ಆ ಪಟ್ಟಣದ ಪ್ರಮುಖ ಸಮುದ್ರ ಕಿನಾರೆಯಲ್ಲಿ ಗಿಜಿಗುಟ್ಟುವ ಯಾತ್ರಿಕರು. ಸಮುದ್ರದಿಂದ ಬೀಸುವ ಬಲವಾದ ಗಾಳಿ. ಗಾಂಭೀರ್ಯದಿಂದ ತನ್ನ ತೇಲುಬಾಹುಗಳನ್ನು ಆಗಾಗ ದಡದ ಕಡೆ ಸೆಟೆದು ಅಬ್ಬರಿಸುವ ಸಮುದ್ರ ರಾಜ. ಯಾತ್ರಿಕರನ್ನು ತಮ್ಮೆಡೆಗೆ ಸೆಳೆದುಕೊಳ್ಳಲು ಯತ್ನಿಸುತ್ತಿರುವ ವ್ಯಾಪಾರಿಗಳು. ಸಮುದ್ರದ ಕಲ್ಲು, ಚಿಪ್ಪು, ಶಂಖ, ಮುತ್ತು, ಹವಳ ಇತ್ಯಾದಿ ಅವರ ಮಾರಾಟದ ಸರಕು.ಈ ಎಲ್ಲವನ್ನೂ ಬೆರಗಿನಿಂದ ಗಮನಿಸುತ್ತಿದ್ದ ನಿಂತಿದ್ದ, ಸೇಲ್ಸ್ ಮತ್ತು ಮಾರ್ಕೆಟಿಂಗ್ ನಲ್ಲಿ ಎಂಬಿಎ ಡಿಗ್ರಿ ಪಡೆದು ಬಹುರಾಷ್ಟ್ರೀಯ ಕಂಪೆನಿಯ ತನ್ನ ಮೊದಲ ಉದ್ಯೋಗದ ನಿಮಿತ್ತ ಮಲೆನಾಡಿನಿಂದ ಬೇರೆ ರಾಜ್ಯದಲ್ಲಿರುವ ಆ ಪಟ್ಟಣಕ್ಕೆ ಬಂದಿದ್ದು, ಬಿಡುವಿನಲ್ಲಿ ಸಮುದ್ರ ಕಿನಾರೆಯ ನೋಟವನ್ನು ಸವಿಯಲು ಬಂದಿದ್ದ ಒಬ್ಬ ಯುವಕ.
‘ಸರ್, ನಮ್ಮಲ್ಲಿ ದೊರಕುವ ಮುತ್ತು-ಹವಳ ಮಿಶ್ರಿತ ಹಾರ ಒಂದು ಅದ್ಭುತ ಸ್ಮರಣಿಕೆ.ಸಂಪೂರ್ಣ ಪ್ರಾಕೃತಿಕವಾದ ಇದನ್ನು ಧರಿಸಿದರೆ ಆರೋಗ್ಯಕ್ಕೂ ಒಳ್ಳೆಯದು. ತಗೊಳ್ಳಿ ಸರ್’ ಎನ್ನುತ್ತ ಒಬ್ಬ ವ್ಯಾಪಾರೀ ಹುಡುಗ ಆ ಯುವಕನನ್ನು ಸಮೀಪಿಸಿದ. ಅಲ್ಲೇ ಬಳಿಯಿದ್ದ ಅವನ ಅಂಗಡಿಯಲ್ಲಿ ಯುವಕ ಹಾರಗಳನ್ನು ನೋಡಿ, ಒಂದನ್ನು ಕೈಯಲ್ಲಿ ಹಿಡಿದ. ‘ಇದು ಬಹಳ ಅಂದವಾಗಿದೆ. ನನ್ನ ಮೊದಲ ಸಂಬಳದಲ್ಲಿ ಅಮ್ಮನಿಗೆ ಉಡುಗೊರೆಯಾಗಿ ಕೊಟ್ಟರೆ ತುಂಬಾ ಸಂತೋಷಪಡುತ್ತಾರೆ’, ಸ್ವಗತವೆಂಬಂತೆ ಎಂದ ಅವನ ಮಾತನ್ನು ಕೇಳಿದ ಕೂಡಲೇ, ‘ತೆಗೆದುಕೊಳ್ಳಿ ಸರ್. ಬೇರೆ ಕಡೆ ಇದು ಸಿಗದು, ಐದು ಸಾವಿರ ಬೆಲೆಯ ಈ ಹಾರವನ್ನು ನಾನು ನಿಮ್ಮ ಅಮ್ಮನಿಗಾಗಿ ಸ್ವಲ್ಪ ಕಡಿಮೆಗೆ ಕೊಡುತ್ತೇನೆ, ಮುಂದೆ ಚಿನ್ನದಲ್ಲಿ ಕಟ್ಟಿಸಿಕೊಳ್ಳಲೂಬಹುದು ‘ ಎನ್ನುತ್ತಾ ವ್ಯಾಪಾರಿ ಹುಡುಗ ಆ ಹಾರವನ್ನು ಪ್ಯಾಕ್ ಮಾಡಲು ಆರಂಭಿಸಿದ.ಇವನ ವ್ಯವಹಾರದ ವೇಗ ನೋಡಿ ಆವಕ್ಕಾದ ಯುವಕ ‘ಬೇಡ. ನನ್ನಲ್ಲಿ ಈಗ ಅಷ್ಟು ಹಣವಿಲ್ಲ, ನನಗದು ಬೇಡ’ ಎಂದು ಕಾರಣಕೊಟ್ಟು ನಿರಾಕರಿಸಲು ಯತ್ನಿಸಿದಾಗ, ‘ಸರ್ ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ.. ಕ್ಯಾಶ್ ಇಲ್ಲವೇ.. ಇಲ್ಲೇ ATM ಬಳಿ ಕರೆದೊಯ್ಯುತ್ತೇನೆ. ಹಣ ಡ್ರಾ ಮಾಡಿ ಕೊಡಿ’ ಎಂದು ಯುವಕನನ್ನು ತಳ್ಳಿಕೊಂಡು ATMಗೆ ಕರಕೊಂಡು ಹೋಗುವನೋ ಎನ್ನುವಷ್ಟು ಸನಿಹ ಬಂದ. ‘ಪ್ಲೀಸ್.. ನನ್ನನ್ನು ಬಿಟ್ಟು ಬಿಡು.. ಒತ್ತಾಯಿಸಬೇಡ’ ಎಂದು ಯುವಕ ತನ್ನ ಅತೃಪ್ತಿ ಯನ್ನು ಹೊರಹಾಕಿದಾಗ, ವ್ಯಾಪಾರೀ ಹುಡುಗ ಸರಿ ಎಂಬಂತೆ ಇವನ ಬಳಿಯಿಂದ ಹಿಂದೆ ಸರಿದ.
‘ಸರ್ ಒಳ್ಳೆಯದಾಯಿತು. ಆತ ನಿಮ್ಮನ್ನು ಮೋಸ ಮಾಡಲು ಯತ್ನಿಸುತ್ತಿದ್ದ..ನಾನು ನೋಡುತ್ತಲೇ ಇದ್ದೆ’..ಈಚೆ ಈಚೆ ಬನ್ನಿ’ ಎನ್ನುತ್ತಾ ಇನ್ನೊಬ್ಬ ಹುಡುಗ ಬಂದು ಕಿವಿಯಲ್ಲಿ ಪಿಸುಗುಡುವವನಂತೆ..’ಸರ್ ಅವರೆಲ್ಲ ಖತರ್ ನಾಕ್…ಬೇರೆ ಊರಿಂದ ಬರ್ತಾರೆ..ಅವರಿಗೆ ನಿಯತ್ತಿಲ್ಲ..ಕೊಡುವ ಮಾಲಿನ ಬಗ್ಗೆ ಜ್ಞಾನವೂ ಇಲ್ಲ,. ನಾನೆಲ್ಲಿ ನೀವು ಮೋಸ ಹೋಗುವಿರೋ ಎಂದುಕೊಂಡಿದ್ದೆ.’ ಎಂದು ಯುವಕನನ್ನು ಸಮಾಧಾನಪಡಿಸಿದ. ಮೊದಲ ಹುಡುಗನ ವರ್ತನೆಯ ಆಘಾತದಿಂದ ತನ್ನನ್ನು ತಾನು ಸುಧಾರಿಸಿಕೊಳ್ಳುತ್ತ ಯುವಕ ಇವನ ಅಂಗಡಿಯ ಮೂಲೆಯ ಸಣ್ಣಸ್ಟೂಲ್ ಒಂದರಲ್ಲಿ ಕುಳಿತು ಕಣ್ಣು ಹಾಯಿಸಿದ. ಇವನ ಅಂಗಡಿಯಲ್ಲೂಹೆಚ್ಚು ಕಡಿಮೆ ಅಂತಹುದೇ ಮಾಲು. ‘ಸರ್.. ನಾವು ನೈಜ ಬೆಲೆಗೆ ಮಾರುವವರು. ನಮ್ಮಲ್ಲಿ ಮೋಸ ಗೀಸ ಇಲ್ಲ..ಕ್ವಾಲಿಟಿ ಖಾತ್ರಿ ‘ ..ಈ ಹುಡುಗನ ಮಾತುಗಳನ್ನು ಕೇಳುತ್ತ ಆ ಮೋಸದ ವ್ಯಾಪಾರಿಯಿಂದ ಬಿಡುಗಡೆ ಮಾಡಿದ್ದಕ್ಕೆ ಥ್ಯಾಂಕ್ಸ್ ಹೇಳುತ್ತ ಯುವಕ ಇವನ ಬಳಿ ಹಾರವೊಂದನ್ನು ಪರೀಕ್ಷಿಸಿ ನೋಡಿ ಎರಡೂವರೆ ಸಾವಿರ ರೂಪಾಯಿಗೆ ಖರೀದಿಸಿ ತನ್ನ ಚೀಲದಲ್ಲಿ ಅದನ್ನು ಭದ್ರವಾಗಿಟ್ಟು ಅವನಿಗೆ ಕೃತಜ್ಞತೆ ತಿಳಿಸಿ, ಕಡಲ ಕಿನಾರೆಯ ಬಳಿಯಿದ್ದ ವಿಶ್ರಾಂತಿ ಕುಟೀರಗಳೊಂದರ ಕಂಬಕ್ಕೊರಗಿ ಕುಳಿತು ನಿರುಕಿಸುತ್ತ ಕೂತ.
ಸುತ್ತಲೂ ನೋಡುತ್ತಿರುವಾಗ ಇವನು ಕುಳಿತಿದ್ದ ಕಂಬದಿಂದ ಅನತಿ ದೂರದಲ್ಲಿ ಇನ್ನೊಂದು ಕುಟೀರದ ಕಂಬದ ಎಡೆಯಲ್ಲಿ ಇಬ್ಬರು ಹುಡುಗರು ಹಣವನ್ನು ಲೆಕ್ಕ ಮಾಡುತ್ತಾ, ಮಾತನಾಡುತ್ತಾ ಕುಳಿತಿದ್ದದ್ದು ಕಣ್ಣಿಗೆ ಬಿತ್ತು . ಆಕಸ್ಮಾತ್ ಅವರನ್ನು ಕಡೆಗಣ್ಣಲ್ಲಿ ನೋಡಿದ ಯುವಕನಿಗೆ ಅವರ ಮುಖಗಳು ಪರಿಚಿತವೋ ಎಂದು ಅನಿಸಿ ಪುನಃ: ತಲೆ ತಿರುಗಿಸಿ ಇನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿದ. …ಆ ಒಬ್ಬ ಹುಡುಗನ ಅಂಗಡಿಯಲ್ಲಿ ವಿಶ್ರಮಿಸಿ ತಾನು ಮುತ್ತಿನ ಹಾರ ಕೊಂಡದ್ದಲ್ಲವೇ.. ಮತ್ತೆ ಇನ್ನೊಬ್ಬ…ತನಗೆ ಮೊದಲಿಗೆ ದುಪ್ಪಟ್ಟು ಬೆಲೆ ಹೇಳಿದವನೇ ತಾನೇ…… ಅವರ ನಡುವೆ ಏನು ವ್ಯವಹಾರ….ಏನು ನಡೆಯುತ್ತ ಇದೆ ಇಲ್ಲಿ……ಹಾಗಾದರೆ!!!….ಒಂದು ಸಲ ತಲೆ ತಿರುಗಿದ ಹಾಗಾಗಿ, ಏಳಲೂ ಆಗದೆ, ಆಶ್ಚರ್ಯದಿಂದ ಗರಬಡಿದವನ ಹಾಗೆ ಆ ಯುವಕ ಸುಮಾರು ಹೊತ್ತು ಅಲ್ಲಿ ಕುಳಿತೇ ಇದ್ದ.