ಯುವಜೋಡಿಯೊಂದು ದಕ್ಷಿಣ ಭಾರತದಿಂದ ಉತ್ತರಭಾರತಕ್ಕೆ ವಿಹಾರ ಹೊರಟಿತ್ತು. ಪ್ರಯಾಣದ ಸಂತೋಷ, ಸುತ್ತಲಿನ ವಿವಿಧ ನೋಟಗಳು, ವೈವಿಧ್ಯಗಳು, ಪ್ರಾದೇಶಿಕ ವೈಶಿಷ್ಟ್ಯತೆಗಳು, ಇವೆಲ್ಲವನ್ನು ಅನುಭವಿಸುತ್ತ ಉತ್ತರಪ್ರದೇಶದ ಲಕ್ನೋ ವಿಮಾನ ನಿಲ್ದಾಣ ತಲುಪಿದಾಗ ಸಂಜೆಯಾಗಿತ್ತು. ವಿಮಾನ ನಿಲ್ದಾಣದಲ್ಲಿ ಟಾಕ್ಸಿಗೆ ಮುಂಗಡ ನೀಡಿ , ಮೊದಲೇ ಕಾಯ್ದಿರಿಸಿದ್ದ ಹೊಟೆಲ್ ನಲ್ಲಿ ಲಗೇಜು ಇಟ್ಟು, ಸ್ವಲ್ಪ ಕತ್ತಲಾವರಿಸಿದ್ದರೂ…ಪರವಾಗಿಲ್ಲ…..ಒಂದು ಸುತ್ತು ಊರು ನೋಡಿ ಬರೋಣ ಎಂದುಕೊಂಡು ಹೊರಟರು.
ಆ ದಿನ ಪರಿಚಯವಾದ ಸೈಕಲ್ ರಿಕ್ಷಾದ ಚಾಲಕ ..ಭೈಯಾ.. ಮುಂದೆ ಲಕ್ನೋದಲ್ಲಿ ಇದ್ದಷ್ಟು ದಿನವೂ ಅವರ ಪ್ರಯಾಣದ
ಸಾರಥಿಯಾಗುವನೆಂದು ಎಣಿಸಿರಲಿಲ್ಲ. ಮೊದಲ ದಿನವೇ ಅವನ ಉಲ್ಲಸಿತ ಮಾತುಗಳಿಂದ ಆಕರ್ಷಿತವಾದ ಜೋಡಿ, ಪ್ರತಿದಿನವೂ ಬೆಳಿಗ್ಗೆ ಹೊಟೆಲ್ ಬಳಿ ಬರುವಂತೆ ಆತನನ್ನು ಕೇಳಿಕೊಳ್ಳುತ್ತಿದ್ದರು. ಆತ ತಪ್ಪದೇ ಬಂದು ಇವರನ್ನು ತಿರುಗಲು ತನ್ನ ಸೈಕಲ್ ರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದ. ಅವನ ಸೈಕಲ್ ಚಾಲನೆಯ ಚಾಕಚಕ್ಯತೆ ಅವರಿಗೆ ಖುಶಿಯಾಗುತ್ತಿತ್ತು. ಲಕ್ನೋದ ಇತಿಹಾಸ ಪ್ರಸಿದ್ಧ ಸ್ಥಳಗಳಾದ ಭೂಲ್ ಭುಲೈಯಾ, ಬಾರಾ ಇಮಾಂಬಾರಾ, ಚಟ್ಟರ್ ಮಂಜಿಲ್ ಇತ್ಯಾದಿ ಆನೇಕ ಸ್ಥಳಗಳನ್ನು ನೋಡಿ ಬಂದಾಯಿತು. ದಿನದಿಂದ ದಿನಕ್ಕೆ ಸ್ನೇಹ ಬಲಿಯಿತು. ಪ್ರತಿದಿನದ ಸೈಕಲ್ ರಿಕ್ಷಾ ಬಾಡಿಗೆಯನ್ನು ದಿನದ ಕೊನೆಗೆ ಆತನಿಗೆ ನೀಡುತ್ತಿದ್ದರು. ಅವನು ಅದನ್ನು ಕಣ್ಣಿಗೊತ್ತಿಕೊಂಡು ಧನ್ಯವಾದ ಹೇಳುತ್ತದ್ದ ರೀತಿ ಮನ ಮುಟ್ಟುವಂತಿರುತ್ತಿತ್ತು.
ಪ್ರವಾಸದ ಕೊನೆಗೆ ಲಕ್ನೋದ ವಿಶೇಷ ತಿಂಡಿಯಾದ ಪೇಠಾವನ್ನು ಊರಿಗೆ ಕೊಂಡೊಯ್ಯಲು ಪ್ಯಾಕ್ ಮಾಡಿದರು. ಲಕ್ನೋದ ಪ್ರಸಿದ್ಧ ಕಸೂತಿ (ಚಿಕನ್ ವರ್ಕ್)ಯ ಚೂಡಿದಾರ್, ಸೀರೆ, ಕುರ್ತಾ ಪೈಜಾಮ ಇವುಗಳನ್ನು ತೆಗೆದುಕೊಂಡರು. ನವಾಬಿ ಸ್ಟೈಲ್ ನ ಶೂ ತೆಗೆದುಕೊಳ್ಳಬೇಕೆಂದು ಹುಡುಗನಿಗೆ ಆಸೆಯಾಗಿ, ತರತರಹದ ಶೂಗಳನ್ನು ನೋಡುತ್ತ, ಅಲ್ಲೇ ಅಂಗಡಿಯ ಬಳಿಯಲ್ಲಿ ಕಾಯುತ್ತಿದ್ದ ಸೈಕಲ್ ರಿಕ್ಷಾ ಭೈಯಾನ ಬಳಿ ‘ಯಾವ ಶೂಗಳನ್ನು ತೆಗೆದುಕೊಳ್ಳಬೇಕೆಂದು ಗೊಂದಲವಾಗುತ್ತಿದೆ. ಒಂದಕ್ಕಿಂತ ಒಂದು ಚೆನ್ನಾಗಿ ತೋರುತ್ತಿದೆ. ಯಾವುದು ತರಹದ್ದು ಕಂಫರ್ಟೆಬಲ್ ಇರುತ್ತದೆ.. .. ಸ್ವಲ್ಪ ಹೇಳು.. ನೀನು ಇಲ್ಲಿಯವನೇ ಅಲ್ಲವೇ’.. ಎನ್ನುತ್ತ ಆತನ ಕಾಲನ್ನು ನೋಡುವಾಗಲೇ ಅರಿವಾದದ್ದು.. ಆತ ಶೂ ಬಿಡಿ.. ಒಂದು ಸಾದಾ ಚಪ್ಪಲಿ ಸಹ ಧರಿಸದಿರುವುದು.. ಆತ ತಲೆ ಕೆರೆದುಕೊಳ್ಳುತ್ತ…’ಸಾಬ್… ನಾನು ಶೂ ಧರಿಸಿದ್ದೇ ಇಲ್ಲ..ಹೇಗೆ ಹೇಳಲಿ…’ ಎಂದು ನಗುತ್ತಲಿದ್ದ..
ಯುವಜೋಡಿಗೆ ಅಂಗಡಿಯಿಂದ ಹಿಂದೆ ಬಂದು ಕೊಂಡ ವಸ್ತು, ಶೂಗಳನ್ನುಪ್ಯಾಕ್ ಮಾಡುವಾಗ ಸೈಕಲ್ ರಿಕ್ಷಾದ ಭೈಯಾನ ಒಣಗಿದ, ಹಿಮ್ಮಡಿ ಸೀಳಿರುವ ದೊರಗು ಕಾಲುಗಳು ನೆನಪಾಗಿ ಏನೋ ತಪ್ಪಿತಸ್ಥ ಭಾವನೆ ಮೂಡುತ್ತಿತ್ತು.
ಕೊನೆಯ ದಿನ ಅವರು ಭೈಯನನ್ನು ಒಂದು ಶೂ ಅಂಗಡಿಗೆ ಕರೆದುಕೊಂಡು ಹೋಗಿ, ಆತನಿಗೆ ಸೈಕಲ್ ರಿಕ್ಷಾ ಬಿಡಲು ಅನುಕೂಲಕರವಾದ ಶೂಗಳನ್ನು ಕೊಂಡು ಉಡುಗೊರೆಯಾಗಿ ನೀಡಿದರು. ಸೈಕಲ್ ರಿಕ್ಷಾ ಇಳಿದು ಹೋಗುವಾಗ, ಆತನ ಒರಟು ಕಾಲುಗಳನ್ನು ನೇವರಿಸಿ, ತಾವು ಮೊದಲೇ ತೆಗೆದಿರಿಸಿದ್ದ ಮಾಯಿಶ್ಚರೈಸರ್ ಲೋಶನ್ ನನ್ನು ಸ್ವಲ್ಪ ಹಚ್ಚಿ ಹೇಗೆ ಉಪಯೋಗಿಸುವುದೆಂದು ತಿಳಿಸಿ, ಆ ಎರಡುಬಾಟಲ್ ಗಳನ್ನು ಅವನಿಗೆ ಉಪಯೋಗಿಸುವಂತೆ ಹೇಳಿದರು. ತುಂಬಿದ ಕಣ್ಣುಗಳಿಂದ ಆತನನ್ನು ಬೀಳ್ಕೊಡುವಾಗ ಅವನೂ ಅದೇ ಸ್ಥಿತಿಯಲ್ಲಿ ‘ಹೋಗೇ ಬಿಡುತ್ತೀರಾ.. ..ಪುನ: ಬನ್ನಿ’ ಎಂದ..
-ಸುಮನಾ