ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ತಯಾರಿ. ಇದರ ಅಂಗವಾಗಿ ವಿವಿಧ ಸ್ಪರ್ಧೆಗಳು. ಒಂದನೇ ತರಗತಿಯ ಮಕ್ಕಳ ಉತ್ಸಾಹ ಹೇಳತೀರದು. ಆ ದಿನ ರಂಗೋಲಿ ಬಿಡಿಸುವ ಸ್ಪರ್ಧೆ..
ಬಣ್ಣದ ಹುಡಿ, ಹೂವಿನ ಎಸಳುಗಳು, ಸುಣ್ಣದ ಕಡ್ಡಿ ಇತ್ಯಾದಿ ಎಲ್ಲ ತಯಾರಿಯೊಂದಿಗೆ ಮಕ್ಕಳು ಶಾಲೆಯ ಹಾಲ್ ಒಂದರಲ್ಲಿ ಒಟ್ಟುಗೂಡಿದ್ದಾರೆ. ಬಹು ಶಿಸ್ತಿನ ಮೋಹಿನಿ ಟೀಚರ್ ಮಕ್ಕಳನ್ನು ಅವರವರ ನಿಗದಿತ ಸ್ಥಾನದಲ್ಲಿ ಕಷ್ಟಪಟ್ಟು ಕುಳ್ಳಿರಿಸಿ ನಿಟ್ಟುಸಿರು ಬಿಟ್ಟಿದ್ದಾರೆ. ‘ಚಿತ್ರ ಚೆಂದ ಮಾಡಿ ಬಿಡಿಸಿ ಮಕ್ಕಳೇ.. ಯಾರದ್ದು ತುಂಬಾ ಚೆಂದವಾಗುತ್ತದೋ ಅವರಿಗೆ ವಾರ್ಷಿಕೋತ್ಸವದ ದಿನ ಬಹುಮಾನ ಇದೆ. ಆಚೆ ಈಚೆ ನೋಡಲಿಕ್ಕಿಲ್ಲ.. ಗಮನವಿಟ್ಟು ಮಾಡಿ’, ಹೀಗೆ ಹೇಳುತ್ತ ಮಕ್ಕಳನ್ನು ಹುರಿದುಂಬಿಸಿದ್ದಾರೆ ಮೋಹಿನಿ ಟೀಚರ್.
ರಂಗೋಲಿ ಬಿಡಿಸಲು ನಿಗದಿತ ಸಮಯ,- ಒಂದು ಗಂಟೆ. ಅದಾದ ಕೂಡಲೇ ಬೆಲ್. ಮಕ್ಕಳು ಚಿತ್ರ ಬಿಡಿಸುವುದನ್ನು ನಿಲ್ಲಿಸಿ ತಮ್ಮ ಸ್ಥಳದಲ್ಲೇ ಇರಬೇಕು. ಸ್ಪರ್ಧಾ ನಿಯಮದಂತೆ ಬೆಲ್ ಆದ ತಕ್ಷಣ ಬೇರೆ ಟೀಚರ್ ಬಂದು ಮೌಲ್ಯ ಮಾಪನಧ ಆರಂಭ.
ಶ್ಶಾಮಲಿ ಚುರುಕಿನ, ಪ್ರೀತಿಯೇ ಮೈವೆತ್ತಿ ಬಂದಂತೆ ತೋರುವ ಪುಟಾಣಿ. ಟೀಚರ್ ಮಾತಿನಂತೆ, ಅಮ್ಮ ಕಷ್ಟಪಟ್ಟು ಕಲಿಸಿದ್ದ ಹೂವಿನ ಬುಟ್ಟಿಯ ರಂಗೋಲಿಯನ್ನು ಬಹಳ ಶ್ರದ್ಧೆಯಿಂದ ಬಿಡಿಸಿ ಬಣ್ಣಗಳಿಂದ ಅಲಂಕರಿಸಿ ಬೆಲ್ ಆದ ಕೂಡಲೇ ನಿಲ್ಲಿಸಿ ಕಣ್ಣರಳಿಸಿ ಸುತ್ತಲೂ ನೋಡುತ್ತ ಮುದ್ದು ನಗೆ ಬೀರಿ ಕುಳಿತಿದ್ದಾಳೆ.
ಅವಳ ಹತ್ತಿರದ ಜಾಗೆಯಲ್ಲಿ ಅವಳ ಬಹಳ ಇಷ್ಟದ ಸ್ನೇಹಿತ ರಮೇಶ ಕೂಡ ಮಾತನಾಡುವ ಎರಡು ಗಿಳಿಗಳ ಚಿತ್ರ ಬಿಡಿಸಿದ್ದಾನೆ. ಅಲ್ಲೇ ಮುಂದೆ ರೇಶ್ಮಾ, ಸ್ವಲ್ಪ ಆಚೆ ಚಂದ್ರಿಕಾ.. ಹೀಗೆ ಎಲ್ಲರೂ ಚಿತ್ರ ಬರೆದು ಮಾತನಾಡಕೂಡದೆಂದು ಕಟ್ಟಪ್ಪಣೆಯಾಗಿದ್ದರಿಂದ ಸಂಜ್ಞೆ ಮಾಡುತ್ತಾ ಆಚೆ ಈಚೆ ನೋಡುತ್ತಾ ಕುಳಿತಿದ್ದಾರೆ.
ಮೌಲ್ಯ ಮಾಪನ ಆರಂಭವಾಯಿತು. ಟೀಚರ್ ರೋಲ್ ನಂಬರ್ ಪ್ರಕಾರ, ಚಿತ್ರಗಳನ್ನು ಅವಲೋಕಿಸುತ್ತ ರಮೇಶನ ಚಿತ್ರ ವೀಕ್ಷಣೆಗೆಂದು ಬಂದರು. ಬಹು ವಾಚಾಳಿಯಾದ ಶ್ಶಾಮಲಿ ಟೀಚರ್ ನ್ನು ನೋಡಿದ ಕೂಡಲೇ ನಿಯಮ ಮರೆತು,’ ಟೀಚರ್, ಟೀಚರ್, ರಮೇಶನ ಚಿತ್ರ ನೋಡಿ, ಎಷ್ಟು ಚೆಂದವಾಗಿದೆ ಅಲ್ವಾ ಟೀಚರ್’ ಅಂತ ಕುಣಿಯಲು ಆರಂಭಿಸಿದಳು. ಟೀಚರ್ ಹೌದಲ್ಲ ಎಷ್ಟು ಚೆನ್ನಾಗಿ ಬಿಡಿಸಿದ್ದಾನೆ… ಎಂದುಕೊಂಡರೂ ತೋರ್ಪಡಿಸದೆ ಅವಳನ್ನು ಸುಮ್ಮನೆ ಕುತ್ಕೋ..ಶ್.. ಎಂದು ಹೇಳುತ್ತ ಮುಂದುವರೆದು .. ಮುಂದಿನ ರಂಗೋಲಿಗಳನ್ನು ನೋಡಿ ಸರದಿಯ ಪ್ರಕಾರ
ಶ್ಶಾಮಲಿಯ ರಂಗೋಲಿಯ ಬಳಿ ಬಂದಾಗ ಕಂಡದ್ದೇನು! ..ತನ್ನ ಲಂಗವನ್ನು ಹರಡಿಕೊಂಡು ಮುಖಕ್ಕೆ, ಕೈಗೆ ಬಣ್ಣಗಳ ಲೇಪದೊಂದಿಗೆ ತದೇಕ ಚಿತ್ತದಿಂದ ರಮೇಶ ಬಿಡಿಸಿದ ಗಿಳಿಗಳನ್ನು ನೋಡುತ್ತಿದ್ದ ಶ್ಶಾಮಲಿಯನ್ನು… ಶ್ಶಾಮಲಿ ತಾನು ಬಿಡಿಸಿದ್ದ ಚಿತ್ರದ ಮೇಲೆಯೇ ಕುಳಿತಿದ್ದರಿಂದ ಬಣ್ಣಗಳೆಲ್ಲ ಕಲಸಿ….ಓಕುಳಿಯಾಗಿದೆ.. ಗೆರೆಗಳೆಲ್ಲ ಅಳಿಸಿಹೋಗಿದೆ..ಇನ್ನೆಲ್ಲಿಯ ಮೌಲ್ಯ ಮಾಪನ..!
ಈ ದೃಶ್ಯವನ್ನು ನೋಡಿ ಟೀಚರ್ ಗೆ ಒಂದು ಕ್ಷಣಕ್ಕೆ,…ರಮೇಶ ಬಿಡಿಸಿದ ಚೆಂದದ ಗಿಳಿಗಳ ಚಿತ್ರಕ್ಕೆ ಬಹುಮಾನ ನೀಡಬೇಕೆ ಅಥವಾ ತನ್ನ ಚಿತ್ರದ ಬಗ್ಗೆ ಸಂಪೂರ್ಣ ಮರೆತು ಗಲ್ಲಕ್ಕೆ ಕೈಯಾನಿಸಿ ಅತೀ ಸಂತೋಷದಿಂದ ರಮೇಶಬಿಡಿಸಿದ ಚಿತ್ರ ನೋಡುತ್ತಾ ಮುಗ್ಧ ಭಾವಚಿತ್ರದಂತೆ ಗೋಚರಿಸಿದ ಶ್ಶಾಮಲಿಯನ್ನು ಆಯ್ಕೆ ಮಾಡಬೇಕೇ.. ಎಂಬ ಯೋಚನೆಯಿಂದ ತೊಡಗಿ..ಛೆ..ಈ ಸ್ಪರ್ಧೆಯಿಂದ ಮಕ್ಕಳ ಮುಗ್ಧತೆಯನ್ನು ಕಸಿಯುತ್ತಿದ್ದೇವಾ….ಈ ಪದ್ಧತಿಯನ್ನು ಬದಲು ಮಾಡಬೇಕು. ಎಲ್ಲ ಮಕ್ಕಳಿಗೂ ಬಹುಮಾನ ವಿತರಿಸಿ..ಯಾವ ಚಿತ್ರದಲ್ಲಿ ಯಾವ ಅಂಶ ಚೆನ್ನಾಗಿದೆ.. ಯಾವುದನ್ನು ಸರಿಮಾಡಬೇಕು ಎಂದು ಹೇಳಿಕೊಡಬೇಕು..ಅದೇ ಸರಿ ಎಂದೆನಿಸಿ..ಈ ವಿಷಯದ ಸಮಾಲೋಚನೆಗಾಗಿ ಮುಖ್ಯೋಪಾಧ್ಯಾಯಿನಿಯ ಕೊಠಡಿಗೆ ನಡೆಯುತ್ತಾರೆ.