Posted in ಕವನ

ಪ್ರಕೃತಿ

ಸ್ವರಭರಿತವು ಪ್ರಕೃತಿಯ ಅಂಕಣ
ಅಸಾಧ್ಯವು ಪೂರ್ಣ ಅರ್ಥಗ್ರಹಣ
ಕ್ಲಿಷ್ಟವು ಧ್ವನಿಗಳ ಪುನರುಚ್ಚರಣ
ಗೂಢವೀ ಭಾಷೆಯ ವ್ಯಾಕರಣ

ಪ್ರಾತಃ ಕಾಲದಿ ಕೇಳ್ವುದು ಅನುದಿನ
‘ಜೀರ್ ಜೀರ್’ ಸ್ವರದ ಅನುರಣನ
ಕ್ರಿಮಿಕೀಟದ ಆರ್ತ ಆಲಾಪನ
ತಿಳಿಯದು ಕಾರಣ;ಅರಿಯದು ಹೂರಣ

ಗಾಳಿಯ‌ ಬೀಸಿಗೆ ಬಗೆಬಗೆ ಕಂಪನ
ಇದ ಬರೀ ‘ಸುಂಯ್’ ಎನೆ ಸರಳೀಕರಣ
ವೇಗಕೆ ಅನುಗುಣ ರವ ಬದಲಾವಣ
ಕಷ್ಟವು ಈ ಪರಿಭಾಷೆಯ ಅನುಕರಣ

ಓಡುವ ನೀರಿನ ತರತರಹದ ನರ್ತನ
‘ಜುಳು ಜುಳು’ ಎಂದರೆ ಅರೆಬರೆ ವರ್ಣನ
ಮಳೆಗಾಲದಿ ಸುರಿವ ಮಳೆಯ ಗಾಯನ
‘ಧೋ ಧೋ’ ಎನಲದು ಅಪರಿಪೂರ್ಣ

ಹಾಡುವ ಹಕ್ಕಿಯ ರಾಗಾಧ್ಯಯನ
‘ಚೀವ್ ಚುವ್’ ಎಂದೆನಿಸುವುದರೆಕ್ಷಣ
ಗಮನಿಸಿ ಆಲಿಸೆ ಪುನಃ:ಪುನಃ:
ತಿಳಿವುದು ಅವಿತಿಹ ಪಲ್ಲವಿ ಚರಣ

ಗ್ರಹಿಕೆಯ ಮಿತಿಯಲಿ ಸ್ವರಗಳ ಮನನ
ದೊರೆವುದು ಮನುಜಗೆ ಪಾರ್ಶ್ವದರ್ಶನ
ಸಹನೆಯ ನಿಕಷದಿ ಸೂಕ್ಷ್ಮ ವಿಚಕ್ಷಣ
ಸಾಕ್ಷಾತ್ಕಾರವು ಲಯ ತಲ್ಲೀನದ ದಿವ್ಯಕ್ಷಣ

Leave a Reply

Your email address will not be published. Required fields are marked *