ಸದಾ ಲವಲವಿಕೆಯಿಂದಿರುವ ಸುಮತಿಗೆ ಈಗ್ಗೆ ನಾಲ್ಕು ದಿನದಿಂದ ಯಾವ ವಿಷಯದಲ್ಲೂ ಹೆಚ್ಚಿನ ಆಸಕ್ತಿಯಿಲ್ಲ. ದಿನಾಲು ಸಂಜೆ ಮನೆಯೆದುರಿನ ಹೂತೋಟದ ಆರಾಮ ಕುರ್ಚಿಯಲ್ಲಿ ಕುಳಿತು ಗೇಟಿನ ಕಡೆ ನೋಡುತ್ತಾ, ಯೋಚನೆಯಲ್ಲಿ ಮುಳುಗುತ್ತಾರೆ. ಒಮ್ಮೆ ನಿಡುಸುಯ್ಯುತ್ತಾರೆ.. ಮತ್ತೊಮ್ಮೆ ನೀಳ ಉಸಿರು ಎಳೆದು ಶೂನ್ಯದಲ್ಲಿ ದೃಷ್ಟಿ ನೆಡುತ್ತಾರೆ. ದಿನಾಲೂ ಇದೇ ನಡೆಯುತ್ತಿದೆ..ಯಾಕೆ ಹೀಗೆ…
ಸುಮತಿಗೆ ಅವರ ಅಣ್ಣನೆಂದರೆ ಬಹಳ ಪ್ರೀತಿ. ಇಷ್ಟು ವರ್ಷ ಉದ್ಯೋಗದ ನಿಮಿತ್ತ ಬೇರೆ ಕಡೆ ವಾಸಿಸುತ್ತಿದ್ದ ಅಣ್ಣ, ನಿವೃತ್ತ ರಾದ ನಂತರ ಸುಮಾರು ಒಂದು ವರ್ಷದಿಂದ ಊರಲ್ಲೇ ಇದ್ದಾರೆ. ಶಿಕ್ಷಕಿಯಾದ ಸುಮತಿ ಸಂಜೆ ಶಾಲೆಯಿಂದ ಬಂದು ಸುಧಾರಿಸಿಕೊಳ್ಳುವಷ್ಟರಲ್ಲಿ, ಅಣ್ಣ- ಅತ್ತಿಗೆ ಕಾರಿನಲ್ಲಿ, ಸುಮತಿಯ ಮನೆಗೆ ಬರುವುದು ಇತ್ತೀಚಿನ ರೂಢಿ. ಕಾಫಿ ಪ್ರಿಯನಾದ ಅಣ್ಣನಿಗೆ, ಕಾಫಿ ಮೇಕರ್ ನಲ್ಲಿ ಸುಮತಿ ಮಾಡುವ, ಘಮ್ಮೆನುವ ಕಾಫಿ ಕುಡಿಯುವುದೆಂದರೆ ಬಹಳ ಇಷ್ಟ. ದಿನಾಲು ತನ್ನ ಮನೆಯ ಕಾಫಿಗಿಂತ ಸುಮತಿ ಮಾಡಿದ ಕಾಫಿ ರುಚಿ ಎಂದು ಅಣ್ಣ ಹೇಳುವುದು, ಅತ್ತಿಗೆ ಹುಸಿ ಮುನಿಸು ತೋರುವುದು ನಡೆಯುತ್ತಲೇ ಇರುತ್ತದೆ…ಕಾಫಿ, ತಿಂಡಿಯ ನಂತರ ಪಟ್ಟಾಂಗ, ಹರಟೆ, ನಗು, ತಮಾಷೆ ಎಲ್ಲ.. ರಾತ್ರೆ ಸುಮಾರು ಎಂಟು ಗಂಟೆಗಳ ತನಕ… ನಂತರವೇ ಅಣ್ಣ ವಾಪಾಸು ತನ್ನ ಮನೆಗೆ ಹೋಗುವುದು. ಸುಮತಿಗೆ ಅಣ್ಣ ಎಂದರೆ ಆಪ್ತ ಸ್ನೇಹಿತ, ಗುರು, ಮಾರ್ಗದರ್ಶಕ ಎಲ್ಲವೂ ಹೌದು. ಹೀಗಿರುವಾಗ, ಅಣ್ಣ-ಅತ್ತಿಗೆ ಕಳೆಧ ನಾಲ್ಕು ದಿನದಿಂದ ತನ್ನ ಮನೆಗೆ ಬಂದಿಲ್ಲ ಯಾಕೆ? ಎನ್ನುವುದೇ ಸುಮತಿಯ ಗಾಢ ಯೋಚನೆಗೆ ಕಾರಣ.
ಕಳೆದ ಭಾನುವಾರ ಅಣ್ಣನ ಹುಟ್ಟುಹಬ್ಬದ ಆಚರಣೆ ಸುಮತಿಯ ಮನೆಯಲ್ಲೇ ನಡೆದಿತ್ತು. ಎಷ್ಟು ಸಂತೋಷದಲ್ಲಿದ್ದರು ಆ ದಿನ ಅಣ್ಣ- ಅತ್ತಿಗೆ ..ಆ ನಂತರ ಒಂದು ದಿನವೂ ಬಂದಿಲ್ಲ. ತಿಳಿದುಕೊಳ್ಳಲು ಮಧ್ಯಾನ್ಹದ ಊಟದ ಬಿಡುವಿನಲ್ಲಿ ಫೋನ್ ಮಾಡಿದಾಗ, ಅತ್ತಿಗೆ, ಒಂದು ದಿನ ‘ಊಟ ಮಾಡುತ್ತಿದ್ದೇವೆ’ ಅಂತ.. ಇನ್ನೊಮ್ಮೆ..’ಅಣ್ಣ ಮಲಗಿದ್ದಾರೆ’… ಅಂತ ಚುಟುಕಾಗಿ ಹೇಳಿದ್ದಾರೆ. ಆದರೆ ದಿನಾ ಸಾಯಂಕಾಲ ಬರುತ್ತಿದ್ದವರು ಬರುತ್ತಿಲ್ಲವೆಂದರೆ ಏನೋ ಬೇಸರ ಇರಬೇಕು. ತಾನೇನಾದರೂ ಗೊತ್ತಿಲ್ಲದೆ ಅವರ ಮನಸ್ಸು ನೋಯಿಸಿದೆನೇ…. ಎಂದು ಸುಮತಿ ಯೋಚನೆಗೀಡಾದರು. ಗಂಡ ಮಕ್ಕಳು ಕೂಡ ಗಮನಿಸಿ ಈ ಬಗ್ಗೆ ಕೇಳಿದಾಗ ಹಾರಿಕೆಯ ಉತ್ತರ ಕೊಟ್ಟರು. ತನ್ನ ಪ್ರೀತಿಯ ಅಣ್ಣನನ್ನು ಬಿಟ್ಟು ಕೊಡಲಾಗುತ್ತದೆಯೇ. ದೇವರಂತಹ ಅಣ್ಣ ಅತ್ತಿಗೆ ಪಡೆದಿದ್ದೇನೆ ಎಂದುಕೊಂಡಿದ್ದೆ. ಯಾಕೆ ಹೀಗಾಯಿತು.. ಅನ್ಯಮನಸ್ಕತೆ ಕಾಡಿತು.
ಅಂದು ಶುಕ್ರವಾರ.. ಅಣ್ಣ ಬರದೇ ಐದನೇ ದಿನ. ಆಫೀಸಿಗೆ ರಜೆ ಮಾಡಿದ ಸುಮತಿ, ತಾನು ಹೀಗೇ ಯೋಚಿಸಿ, ಯೋಚಿಸಿ ಬೇಯುವುದಕ್ಕಿಂತ ಅಣ್ಣನ ಮನೆಗೆ ಬಸ್ಸಿನಲ್ಲಿ ಒಬ್ಬಳೇ ಹೋಗಿ ಬರುತ್ತೇನೆ.. ಕಾರಣವೇನು ಎಂದು ನೇರವಾಗಿ ತಿಳಿದುಕೊಳ್ಳುತ್ತೇನೆ ಎಂದುಕೊಂಡರು. ಆ ದಿನ ಮನೆಯ ಕೆಲಸ ಮುಗಿಸಿ ಮಧ್ಯಾಹ್ನ ಮೂರೂವರೆ ಹೊತ್ತಿಗೆ ಸಿಟಿ ಬಸ್ಸಿನಲ್ಲಿ ಹೊರಟ ಸುಮತಿ, ಸುಮಾರು ನಾಲ್ಕು ಗಂಟೆಗೆ ಅಣ್ಣನ ಅಪಾರ್ಟ್ಮೆಂಟ್ ನ್ನು ತಲುಪಿದರು. ತೆರೆದಿದ್ದ ಕಿಟಕಿಯಿಂದ ಅಣ್ಣ -ಅತ್ತಿಗೆ ನಗುತ್ತಾ ಏನೋ ಮಾತನಾಡುತ್ತಿರುವುದು ಕೇಳಿತು..ಏನು ಕಾದಿದೆಯೋ..ಹೃದಯ ಡವಗುಟ್ಟುತ್ತಿದ್ದಂತೆ, ಗಂಟಲು ಸರಿಪಡಿಸಿಕೊಂಡು ಸುಮತಿ ಕರೆಗಂಟೆ ಒತ್ತಿದರು. ಆ ಕಡೆಯಿಂದ ಬಾಗಿಲು ತೆರೆದ ಅಣ್ಣ…ಸುಮತಿಯನ್ನು ಕಂಡು ಆಶ್ಚರ್ಯ ರಿಂದ ಬಾಯ್ತೆರೆದು ನಗುತ್ತಾ, ‘ ಹೋ ಹೋ…ಸುಮತೀ…ನೀನೇ ಬಂದ್ಯಾ..ಬಾ.. ಬಾ..ಕುತ್ಕೋ.. ಬಹಳ ಒಳ್ಳೆಯದಾಯಿತು..ಸಾರಿ ಸುಮತೀ.. ನಾವಿಬ್ಬರೂ ನಾಲ್ಕು ದಿನದಿಂದ ದಿನಾ ಸಂಜೆ ನಿನ್ನ ಮನೆಗೆ ಹೊರಡುವಾ ಎಂದುಕೊಳ್ಳುವುದು.. ಮತ್ತೆ… ಏನಾಯ್ತು ಗೊತ್ತಾ..ನೀನು ನನ್ನ ಬರ್ತ್ ಡೇಗೆ ಉಡುಗೊರೆಯಾಗಿ ನೀಡಿದ್ದ ಕಾಫಿ ಮೇಕರ್ ನಲ್ಲಿ ಫಸ್ಟ್ ಕ್ಲಾಸ್ ಕಾಫಿ ಮಾಡಿ ಕುಡಿಯುತ್ತಾ ಕುಡಿಯುತ್ತಾ ಇಲ್ಲೇ ಬಾಕಿ..ದಿನಾ ಇದೇ ಕತೆ. ನೀನು ನನಗೆ ತುಂಬಾ ಒಳ್ಳೆಯ ಉಡುಗೊರೆ ಕೊಟ್ಟದ್ದೀಯಾ..ಈಗ ನಾನೇ ನಿನಗೆ ಕಾಫಿ ಮೇಕರ್ ನಲ್ಲಿ ಒಂದು ಕಾಫಿ ಮಾಡುತ್ತೇನೆ..ಎಷ್ಟು ಚೆನ್ನಾಗಿರುತ್ತದೆ ನೋಡು.. ಎಂದು ಅನ್ನುತ್ತಾ ಇದ್ದಂತೆ ಸುಮತಿಗಯ ತಲೆಯ ಭಾರವೆಲ್ಲ ಜರ್ರನೆ ಇಳಿದು ಹೋಯಿತು,
ತಾನು ಅಣ್ಣನಿಗೆ ಕಾಫಿ ಇಷ್ಟ ಅಂತ ಕಾಫಿ ಮೇಕರ್ ನ್ನು ಉಡುಗೊರೆಯಾಗಿ ಕೊಟ್ಟದ್ದು ಇಷ್ಟು ಪೇಚಾಟಕ್ಕೆ ಕಾರಣವಾಯಿತಲ್ಲಪ್ಪಾ.. ಎಂದರಿತೊಡನೆ, ಉಕ್ಕಿ ಬಂದ ನಗುವನ್ನು ತಡೆದುಕೊಂಡು, ಅಣ್ಣ-ಅತ್ತಿಗೆಯೊಡನೆ ಎಂದಿನಂತೆ ಲಘು ಹರಟೆಯಲ್ಲಿ ತೊಡಗಿದರು ಸುಮತಿ.