ನಿಲುವುಗನ್ನಡಿಯ ಮೇಲೆ
ಧೂಳು ಹಿಡಿಯಬಹುದು ನೋಡು ಮಗಾ
ಕಾಲಕಾಲಕೆ ಸ್ವಚ್ಛ ಮಾಡದಿರೆ
ಕಲಸಿಟ್ಟಂತೆ ಕಾಣುವುದು ಮೊಗ
ಬಲ್ಲೆ ನಿನ್ನೊಳಗ; ನನ್ನ ಹೆಮ್ಮೆಯ ಚೆಲುಪೋರ
ನಿಲುಗನ್ನಡಿ ಎತ್ತರಕೆ ಬೆಳೆದೆಯಲ್ಲ! ನಿನ್ನ-
ಎಳಸು ಕಣ್ಣಕನ್ನಡಿಯ ಎನ್ನ ಕಣ್ಣಲಿ ಕಂಡಿದ್ದೆ;ನೀ-
ಕೆಳಬಾಗಬೇಕೀಗ ನನ್ನೆತ್ತರಕೆ; ಕಣ್ಣು ಕೂಡಲಿಕೆ!
ಬೆಳೆದಿಹೆ ನೀನು; ಈಗಿರುವೆ ಕಾರ್ಯರಂಗದಲಿ
ಸೆಳೆದಿಹುದು ನಿನ್ನನು; ಕ್ಷೇತ್ರದ ಕಾರ್ಯಬಾಹುಳ್ಯ
ಎಳೆಎಳೆಯಲಿ ಅನ್ವಯಿಸೆ; ಪಾರದರ್ಶಕ ಮಾರ್ಗ
ಹೊಳೆಯುವೆಯ ಎಂದಿಗೂ ತಿಳಿಕನ್ನಡಿಯ ತೆರದಿ
ಬರಿಯ ಮಾತಲ್ಲವಿದು;ಮಾತೃಹೃದಯದ ಮಿಡಿತ
ಮರಿ, ನೀನೆನಗೆ ಬೇರೆಯಲ್ಲ;ನನ್ನೆದೆಯ ಬಡಿತ
ಕಳಕಳಿಯಲಿ ಸುರಿಯುತಿಹೆ ಒಲವಿನ ವಾರಿಧಿ
ಫಳಫಳಿಸು ನೀನೆಂದಿಗೂ ದರ್ಪಣದ ರೀತಿಯಲಿ.