ಮಧುಮಲ್ಲಿಗೆ ಹೂವಿನ ಈ ಬಲ್ಲೆ(ಪೊದೆ) ನೋಡಿದಾ ಮರು ಕ್ಷಣ;
ನನ್ನ ನೆನಪಿನ ಬಂಡಿಯು ಶುರು ಹಚ್ಚಿತು ದೀರ್ಘ ಹಿಂಪಯಣ.
ಬೆಟ್ಟದಾ ಬುಡದಲ್ಲಿ, ಕಾಡಿನಾ ಅಂಚಿನಲಿ,
ಇಹುದೆನ್ನ ತವರು ‘ಪಾರ್ವತೀ ಸದನ’;
ತಂಪು ತವರ ಮನೆ ಹಿಂದೆ, ಈ ಹೂಗಳದೇ ರಾಜ್ಯ, ಕಲ್ಲು ಬಂಡೆಗಳೆ ನಮ್ಮ ಸಿಂಹಾಸನ!
ಅಲ್ಲಿ ಮೇಯುವ ದನಕರುಗಳೊಡನಾಟ, ಕೊರಳ ಗಂಟೆಯ ಟಣಟಣ;
ಕೋಗಿಲೆಯ ಕೂಜನ, ತಂಗಾಳಿ ಸಿಂಚನ
ಇಷ್ಟೆಲ್ಲಾ ಇದ್ದರೂ……..
ಅಮ್ಮ, ಅದೇಕೋ ಎಮಗಾಲಸ್ಯ, ಏನು ಮಾಡವುದು ಹೇಳು ಎಂದು ಪಂಚರತ್ನ!!!!!
ಗಳು ನಾವು ಕಾಡುತಿದ್ದೆವು ಅವಳ ಬಹಳೊಂದು ದಿನ.
ನಸುನಕ್ಕು, ಸಂತೈಸಿ ಕರೆದೊಯ್ಯುತ್ತಿದ್ದಳವಳೆಮ್ಮ
ಮಧುಮಲ್ಲಿಗೆ ಹೂವುಗಳ ಬಳಿಗೆ,
ಹೂ ಮೊಗ್ಗು ಗಳ ಕೊಯ್ದು,
ಉದ್ದ ಮಾಲೆಯ ನೇಯ್ದು,
ಹೂ ತೊಟ್ಟುಗಳಿಗೆ ನೀರನ್ನು ಸುರಿದು
ಹೂ ಅರಳುವ ಗಳಿಗೆಗೆ ಕಾದು,
ಮುಂಜಾನೆಯಲಿ ಅರಳಿ ಹೂವಿನ ಮಾಲೆ;
ಜೀವನೋಲ್ಲಾಸ ಕಲಿಸಿ ಅಮ್ಮನ ಪಾಠಶಾಲೆ.
ಇಂದು ನನ್ನಮ್ಮನ ನೆನಪು ಮಾಲೆ ಮಾಲೆ;
ಇಂದಿಗೂ ನಾವು ಅಮ್ಮ ನಿನ್ನೆಳೆ ಬಾಲಬಾಲೆ.