Posted in ಸಣ್ಣ ಕತೆ

ಸೌಗಂಧಿಕಾ ‌ಸೊಲ್ಯೂಶನ್ಸ್!

ಆಗ ಆತ ಹತ್ತು ವರುಷದ ಎಳೆಯ ಹುಡುಗ. ಮನೆಗೆ ಅಮ್ಮನ ಗೆಳತಿಯರು ಅಥವಾ ಸಂಬಂಧ ದ ಅವರ ಸಮಪ್ರಾಯದ ಹೆಂಗಸರು ಬಂದರೆಂದರೆ ಆತನಿಗೆ ಬಹಳ ಖುಷಿ. ಅಂತಹ ದಿನಗಳಿಗಾಗಿ ಆತ ಎದುರು ನೋಡುತ್ತಿರುತ್ತಾನೆ. ಅಮ್ಮನ ಗೆಳತಿಯರು ಬಂದರೆ ಒಟ್ಟಿಗೆ ತನ್ನ ಓರಗೆಯ ಅವರ ಮಕ್ಕಳೂ ಬರುತ್ತಾರೆ. ಅಮ್ಮ ಮತ್ತು ಅವರ ಗೆಳತಿಯರು ಮಾತಿನಲ್ಲಿ ಮುಳುಗಿದರೆ ಮಕ್ಕಳು ಎಷ್ಟು ಹೊತ್ತು ಆಡಿಕೊಂಡಿದ್ದರೂ ಅವರ ಗೋಚರಕ್ಕೆ ಬರುವುದಿಲ್ಲ. ಮತ್ತೆ ಅಮ್ಮಂದಿರು ತರುವ ಅಥವಾ ಸೇರಿ ತಯಾರಿ‌ಸುವ ತಿಂಡಿಗಳಾದ ಪೋಡಿ, ಪೂರಿ, ತುಕುಡಿ ಇಂತಹವೆಲ್ಲಾ ಆ ದಿನದ ಬೋನಸ್!

ಆತನ ಅಮ್ಮನಿಗೆ ಹೂತೋಟ ಬೆಳೆಸುವುದರಲ್ಲಿ ಬಹಳ ಆಸಕ್ತಿ. ತಮ್ಮ ಮನೆ ಸುತ್ತಲಿನ ತೋಟದಲ್ಲಿ ತರತರಹದ ಗಿಡಗಳನ್ನು ಬೆಳೆಸಿದ್ದಾರೆ. ಒಂದೆಡೆಯಲ್ಲಿ ಗುಲಾಬಿ ಗಿಡಗಳ ಸಮೂಹ, ಇನ್ನೊಂದೆಡೆ ದೇವರ ಪೂಜೆಗೆ ಬೇಕಾಗುವ ವಿವಿಧ ನಮೂನೆಯ ದಾಸವಾಳಗಳು, ಕರವೀರ, ಪುನ್ನಾಗ, ರತ್ನಗಂಧಿ, ಮಂದಾರ, ತುಳಸಿ, ದೂರ್ವೆ ಇತ್ಯಾದಿ. ಇನ್ನೊಂದೆಡೆ ಸ್ವಲ್ಪ ತಂಪಿನ ಜಾಗೆಯಲ್ಲಿ ಸೊಂಪಾಗಿ ಅರಳಿ ಪರಿಮಳ ಬೀರುವ ಬಿಳಿಯ ಸುಗಂಧಿ ಹೂವುಗಳು.

ಸಾಯಂಕಾಲ ಸಮಯದಲ್ಲಿ ಬಂದ ಗೆಳತಿಯರು ಹೊರಡುವ ಮುಂಚೆ ಅಮ್ಮ ಅವರಿಗೆ ಕುಂಕುಮ ಕೊಟ್ಟು ಮುಡಿಯಲು ತಮ್ಮ ತೋಟದ ಹೂವುಗಳನ್ನು ನೀಡುವುದು ವಾಡಿಕೆ.

ಅಮ್ಮ, ತನ್ನ ಗೆಳತಿಯರಿಗೆ ಹೂತೋಟದಲ್ಲಿ ಬೆಳೆದ ಹೂವು ಕಿತ್ತು ಕೊಡುವ ಆ ಸಮಯ ಆತನಿಗೆ ಯಾವಾಗಲೂ ಕಿರಿಕಿರಿ ಉಂಟುಮಾಡುತ್ತದೆ. ಆತ ಬೇಗ ಬೇಗನೆ ರತ್ನಗಂಧಿ ಅಥವಾ ಕರವೀರದ ಹೂ ಕಿತ್ತು, ಅಮ್ಮನ ಬಳಿ ಅವರಿಗೆ ಕೊಡುವಂತೆ ಹೇಳುತ್ತಾನೆ..ಅಮ್ಮನೇನಾದರೂ ಹೂ ಕೊಯ್ದು ಕೊಡುತ್ತೇನೆಂದು ತೋಟಕ್ಕೆ ಹೊರಟರೆಂದರೆ, ‘ಅಮ್ಮಾ ನಾನೇ ಕೊಯ್ದು ಕೊಡುತ್ತೇನೆ’ ಅಂತ ಹಟ ಮಾಡುತ್ತಾನೆ. ಗೆಳತಿಯರೇನಾದರೂ ತೋಟ ನೋಡಲು ಹೊರಟರೆ ಅವನಿಗೆ ಬಹಳ ಚಿಂತೆ…ಬೇಗ ಬೇಗ ತಾನೇ ಎದುರು ಹೋಗಿ ಗುಲಾಬಿ ಗಿಡ ಮತ್ತು ಸುಗಂಧಿ ಗಿಡಕ್ಕೆ ಅಡ್ಡ ಅಡ್ಡ ನಿಂತು ಅವರ ಗಮನ ಬೇರೆಡೆ ಸೆಳೆಯುತ್ತಾನೆ. ಕೆಲವೊಮ್ಮೆ ಆ ಗಿಡಗಳ ಮೇಲೆ ಹಗುರವಾದ ಒಣಗಿದ ಬಾಳೆಯ ಎಲೆಗಳನ್ನು ಹರಡಿ ಹೂಗಳನ್ನು ಆದಷ್ಟು ಅಡಗಿಸುತ್ತಾನೆ!

ಇಷ್ಟೆಲ್ಲಾ ಕಸರತ್ತು, ಜಾಗ್ರತೆ ಯಾಕೆಂದು ಕೊಂಡಿರಾ!

ಆತ ಬೆಳಗಿನ ಸಮಯ ಬಾವಿಯಿಂದ ಕೊಡಪಾನದಲ್ಲಿ ಹೂ ಗಿಡಗಳಿಗೆ ನೀರು ಸೇದಿ ಹಾಕುತ್ತಾನೆ. ಸಾಯಂಕಾಲ ಸಮಯದಲ್ಲಿ ಸ್ವಲ್ಪವೇ ಅರಳಿ ಪರಿಮಳಿಸಲು ಆರಂಭಿಸುವ ಸುಗಂಧಿ ಹೂಗಳು ಹಾಗೂ ಆಗ ತಾನೇ ಅರೆ ಬಿರಿದ ಸುಂದರ ಗುಲಾಬಿ ಹೂವುಗಳನ್ನು ಕೊಯ್ದು ತಮ್ಮ ಮನೆಯಿಂದ ಸುಮಾರು ಅರ್ಧ ಮೈಲು ದೂರದ ಮಾರುಕಟ್ಟೆಗೆ ನಡೆದು ಹೋಗಿ, ಅಲ್ಲಿ ಹೂ ಮಾರುವ ಬಾಯಮ್ಮನಿಗೆ ಕೊಡುತ್ತಾನೆ . ಆಕೆ ಅವನಿಗೆ ಗುಲಾಬಿ ಹೂ ಒಂದಕ್ಕೆ ಇಪ್ಪತ್ತೈದು ಪೈಸೆ ಪ್ರಕಾರ, ಸುಗಂಧಿ ಹೂವಿಗೆ ಮೂ‌ವತ್ತು ಪೈಸೆ ಪ್ರಕಾರ ದುಡ್ಡು ಕೊಡುತ್ತಾಳೆ. ಆತ ಆ ಕೆಲಸ ಶ್ರದ್ಧೆಯಿಂದ ಮಾಡುವುದನ್ನು ನೋಡಿ ಅಮ್ಮ ‘ ಆ ದುಡ್ಡು ನಿನಗೇ ಇರಲಿ ಮಗಾ’ ಅಂತ ಮಂಜೂರು ಮಾಡಿದ್ದಾರೆ. ಗಳಿಸಿದ ದುಡ್ಡು ಜೋಪಾನ ಮಾಡಿ, ಅದರಲ್ಲಿ ತನ್ನ ಹೀರೋ ಸೈಕಲ್ ಕೊಂಡು, ಅದರಲ್ಲಿ ಹೋಗಿ ಹೂವುಗಳನ್ನು ಬಾಯಮ್ಮನಿಗೆ ನೀಡಬೇಕೆಂದು ಅವನ ಕನಸು.‌ ಹಾಗಾಗಿ ಅಮ್ಮ ನ ಗೆಳತಿಯರಿಗೆ ಗುಲಾಬಿ ಮತ್ತು ಸುಗಂಧಿ ಹೂಗಳನ್ನು ಕೊಡಲು ಆತನಿಗೆ ಸುತರಾಂ ಇಷ್ಟವಿರುತ್ತಿರಲಿಲ್ಲ!

ಇಂದು ಆತ ‘ಸೌಗಂಧಿಕಾ ಸೊಲ್ಯೂಷನ್ಸ್’ ಎಂಬ ಹೆಸರಿನ ಒಂದು ದೊಡ್ಡ ಕಂಪೆನಿ ಹುಟ್ಟು ಹಾಕಿದ್ದಾನೆ. ಗಿಡಮೂಲಿಕೆಗಳಿಂದ ಮದ್ದು ತಯಾರಿ, ಪರಿಮಳದ ಹೂವುಗಳಿಂದ ಸೆಂಟ್ ತಯಾರಿ ಆತನ ಕಂಪೆನಿಯ ಫ್ಯಾಕ್ಟರಿಗಳಲ್ಲಿ ನಡೆಯುತ್ತಿದೆ. ಸುಗಂಧಿ ಹೂವಿನ ಬ್ರಾಂಡ್ ಲೋಗೋ ಆ ಕಂಪೆನಿಯ ಪ್ರಾಡಕ್ಟ್ ಗಳಲ್ಲಿ ವಿಜ್ರಂಭಿಸಿದೆ. ವರ್ಷ ದಿಂದ ವರ್ಷ ಅವನ ಕಂಪನಿ ಅಭಿವೃದ್ಧಿ ಹೊಂದುತ್ತಿರುವಂತೆ ಅವನ ಮನಸ್ಸಿನಲ್ಲಿ ಎಂಭತ್ತು ವರುಷಗಳ ತುಂಬು ಜೀವನ ನಡೆಸಿ ಗತಿಸಿದ ಹೂ ಮನಸಿನ ಪರಿಶ್ರಮಿ, ಅವನ ಅಮ್ಮ ಹಾಗೂ ಅವನು ಕೊಂಡೊಯ್ದು ಕೊಡುತ್ತಿದ್ದ ಹೂವುಗಳಿಗೆ ಲೆಕ್ಕವಿಟ್ಟು ಪ್ರೀತಿಯಿಂದ ಮಾತನಾಡಿಸಿ ದುಡ್ಡು ಕೊಡುತ್ತಿದ್ದ ಹೂ ಮಾರುವ ಬಾಯಮ್ಮ ಸುಳಿಯುತ್ತಿರುತ್ತಾರೆ!

-ಸುಮನಾ🌹🙏😊

Leave a Reply

Your email address will not be published. Required fields are marked *