ವಿನಯಾಳ ಮನೆಯಿರುವುದು ಒಂದು ತಾಲೂಕು ಪ್ರದೇಶದಲ್ಲಿ. ಅವಳ ತಂದೆ ಪ್ರೈವೇಟ್ ಆಫೀಸಿನಲ್ಲಿ ಕೆಲಸದಲ್ಲಿದ್ದು , ಊರ ಹೊರಗಿನ ಹೊಸ ಬಡಾವಣೆಯಲ್ಲಿ ಮನೆ ಕಟ್ಟಿಸಿದ್ದರು. ಆ ಹೊಸ ಬಡಾವಣೆಯಲ್ಲಿ ದೂರದೂರಕ್ಕೆ,ಕೆಲವೇ ಮನೆಗಳು ತಲೆ ಎತ್ತಿದ್ದವು.
ಇವರ ಮನೆಯ ಸುತ್ತಲಿರುವ ಐದಾರು ಮನೆಗಳ ಪೈಕಿ, ಸ್ವಲ್ಪ ಸಮೀಪದ ಮನೆಯಲ್ಲಿ ನಡುವಯಸ್ಸಿನ ದಂಪತಿ ವಾಸವಿದ್ದರು. ಇನ್ನೊಂದರಲ್ಲಿ ಬೆಳಗಾಗೆದ್ದು ಇಬ್ಬರೂ ಕೆಲಸಕ್ಕೆ ಹೋಗುವ ಜೋಡಿ, ಮತ್ತೊಂದರಲ್ಲಿ ಕೂಡು ಕುಟುಂಬ… ಇತ್ಯಾದಿ.
ಅವರ ಮನೆಗೆ ಸಮೀಪವೇ ಎಂಬಂತಿರುವ ಇನ್ನೊಂದು ಮನೆಯಲ್ಲಿ ಬಾಡಿಗೆಗೆ ಒಬ್ಬ ಗಂಡಸು ವಾಸಿಸುತ್ತಿದ್ದರು. ತಮ್ಮ ಮನೆಯ ಎದುರು ಭಾಗದಲ್ಲಿ ಇರುವ ಆ ಮನೆ ಮಾತ್ರ ಒಂದು ರಹಸ್ಯದ ಹಾಗೆ ವಿನಯಾಳಿಗೆ ಅನಿಸುವುದು. ತಂದೆ ತಾಯಿ ಆ ಮನೆ ಕಡೆಗೆ ನೋಡಬಾರದು, ಹೋಗಬಾರದು ಎಂದು ಆಜ್ಞೆ ಮಾಡಿದ್ದರು. ಯಾಕೆ ಅಂತ ಹೇಳಲು ಅಮ್ಮನನ್ನು ಒತ್ತಾಯಿಸಿದಾಗ, ಆ ಮನುಷ್ಯ ಹಿಂದೆ ಒಬ್ಬ ಕಳ್ಳನಾಗಿದ್ದನಂತೆ, ಡುಪ್ಲಿಕೇಟ್ ಬೀಗದ ಕೈ ಮಾಡಿ, ಕದ್ದು ಸಿಕ್ಕಿಹಾಕಿಕೊಂಡು ಜೈಲುವಾಸ ಮಾಡಿದ್ದನಂತೆ.. ಈಗ ನಮ್ಮ ದುರಾದೃಷ್ಟ..ಈ ಮನೆಯಲ್ಲಿದ್ದಾನೆ..ಎಂದೆಲ್ಲ ಹೇಳಿದ್ದರು. ಆದ್ದರಿಂದ ಆ ಮನೆಯ ಬಗ್ಗೆ ವಿನಯಾ ಸ್ವಲ್ಪ ಭಯಗ್ರಸ್ತಳಾಗಿಯೇ ಇರು ತ್ತಿದ್ದಳು.
ಆತ ದೂರದಿಂದ ನೋಡಿದರೆ ಸಂಭಾವಿತನ ಹಾಗೆ ತೋರುತ್ತಾನೆ, ಅವನಷ್ಟಕ್ಕೆ ಇರುತ್ತಾನೆ..ದಾರಿಯಲ್ಲಿ ಎಲ್ಲಾದರೂ ಸಿಕ್ಕಿದರೆ ಮುಗುಳು ನಗೆ ಬೀರಿ ಪರಿಚಯ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ..ಆದರೆ ವಿನಯಾ ಆಗಲೀ, ಅವಳ ಅಪ್ಪ ಅಮ್ಮ ನಾಗಲೀ ಅವನಿಗೆ ಪ್ರತಿಕ್ರಿಯೆ ತೋರುತ್ತಿರಲಿಲ್ಲ..
ವಿನಯಾ ಓದಿನಲ್ಲಿ ಜಾಣೆ. ಅವಳು ಆಗ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆ ಗೆ ಸಿದ್ಧ ಪಡುತ್ತಿದ್ದ ಕಾಲ.. ಪರೀಕ್ಷೆಯ ತಯಾರಿಯನ್ನು ತುಂಬಾ ಗಮನದವಿಟ್ಟು ಮಾಡುತ್ತಿದ್ದಳು. ಓದಿಗೇ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದಳು. ಸಂಬಂಧಿಕರ ಮನೆಗಳಿಗಾಗಲೀ, ಸಭೆ ಸಮಾರಂಭ ಕಾರ್ಯಕ್ರಮಗಳಿಗಾಗಲೀ ಅವಳು ಹೊರಡುತ್ತಿರಲಿಲ್ಲ. ಹದಿಹರೆಯದ ಮಗಳನ್ನು ಒಬ್ಬಳೇ ಬಿಟ್ಟು ಹೊರಗೆ ಹೋಗುವುದು ಅವಳ ತಂದೆ ತಾಯಿಗೆ ಒಂದು ಸಮಸ್ಯೆ. ಅಂತಹ ಅನಿವಾರ್ಯ ಸಂದರ್ಭಗಳಲ್ಲಿ ಮಗಳಿಗೆ ಮನೆಯ ಒಳಗೇ ಇರಲು ಹೇಳಿ, ಅವರು ನಡು ವಯಸ್ಸಿನ ಜೋಡಿಯ ಮನೆಯವರಲ್ಲಿ ಸ್ವಲ್ಪ ತಮ್ಮ ಮನೆಕಡೆಗೆ ಗಮನವಿರಿಸಲು ವಿನಂತಿಸಿ, ಮಗಳು ಸರಿಯಾಗಿ ಬಾಗಿಲು ಹಾಕಿದ್ದಾಳೆಂದು ಖಚಿತ ಪಡಿಸಿಕೊಂಡ ನಂತರವೇ ಹೊರಡುತ್ತಿದ್ದರು.
ಆ ಸಲವೂ ಹಾಗೇ ಆಯಿತು. ಸ್ವಲ್ಪ ದೂರದಲ್ಲಿರುವ ಸಂಬಂಧಿಕರಲ್ಲಿ ಕಾರ್ಯಕ್ರಮ..ವಾಪಾಸು ಬರುವಾಗ ರಾತ್ರೆಯಾಗುವುದು ಅಂತ ಹೇಳಿ ಹೋಗಿದ್ದರು. ಪರೀಕ್ಷೆಗೆ ಕೇವಲ ಎರಡೇ ದಿನವಿದ್ದುದರಿಂದ, ತಂದೆ ತಾಯಿ ಹೊರಗೆ ಹೋದ ಮೇಲೆ ವಿನಯಾ ಸಾಕಷ್ಟು ಹೊತ್ತು ಓದಿಕೊಂಡೇ ಕುಳಿತಿದ್ದಳು. ಸಂಜೆ ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಹೊರಗೆ ಗಾಳಿಗೆ ಸುಖವಾಗಿ ಓಲಾಡುವ ಮರಗಿಡಗಳನ್ನು ಕಿಟಕಿಯಿಂದ ಕಂಡು, ಓದಿ ಓದಿ ದಣಿದಿದ್ದ ವಿನಯಾ ಬಾಗಿಲು ತೆಗೆದು ವರಾಂಡದಲ್ಲಿ ಬಂದು ಕಟ್ಟೆಗೆ ಒರಗಿ ಕುಳಿತಳು. ಅವಳಿಗೆ ತಂಪಾಗಿ ಹಾಯೆನಿಸಿತು. ಸ್ವಲ್ಪ ಆಯಾಸದಿಂದ ತೂಕಡಿಕೆ ಬಂದಹಾಗಾಯಿತು. ಸ್ವಲ್ಪ ಹೊತ್ತಿನಲ್ಲಿ ಒಮ್ಮೆಲೆ ಬಂದ ತುಸು ಬಲವಾದ ಗಾಳಿಯ ರಭಸಕ್ಕೆ ತೆರೆದಿಟ್ಟಿದ್ದ ಮುಂಬಾಗಿಲು ಧಡಾರನೆ ಮುಚ್ಚಿಕೊಂಡಿತು. ಬಾಗಿಲ ಶಬ್ದಕ್ಕೆ ಇವಳಿಗೆ ಎಚ್ಚರವಾಯಿತು.. ಆಟೋಮ್ಯಾಟಿಕ್ ಲಾಕ್ ಇದ್ದ ಬಾಗಿಲು..ಕೀ ಒಳಗಿದೆ..ಇನ್ನೊಂದು ಅಪ್ಪನ ಬಳಿ..ಅವರು ಬರುವುದು ತಡವಾಗಬಹುದು..ಬಾಗಿಲು ತೆರೆಯುವುದಾದರೂ ಹೇಗೆ..ಓದುವುದು ಹೇಗೆ..ಸ್ವಲ್ಪ ಹೊತ್ತಿನಲ್ಲಿ ಕತ್ತಲಾಗುತ್ತದೆ.. ಈ ಮನೆಯಲ್ಲಿ ಈ ಕತ್ತಲಿಗೆ ತಾನೊಬ್ಬಳೇ ಮನೆಯ ಹೊರಗೆ ಇರುವುದೇ.ಎಣಿಸಿಯೇ ಥರಥರಗುಟ್ಟಿ ಆಂಟೀ..ಎಂದು ಕೂಗುತ್ತಾ ವಿನಯಾ ನಡುವಯಸ್ಸಿನ ಪಕ್ಕದ ಮನೆಯ ಜೋಡಿಗೆ ವಿಷಯ ತಿಳಿಸಿದ್ದಾಳೆ. ಆಚೆ ಈಚೆ ಮನೆಯವರೆಲ್ಲ ಅಲ್ಪ ಸ್ವಲ್ಪ ವಿಷಯ ತಿಳಿದು ಸಮಾಧಾನ ಮಾಡಲು ಯತ್ನಿಸುತ್ತಿದ್ದಾರೆ.. ತಮ್ಮ ಮನೆಗೆ ಬರಲು ಹೇಳುತ್ತಿದ್ದಾರೆ..
ಅಷ್ಟು ಹೊತ್ತಿಗೆ ಎದುರು ಮನೆಯ ವ್ಯಕ್ತಿ ಮೆಲ್ಲನೆ ಇವರ ಮನೆಕಡೆ ಬರುತ್ತಿರುವುದನ್ನು ವಿನಯಾ ಕಂಡಳು..ಅವಳಿಗೆ ಇನ್ನಷ್ಟು ಭಯವಾಯಿತು..ಈ ಕತ್ತಲು ಹೊತ್ತಿನಲ್ಲಿ..ಅವನು ತಮ್ಮ ಮನೆಯ ಬಳಿ..ತಾಯಿ ತಂದೆ ಮನೆಯಲ್ಲಿಲ್ಲ..ಈಗೇನು ಮಾಡುವುದು.. ಛಂಗನೆ ಓಡಿದ ವಿನಯಾ ಕತ್ತಲಿನಲ್ಲಿ ಮನೆಯ ಹಿಂಭಾಗದಲ್ಲಿ ಅಡಗಿ ಕುಳಿತುಕೊಂಡಳು..
ಆ ಮನುಷ್ಯನ ಕೈಯಲ್ಲಿ ಹರಿತವಾದ ವಿವಿಧ ನಮೂನೆಯ ಆಯುಧಗಳಿದ್ದವು. ಆತ ಬಾಗಿಲು ಬಳಿ ನಿಂತು ಟಾರ್ಚ್ ಬೆಳಕಿನಲ್ಲಿ ಕೀ ಹೋಲ್ ನ ಅಳತೆ ತೆಗೆದು ಇನ್ನೊಂದು ಕೀಯನ್ನು ಅದಕ್ಕೆ ಹೊಂದಿಸಲು ಪ್ರಯತ್ನಸಿ, ಕೀಯನ್ನು ಗೀಸಿ ಪುನಃ ಪುನಃ ಪ್ರಯತ್ನಿಸುವುದು ಇವಳಿಗೆ ಬಗ್ಗಿ ನೋಡಿದಾಗ ಕಾಣುತ್ತಿತ್ತು.. ಅಷ್ಟರಲ್ಲಿ ಕೀ ಹೊಂದಿಕೆಯಾಗಿ ಮನೆಬಾಗಿಲು ತೆರೆದುಕೊಂಡಿತು..
ಮಗೂ..ಬಾರಮ್ಮಾ..ಬಾಗಿಲು ತೆರೆದಿದೆ ನೋಡು ಎನ್ನುತ್ತಾ ಆತ ಅವಳನ್ನು ಒಂದು ಬದಿಯಿಂದ ಹುಡುಕುವಾಗ, ವಿನಯಾ ಇನ್ನೊಂದು ಬದಿಯಿಂದ ಚುರುಕಾಗಿ ಓಡಿ ಬಂದು, ಮನೆಯ ಒಳಗೆ ಹೋಗಿ ಬಾಗಿಲು ಹಾಕಿಕೊಂಡಳು. ಆತ ಪುನಃ ನೋಡುವಷ್ಟರಲ್ಲಿ ಇವಳು ಒಳಗೆ ಸೇರಿಯಾಗಿತ್ತು.
ಪರೀಕ್ಷೆಯ ಫಲಿತಾಂಶ ಬಂದ ದಿನ ಮೊದಲು ಸಿಹಿತಿಂಡಿಯನ್ನು ಆತನಿಗೆ ಕೊಟ್ಟು, ಅವನನ್ನು ಹಾಗೂ ಇತರ ನೆರೆಮನೆಯವರನ್ನು ಮನೆಗೆ ಆಹ್ವಾನಿಸಿ,ಆದರಿಸಿದರು ವಿನಯಾಳ ತಂದೆ ತಾಯಿ….ಆತನ ಕಣ್ಣಲ್ಲಿ ಕಣ್ಣೀರ ಕೋಡಿ…ತಾನು ಹಿಂದೆ ಮಾಡಿದ್ದ ತಪ್ಪು ಗಳ ಪಶ್ಚಾತ್ತಾಪವೋ..ನೆರೆಮನೆಯವರು ತನ್ನನ್ನು ಸ್ವೀಕರಿಸಿದ್ದಕ್ಕೋ….ವಿನಯಾ ಪರೀಕ್ಷೆ ಪಾಸು ಮಾಡಿದುದರಲ್ಲಿ ತನ್ನದೂ ಸಣ್ಣ ಪಾಲಿದೆ ಅನ್ನುವ ಖುಶಿಯ ಅರಿವಿನೊಂದಿಗೋ..ತಿಳಿಯಲಿಲ್ಲ. ಸುತ್ತಲಿನ ಗಿಡ, ಮರ ಈ ವಿಶೇಷ ಘಟನೆಗೆ ಸಾಕ್ಷಿಯಾದವು.
-ಸುಮನಾ