Posted in ಸಣ್ಣ ಕತೆ

ಇಂತಹವರೂ ಇದ್ದಾರೆ

ಕೊರೋನಾ ಕಾರಣ ನಗರಾಡಳಿತ ಊರಿನಲ್ಲಿ ಬಂದ್ ಆಜ್ಞೆ ನೀಡಿತ್ತು. ಅದರಂತೆ, ವಾರದ ದಿನಗಳಲ್ಲಿ ಬೆಳಿಗ್ಗೆ ಆರರಿಂದ ಒಂಬತ್ತರವರೆಗೆ ದಿನನಿತ್ಯೋಪಯೋಗಿ ಸಾಮಾನು ಖರೀದಿಗೆ ಅವಕಾಶ. ಪೋಲಿಸ್ ಇಲಾಖೆಯವರು ದಂಡ ಹಾಕುವುದರಿಂದ ಒಂಭತ್ತು ಗಂಟೆಗೆ ಸರಿಯಾಗಿ ಎಲ್ಲ ಅಂಗಡಿಯವರು ಬಾಗಿಲು ಹಾಕುತ್ತಾರೆ. ಕಲ್ಪನಾ ಪಟ್ಟಿ ಮಾಡಿಕೊಂಡು, ಬೆಳಿಗ್ಗೆ ಬೇಗನೆ ಹೋಗಿ ಒಂದು ವಾರಕ್ಕೆ ಬೇಕಾಗುವ ಸಾಮಾನು ತರುತ್ತಾಳೆ. ಈ ಸಲ ಹಾಗೆ ಹೋಗುವಾಗ ಮೆಡಿಕಲ್ ಶಾಪ್ ಗೂ ಭೇಟಿಕೊಟ್ಟು ತಂದೆ ತಾಯಿಗೆ ಬೇಕಾಗುವ ಬಿ.ಪಿ., ಶುಗರ್ ಮಾತ್ರೆಗಳು ಹಾಗೂ ತನಗೆ ಆಫೀಸಿನಲ್ಲಿ ಬೇಕಾಗುವ ಸಾನಿಟೈಸರ್ ಖರೀದಿಗೆ ಅಂತ ಮನೆಯಿಂದ ಸ್ವಲ್ಪ ದೂರದಲ್ಲೇ ಇರುವ ಪರಿಚಿತರ ಮೆಡಿಕಲ್ ಶಾಪಿಗೆ ಹೋಗಿದ್ದಾಳೆ.

ಶಾಪ್ ಓನರ್ ಅಜಿತ್ ಅವರು ಹೊರರಾಜ್ಯದಿಂದ ಬಂದು ಈ ಊರಲ್ಲಿ ನೆಲೆಸಿದವರು. ಇಲ್ಲಿನ ಭಾಷೆ ಬಹುಮಟ್ಟಿಗೆ ಕಲಿತು ಜನರೊಂದಿಗೆ ಬೆರೆತು ಇದ್ದಾರೆ.. ಮಾತ್ರವಲ್ಲ ತಮ್ಮ ಸಜ್ಜನಿಕೆಯಿಂದ ಆ ಸರಹದ್ದಿನಲ್ಲಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಭೇಟಿಯಾದಾಗ, ಇಂಗ್ಲಿಷ್ ಮಿಶ್ರಿತ ಕನ್ನಡದಲ್ಲಿ ಪರಸ್ಪರ ಕ್ಷೇಮ ಸಮಾಚಾರ.. ಲೋಕಾಭಿರಾಮ ಮಾತುಕತೆ..ಇದ್ದೇ ಇದೆ.

ಹಿಂದಿನ ಸಲ ಖರೀದಿಸಿದ್ದ ಬ್ರಾಂಡ್ ನ ಸಾನಿಟೈಸರ್ ಅನ್ನೇ ಕಲ್ಪನಾ ಈ ಸಲವೂ ಕೊಳ್ಳಲು ಬಯಸಿ, ಬೇರೆ ಮದ್ದುಗಳೊಂದಿಗೆ, ಎರಡು ಬಾಟಲ್ ಸಾನಿಟೈಸರ್ ಕೊಡುವಂತೆ ಬೇಡಿಕೆ ಇಟ್ಟಳು. ಆಶ್ಚರ್ಯ..ಕಳೆದ ಸಲ ನೂರು ರೂಪಾಯಿ ಇದ್ದ ಆ ಸಾನಿಟೈಸರ್ ಬಾಟಲಿಗೆ ಈ ಸಲ ಮುನ್ನೂರು..! ಅಜಿತ್ ಸಂಕೋಚದಿಂದ ಕ್ರಯ ಹೇಳುತ್ತಿದ್ದಂತೆ..’ಏನು ಮಾಡುವುದು. ಬಹಳ ದುಬಾರಿಯಾಗಿದೆ. ಇರಲಿ ಬಿಡಿ. ಆದರೆ ಎರಡು ಬೇಡ, ಒಂದು ಬಾಟಲ್ ಕೊಡಿ’ ಅಂದಳು ಕಲ್ಪನಾ.

ಆಗ ಶಾಪ್ ಓನರ್ ಅಜಿತ್ ಕಲ್ಪನಾರಿಗೆ ‘ನನ್ದದೊಂದು ಸಲಹೆ..ದಯಮಾಡಿ ನೀವು ಅದನ್ನು ತೆಗೆದುಕೊಳ್ಳುವುದು ಬೇಡ.. ಅದನ್ನು ನಾನು ಬೇಡವೆಂದರೂ ಒತ್ತಾಯಿಸಿ ಸ್ವಲ್ಪ ಸ್ಟಾಕ್ ಇಟ್ಟು ಹೋಗಿದ್ದಾರೆ. ಈ ಕಷ್ಟದ ಸಂದರ್ಭದಲ್ಲಿ ಕೆಲವು ಕಂಪನಿಯವರು ಕೊರೋನಾ ಚಿಕಿತ್ಸೆ ಗೆ ಬೇಕಾಗುವ ಫೇಸ್ ಮಾಸ್ಕ್, ಸಾನಿಟೈಸರ್, ಆಕ್ಸಿಮೀಟರ್, ಆಕ್ಸಿಜನ್ ಕಾನ್ಸೆನ್ಟ್ರೇ ಟರ್ ಇವುಗಳ ಬೆಲೆ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಮಾಡಿದ್ದಾರೆ. ನಮಗೂ ಹೆಚ್ಚಿನ ಮಾರ್ಜಿನ್ ಕೊಡುವುದಾಗಿ ಪ್ರಲೋಭನೆ ಮಾಡುತ್ತಾರೆ..ನನಗೆ ಇದು ಗೊತ್ತಾದ ಮೇಲೆ ಅಂತಹ ಕಂಪೆನಿಗಳೊಂದಿಗೆ ವ್ಯವಹಾರ ಮಾಡುತ್ತಿಲ್ಲ..ಜನರು ಈ ರೀತಿ ಕಷ್ಟ ಪಡುತ್ತಿರುವಾಗ ಲೂಟ್ ಮಾಡುವುದನ್ನು ಮನಸ್ಸು ಒಪ್ಪುತ್ತಿಲ್ಲ. ಅದೇ ಗುಣಮಟ್ಟದ ಇನ್ನೊಂದು ಸಾನಿಟೈಸರ್ ಇದೆ.ಇದರ ಬೆಲೆ ರೀಸನೆಬಲ್ ಇದೆ, ಇದನ್ನು ತೆಗೆದುಕೊಳ್ಳಿ’ ಅಂದಾಗ , ಕಲ್ಪನಾ ಸಮ್ಮತಿಸಿ ಅಗ್ಗದ ಬೆಲೆಯ ಆ ಸಾನಿಟೈಸರ್ ಪಡೆದುಕೊಂಡು ಹೊರಟಳು.

ತನಗೆ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಗಳಿಸಲು ಅವಕಾಶ ಇರುವಾಗ ಈ ರೀತಿ ಮಾನವೀಯ ನೆಲೆಯಲ್ಲಿ ಯೋಚನೆ ಮಾಡುವವರು ಅಪರೂಪ. ಮಾತಿನ ಮಧ್ಯೆ ಅಜಿತ್ ಹೇಳಿದ ಮಾತು ‘this looting may go on for sometime..but I will not succumb..Madam..life has to go on…life is long..I want to live without regrets’…(ಈ ತರಹದ ಸುಲಿಗೆ ಸ್ವಲ್ಪ ಸಮಯ ನಡೆಯಬಹುದು..ನಾನು ಇದಕ್ಕೆ ಒಳಗಾಗಲಾರೆ..ಜೀವನ ಮುಂದುವರಿಯಬೇಕಲ್ಲ..ಬಹಳ ದೂರ ಹೋಗಲಿಕ್ಕಿದೆ..ನಾನು ಪಶ್ಚಾತ್ತಾಪವಿಲ್ಲದ ಜೀವನ ನಡೆಸಬೇಕೆಂದಿದ್ದೇನೆ) ಅಂದದ್ದು ಕಲ್ಪನಾಳ ಕಿವಿಯಲ್ಲಿ ಬಹಳ ಹೊತ್ತು ಮಾರ್ದನಿಸುತ್ತಿತ್ತು.

-ಸುಮನಾ

Leave a Reply

Your email address will not be published. Required fields are marked *