ನೀಲ ಸುವಿಶಾಲ ಅಂಬರದಡಿ
ನೀಲಿವರ್ಣದ ಈ ಸುಮರಾಜಿ
ತಲ್ಲೀನವೀ ಮನ ಬಹುವಿಧಧ್ಯಾಸದಲ್ಲಿ
ಇದು..
ದೇವದೇವಿಯರ ಲಲಾಟ ಮಧ್ಯದಿ
ಶೋಭೆಗೊಳ್ಳುವ ನೀಲತಿಲಕವೇ
ನೀಲಕಂಠನ ಪಾದಪೂಜೆಗೆ
ನೂಲುಗೊಂಡಿಹ ನೀಲಿಹಾರವೇ?
ನೀಲಾಂಬರನ ಬಯಲು ಆಲಯದಿ
ಬೆಳಗುತಿಹ ನೀಲಪ್ರಣತಿಯೇ?
ಚೆಲುವಕಣ್ಣನ ಶಿರಕಿರೀಟದಿಂ
ಮೆಲ್ಲನುದುರಿದ ನವಿಲಗರಿಯೇ
ನಲುಮೆದೋರುವ ಪ್ರಕೃತಿಮಾತೆಯ
ಒಲುಮೆ ಸಾರುವ ನಯನವೇ?
ವಿಶ್ವರೂಪದ ಸಣ್ಣ ತುಣುಕಲಿ
ಪುಳಕಗೊಂಡಿತು ಮೈಮನ
ದೃಷ್ಟಿಯಂತೆಯೆ ಸೃಷ್ಟಿಯಿದುವು
ಸ್ವರ್ಗಸುಖವು ಈ ಕ್ಷಣ
-ಸುಮನಾ