ಇಂದು ನಾನು ಹೇಳಹೊರಟಿರುವುದು, ಆ ದೇಶದಲ್ಲಿ ನಡೆದ ಒಂದು ಬರ್ಬರ ಕೃತ್ಯದ ಬಗ್ಗೆ..ಜನಾಂಗೀಯ ನರಮೇಧದ (Genocide) ಬಗ್ಗೆ..
ಈ ವಿಷಯವನ್ನು ಹೇಗೆ ಬರೆಯಲಿ?
ಕೈ ಕಂಪಿಸಿದೆ…ಮನಸು ತಲ್ಲಣಿಸಿದೆ…ಆದರೂ ಪ್ರಯತ್ನಿಸಿದ್ದೇನೆ
ರುವಾಂಡಾ ದೇಶದಲ್ಲಿ 1994ರಲ್ಲಿ ನಡೆದ ಆ ನರಮೇಧ ಮಾನವ ಜನಾಂಗದ ಇತ್ತೀಚಿಗಿನ ಇತಿಹಾಸದ ಒಂದು ಘೋರ ಅಧ್ಯಾಯ. ಹೂಟು ಮತ್ತು ಟುಟ್ಸಿ ಎಂಬ ಎರಡು ಜನಾಂಗಗಳು ರುವಾಂಡಾ ದೇಶದಲ್ಲಿ ನೆಲೆಸಿದ್ದಾರೆ. ವಸಾಹತುಶಾಹಿಗಳು ದೇಶವನ್ನು ಬಿಟ್ಟು ಹೋಗುವಾಗ ಸಣ್ಣ ಸಂಖ್ಯೆಯ ಜನಾಂಗವಾದ ಟುಟ್ಸಿಗಳಿಗೆ ಅಧಿಕಾರ ಬಿಟ್ಟುಕೊಟ್ಟಿದ್ದಾರೆ. ಅದು ಬಹುಸಂಖ್ಯೆಯ, ರುವಾಂಡಾದ ಮೂಲ ನಿವಾಸಿಗಳೆಂದು ಭಾವಿಸಿರುವ ಹೂಟು ಜನಾಂಗವನ್ನು ಕೆರಳಿಸಿದೆ. ಇದರ ಪರಿಣಾಮ ದೇಶವಾಸಿಗಳ ನಡುವೆ, ನೆರೆಹೊರೆಯವರ ನಡುವೆ, ಸ್ನೇಹಿತರ ನಡುವೆ, ತೀವ್ರ ಘರ್ಷಣೆ ಸಂಭವಿಸಿ, ಒಬ್ಬರನ್ನೊಬ್ಬರು ಕೊಲ್ಲುವಂತಹ ಮನಸ್ಥಿತಿಗೆ ಕೊಂಡೊಯ್ಯುತ್ತದೆ. ಸುಮಾರು ಹತ್ತು ಲಕ್ಷದಷ್ಟು ಜನರು ಈ ನರಮೇಧದಲ್ಲಿ ಕೊಲ್ಲಲ್ಪಟ್ಟು, ಈ ಅಮಾನವೀಯ ಪೈಶಾಚಿಕ ಕೃತ್ಯ ಇಡೀ ನಾಶಕ್ಕೆ ಕಾರಣವಾಗುತ್ತದೆ ಮಾತ್ರವಲ್ಲ, ಜನಾಂಗವನ್ನು ಪಶ್ಚಾತ್ತಾಪದ ಬೇಗುದಿಗೆ ತಳ್ಳುತ್ತದೆ..ಕಿಗಾಲಿಯ ಜಿನೋಸೈಡ್ ಮೆಮೋರಿಯಲ್ ಸೆಂಟರ್ ಈ ಎಲ್ಲ ಘಟನೆಗಳ ಚಿತ್ರಣವನ್ನು ಸಂದರ್ಷಕರಿಗೆ ನೀಡುತ್ತದೆ. ಇಲ್ಲಿ ಆ ಘಟನೆಯ ವಿವರಗಳು, ಚಿತ್ರಗಳು, ಕೊಲ್ಲಲ್ಪಟ್ಟವರ ಫೋಟೋ, ಬಟ್ಟೆ, ಎಲುಬು, ರುಂಡಗಳು, ಅನಾಥರಾಗಿ ಉಳಿದವರ ಕಥೆ, ಸಂದರ್ಶನಗಳ ವೀಡಿಯೋಗಳು ಇವೆಲ್ಲವೂ ಇವೆ.. ಸಾಮೂಹಿಕ ಅಂತ್ಯ ಸಂಸ್ಕಾರ ನಡೆದ ದೊಡ್ಡ ಆವರಣ ಪ್ರದೇಶವಿದೆ. ಇದೆಲ್ಲವನ್ನು ವೀಕ್ಷಿಸಿ ಹೊರಗೆ ಬಂದಾಗ ಉಳಿಯುವುದು ಗಾಢ ವಿಷಾದ ಹಾಗೂ ಮಾನವೀಯತೆಯನ್ನು ಕಾಯಬೇಕೆನ್ನುವ ಎಚ್ಚರ ಮಾತ್ರ..
ಆ ನಂತರದ ದಿನಗಳಿಂದ ದೇಶದ ಆಡಳಿತ ನಡೆಸುತ್ತಿರುವ ನಾಯಕ, ಪೌಲ್ ಕಗಾಮೆ ಅವರು, ಪುರವಾಸಿಗಳ ಕುಗ್ಗಿದ ಮಾನಸಿಕತೆಯನ್ನು , ಆರ್ಥಿಕತೆಯನ್ನು, ಹೇಗೆ ಸಾಮರಸ್ಯದ. ಬೆಳವಣಿಗೆಯ ದೃಷ್ಟಿಕೋನಕ್ಕೆ ತಿರುಗಿಸಿ, ಕೇಂದ್ರೀಕರಿಸಿದರು ಎಂಬುದು ಒಂದು ಅದ್ಭುತವೆಂದು ತೋರುತ್ತದೆ.. ಅವರು ಇದಕ್ಕಾಗಿ ಹೂಡಿದ
ಮಾರ್ಗೋಪಾಯಗಳೇನು,.. ತಂದ ಬದಲಾವಣೆಗಳೇನು ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ಹಂಚಿಕೊಳ್ಳುವೆ..
ಎಲ್ಲರಿಗೂ ವಂದೇ
-ಸುಮನಾ