ದೃಗ್ಗೋಚರವಾಗುವ ಮುನ್ನ
ಹೃದ್ಗೋಚರವಾಗುವುದು ಹೇಗೆ
ಸುಳಿವು ಸಿಗುವುದು ಹಾಗೇ!
ನಿನ್ನ ಒಳಗಲಿ ಅವಿತ ಬೇನೆ
ಬಿಡದೆ ಹಿಂಡುವುದೆನ್ನ ಹೇಗೋ ಕಾಣೆ
ಹಂಚಿಹೋಗಲು ಒಡಲ ಯಾತನೆ
ಮುದದಿ ಮುಂದಡಿ ಬಾಳ ಮೇನೆ!
ನಿನ್ನ ಚಿತ್ತದಿ ಉತ್ಕೃಷ್ಟ ಯೋಚನೆ
ಒಡನೆ ಮೂಡಿಸಿ ಎನ್ನಲೂ ಸತ್ಚಿಂತನೆ
ರೂಪುಗೊಳ್ಳಲು ಕಾರ್ಯ ಯೋಜನೆ
ನೇರ್ಪುಗೊಳುವುದೆಲ್ಲವು ತಂತಾನೇ!
ಭಾವ ಬಂಧದ ಅದೃಶ್ಯ ಹಂದರ
ಹರಡಿತೀ ಬಗೆ ಅಂತರ್ಜಾಲದುಂಗುರ
ದೃಗ್ಗೋಚರವಾಗುವ ಮುನ್ನವೆ
ಹೃದ್ಗೋಚರವಾಗಿಸುತ ಎಲ್ಲವ!
-ಸುಮನಾ