ಫಲವಸ್ತು ದಿನಸಿಗಳ
ಚೀಲಗಳ ಹೊತ್ತು ಮನೆಗೆ ನಡೆದಿರುವಾಗ
ಹೇಳದಿದ್ದರು ಬಳಿಬಂದು
ಬಲು ಜತನದಲಿ ಕೈಭಾರ ಹಂಚಿಕೊಂಡಾಗ…
ಬಿರುಬಿಸಿಲಿಗೆ ಬಳಲಿ
ವಿರಮಿಸಲು ಒಳನಡೆದಾಗ
ಮರುಕ್ಷಣದಿ ಕೇಳದೆಯೆ ಬಂತು
ನೊರೆಮಜ್ಜಿಗೆ ಲೋಟದಾಗ…
ದುಡಿದು ದಣಿವಾಯಿತೆಂದು
ಒಡನೆ ಒರಗಿರುವಾಗ
ನುಡಿಯದೆಯೆ ಬಳಿಸಾರಿ
ಸಿಡಿ ಹಣೆಯ ನೇವರಿಸಿದಾಗ…
ತಂಗಾಳಿಯೊಲು ತಂಪು ಆಯಾಸ ಮಾಯ
ಅಂಗಾಂಗದಲಿ ಮೂಡಿ ಪುನರುತ್ಸಾಹ
ಇಂಗಿತಜ್ಞತೆಯ ತೋರೆ ಜೀವನವು ಸಹ್ಯ
ಅಂಗೈಲಿ ಅರಮನೆಯು ನಿಜವೆನಿಸಿತಯ್ಯ