ಹುಲ್ಲು ಪ್ರಭೇದವೊಂದರಲಿ ಹುಟ್ಟಿ
ಅಲ್ಲೆ ಕಾನನದ ಕತ್ತಲ ಮೂಲೆಗಳಲಿ
ಹುಲ್ಲು ಗಿಡಗಳ ಸೌಖ್ಯದೊಡನಾಟದಲಿ
ಲಲ್ಲೆಯಾಡುತ ಇರಬಹುದಿತ್ತು..ಆದರೆ
ದೈತ್ಯಹುಲ್ಲಾದೆ ವಾಡಿಕೆಯ ಮೀರಿ
ಅಂತ್ಯವಿಲ್ಲದ ಅಮಿತೋತ್ಸಾಹ ತೋರಿ
ಬೆಳೆದೆ ಎತ್ತರೆತ್ತರಕೆ ಹಾರಿ
ತೋರುತ ವೇಗೋತ್ಕರ್ಷದ ಪರಿ
ತ್ರಿವಿಕ್ರಮನಾಗಿ ಬೆಳೆದ ವಾಮನ
ತ್ರಿಜಗವನು ಅಳೆದಂತೆ ಜಾಣ್ಮೆಯಲಿ
ಪ್ರೋತ್ಸಾಹದ ಮಾತಿಗೆ ಹನುಮ
ಸಮುದ್ರೋಲ್ಲಂಘನಗೈದ ರೀತಿಯಲಿ
ಸಾಹಸಿ ನೀನು ನಭವನು ಮುಟ್ಟಿ
ಸ್ವರ್ಗದೊಡೆಯನ ಮನೆಬಾಗಿಲನು ತಟ್ಟಿ
ಅಮೃತವ ಹೀರಿ ಭೂಮಿಗೆ ತಂದು ಕೊಟ್ಟಿ
ದಿಟ್ಟಶರ್ಕರದ ಹುಲ್ಲೇ ನಿನಗ್ಯಾರು ಸಾಟಿ?