ಯಾರಿತ್ತರು ಮುದ್ದಿನ ಮರಿಗೆ
ಮಿರಿಮಿರಿ ಬಿಳುಪಿನ ಸಾಕ್ಸು!
ಒಗೆಯಲು ಬೇಡ ಜಾರುವುದಿಲ್ಲ
ಯಾರೋ ತಿನ್ನಿಸಿ ಕಳಿಸಿರಬೇಕು
ಮುಖದಲಿ ಉಳಿದಿದೆ ಬಿಳಿ ಬೆಣ್ಣೆ!
ಕಾಡಿಗೆ ತೀಡಿ ಬಿಟ್ಟಿರಬೇಕು
ಸೆಳೆದಿದೆ ಸುಂದರ ಕಣ್ಣೆ!
ಸೂಕ್ಮದಿ ಗಮನಿಸೆ ಕಂಡಿದೆಯಲ್ಲ
ಹಣೆಯ ಮೇಲಿನ ನಾಮ!
ಮೂಕ ಮುಗ್ಧತೆಗೆ ಬಹಳವೆ ಮೆಚ್ಚಿ
ಬರೆಸಿದನೆ ಅದ ರಾಮ!
ಸ್ವಾಗತಕೆಂದು ಬೀಸುವೆ ನೀನು
ಉದ್ದನೆ ಚೆಂದದ ಬಾಲ!
ನಿನ್ನಯ ಆಟಕೆ ಮನ ಹಗುರಾಗಿ
ಮರೆತಿದೆ ಇಂದು ಕಾಲ!
ಸೋಲು ಇದ್ದರೂ ಗೆಲುತಲಿ ಬಂದರೂ
ಭೇದವಿಲ್ಲದ ಪ್ರೀತಿ!
ನಿವಾರಿಸಿ ದುಗುಡ ಮೂಡಿಸಿ ನಗುವ
ಬೋಧಿಪೆ ಬಾಳಿನ ನೀತಿ!
-ಸುಮನಾ