ಬಲು ಎತ್ತರಕೆ ಬೆಳೆದೆ ನೀ
ಆಲದ ಹೆಮ್ಮರ
ನಿನ್ನ ಆಶ್ರಯದಿ ಸ್ವಾಸ್ಥ್ಯ
ಪರಿಶ್ರಮದಿ ಬೆಳೆದಿರುವ
ಏಕಾಂಗಿ ವೀರ
ನಿನ ನೆಳಲ ತಂಪಿನಲಿ
ಆಯಾಸ ದೂರ
ನೀನಾದೆ ಸಂಕುಲಕೆ
ಬಲುಗಟ್ಟಿ ಆಧಾರ
ತಡೆಯುತಲಿ ಮಳೆ ಬಿಸಿಲ
ಬಿರುಗಾಳಿಯಬ್ಬರ
ಮೀರಿ ಬೆಳೆದಿಹೆ ನೀನು
ಗುರುತ್ವದ ಭಾರ
ಸೂರೆಗೊಂಡಿತು ಹಿರಿಮೆ
ಅದಕೆ ಪೂಜೆ ಪುನಸ್ಕಾರ
ಏಕೆೋ ಈಗ ಕೆಳ ಹರಿಸಿರುವೆ
ಇಷ್ಟೊಂದು ಬೇರ?
ಎಳೆ ಎಳೆಯ ಬಿಳಲುಗಳೋ
ಹೋಲುವವು ದಾರ!
ಇಳಿಯುತಿಹ ಬೇರುಗಳು
ಬಯಸಿವೆಯೆ ತೀರ?
ನೆಲದಾಳದಿ ಪುನ:
ಸೇರಬೇಕೇ ತಾಯಿ ಬೇರ
ಅಥವಾ..ತವಕವೇ ನಿನ್ನಲ್ಲಿ
ಒಯ್ಯಲು ನಿನ್ನೆತ್ತರಕೆ ಎಲ್ಲರ
ಅಲ್ಲದಿರೆ..ಸೆಳೆಯಿತೆೇ ನಿನ್ನನ್ನು
ನೆಲದ ಮಮಕಾರ?
ಸಂತೋಷವೆ? ಕೃತಜ್ಞತೆಯೆ?
ಏನ ಹೇಳ ಬಯಸಿಹೆ ಧೀರ
ನಿನ ಈ ಪರಿಯ ಅಭಿವ್ಯಕ್ತಿಯಲಿ
ಹುದುಗಿದ ಸಾಧ್ಯತೆ ಅಪಾರ!
-ಸುಮನಾ