ನಿಶ್ಶಬ್ದದ ಗಾನವಿದೆಷ್ಟು ಮಂಜುಳ
ಅತಿ ಮಧುರವೀ ಮೌನಾಲಾಪ
ಮನದಾಳದ ತಾಳದ ಜಾಡಲಿ
ಸಾಗಿ ಸಾಗಿ ಹಿಡಿದೆನೀ ಆನಂದ ಲಯll
ಲಯ ಹರಿದ ಎಚ್ಚರ, ಎಲಾ! ಇದು ಯಾತರ ಗೀತ?
ಕರ್ನಾಟಕೀ, ಹಿಂದುಸ್ತಾನಿ ಸಂಗೀತ?
ಇದಾವ ಭಜನೆ ಅಥವಾ ಭಾವಗೀತ?
ಏನೂ ತಿಳಿಯುತ್ತಿಲ್ಲ, ಇದು ವರ್ಣನಾತೀತll
ಯಾವುದೋ ಮೊರೆತ ; ಅದಮ್ಯ ಸೆಳೆತ
ಶಬ್ದಕೆ ನಿಲುಕದ ಈ ಸಂಗೀತ
ಸ್ವರದ ಹರವು ಮೀರಿದ ಈ ಆಲಾಪ
ಬೆರಳ ಗಣಿತದಾಚೆಗಿನ ಈ ತಾಳ
ಅರಿವಿನ ಪರಿಧಿಯ ಹೊರಗಿನ ಈ ಲಯll
ಇದಕೆನಲೆ ಧ್ಯಾನ ಸಂಗೀತ..?