Posted in ಕವನ

ಕವನ ಕೂಸು

ಯೋಚನೆಯ ಬೀಜವದು

ಚಿತ್ತಭಿತ್ತಿಯನು ಸೇರೆ

ಭಾವಪೋಷಣೆಯಲ್ಲಿ

ಕವನಕೂಸು ಹುಟ್ಟುವುದು!

ಭಾವನೆಗಳೆ ಉಸಿರಾಗಿ

ನವರಸಗಳೆ ಮೈಯಾಗಿ

ಸ್ಪಂದನೆಯ ಪುಷ್ಟಿಯಲಿ

ಈ ಕೂಸು ಬೆಳೆಯುವುದು!

ಅತಿ ಸೂಕ್ಷ್ಮ ಈ ಕೂಸು

ಲಹರಿಯಲಿ ನಕ್ಕೀತು

ಅಕ್ಕರೆಯಲಿ ತಬ್ಬೀತು

ರೋಷವನೆ ತೋರೀತು

ಬಂಡಾಯ ಹೂಡೀತು

ದು:ಖದಲಿ ಕನಲೀತು

ಸಾಂತ್ವನವ ಬಯಸೀತು

ಕಾರುಣ್ಯ ಹರಿಸೀತು

ಔದಾರ್ಯ ಮೆರೆದೀತು

ಆಟದಲಿ ಮೈಮರೆತಾಗ

ಆಟಿಕೆಯೊಂದು ಕೈತಪ್ಪಿ

ಮಣ್ಣ ವಾಸನೆಯ ಸೇರಿ

ಸೃಷ್ಟಿಯಲಿ ಲೀನವಾಗುವುದ ಕಾಣುತ್ತ

ಬಿದ್ದುಕೊಳುವುದು ಮತ್ತೆ ಮತ್ತೆ

ಬಲು ಅಶಕ್ತನಂತೆ!

ಸ್ಫುರಣಶಕ್ತಿಯನೀವ

ಭಾವಾಮೃತಕಾಗಿ ಕಾಯುತ್ತ

ನಿರ್ಮಲ ನಗೆಯ ಬೀರುತ್ತ!

-ಸುಮನಾ😊🙏🌹

Leave a Reply

Your email address will not be published. Required fields are marked *