗ ಅಂದು ದೊರೆತ ಮೊದಲ ರತ್ನವೇ ಮುಂಡ್ಲಿ ಅಣೆಕಟ್ಟು ಸಣ್ಣ ಮಳೆಯಲ್ಲಿ , ತಣ್ಣಗಿನ ಹಿತವಾದ ಗಾಳಿಯಲ್ಲಿ, ಸ್ವರ್ಣಾ ನದಿಯ ದಡದಲ್ಲಿ ಈ ಕಿಂಡಿ ಅಣೆಕಟ್ಟಿನ ಸಮೀಪ ನಿಂತಾಗ ಸಮಯ ಸಹ ಈ ಕ್ಷಣ ಕಳೆಯದಿರಲಿ ಎಂಬ ನಮ್ಮ ಆಸೆಯನ್ನು ಅರಿತು ತಟಸ್ಥವಾಗಿತ್ತು!
ಚೇತೋಹಾರಿಯಾದ ಆ ಸನ್ನಿವೇಶಗ ಬಗ್ಗೆ
ಹೆಚ್ಚಿನದನ್ನು ಚಿತ್ರಗಳೇ ಹೇಳುವವು . ಮನ ಸೋತ ನನ್ನಿಂದಾಗದು ಸ್ವಲ್ಪ ವಿರಮಿಸಿ ನಂತರ ಸಿಗುವೆ
-ಸುಮನಾ