Posted in ಸಣ್ಣ ಕತೆ

ರುವಾಂಡಾ ದೇಶ ಪರ್ಯಟನೆಯ ಮೆಲುಕು-೫

ನಾವು ರುವಾಂಡಾದಲ್ಲಿ ಭೇಟಿಯಾದ ಬಹಳಷ್ಟು ಜನರ ಬಾಯಲ್ಲಿ ಅವರ ದೇಶದ President (ಅಧ್ಯಕ್ಷ), ಪೌಲ್ ಕಗಾಮೆಯವರ ಬಗ್ಗೆ ಮೆಚ್ಚುಗೆಯ ಮಾತು ಕೇಳುತ್ತಿತ್ತು. ಸ್ವಚ್ಛ, ಸುಂದರ, ಅಭಿವೃದ್ಧಿಯ ಕಡೆ ಸಾಗಿರುವ, ರುವಾಂಡಾದ ನವನಿರ್ಮಾಣದ ಇವರ ಬಹಳಷ್ಟು ಯೋಜನೆಗಳು ಒಂದೆೊಂದಾಗಿ ಕಾರ್ಯಗತಗೊಳ್ಳುತ್ತಿವೆ.

ವಿಶೇಷವೆಂದರೆ, ಅವರು ದೇಶದಲ್ಲಿ ಪ್ರಯಾಣ ಮಾಡುವಾಗ, ಕಸ -ಕೆೊಳೆ ಕಂಡಲ್ಲಿ, ತನ್ನ ವಾಹನದಿಂದ ಇಳಿದು ಸ್ವತ: ಸ್ವಚ್ಛತೆಯನ್ನು ಕೈಗೊಳ್ಳುತ್ತಾರಂತೆ! ಇದರಿಂದಾಗಿ ಜನ ಮುಜುಗರ ಅನುಭವಿಸುವುದು ಮಾತ್ರವಲ್ಲ, ಅಧ್ಯಕ್ಷರ ವಾಹನ, ಬೆಂಗಾವಲು ಪಡೆ ನಿಲುಗಡೆಯಿಂದ ಮೊದಮೊದಲು ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತಂತೆ!

ಅಲ್ಲಿ, ಸ್ಥಳೀಯ ಆಡಳಿತ ವ್ಯವಸ್ಥೆಗಳಿಗೆ ಸ್ವಚ್ಛತೆ ನಿರ್ವಹಿಸುವ ಕೆಲಸ ವಹಿಸಲಾಗಿದೆ ಮತ್ತು ಅಂತರ್ಸ್ಪರ್ಧೆಗಳನ್ನೂ ಏರ್ಪಡಿಸಲಾಗುತ್ತದೆ. ತಿಂಗಳಲ್ಲಿ ಒಂದು ರಜಾದಿನ ‘ಕಾರ್ ಫ್ರೀ ಡೇ’ ಆಗಿದ್ದು , ನಾಗರಿಕರು ಕಾಲ್ನಡಿಗೆಯಲ್ಲಿ ಹೋಗುತ್ತಾರೆ ಮತ್ತು ಕಡ್ಡಾಯ ಸ್ವಚ್ಛತಾ ಕೆಲಸಗಳಲ್ಲಿ ಪಾಲ್ಗೊಳ್ಳುತ್ತಾರೆ. ತೀರ ಬಡತನ ಇರುವ ಪ್ರದೇಶಗಳಲ್ಲಿ, ಮಣ್ಣಿನ ರಸ್ತೆ, ಸಣ್ಣಮನೆಗಳು ಇತ್ಯಾದಿ ಇದ್ದರೂ ಸ್ವಚ್ಛತೆಗೆ ಮಾತ್ರ ಚ್ಯುತಿಯಿಲ್ಲ❤️

ಭ್ರಷ್ಟಾಚಾರ ನಿರ್ಮೂಲನಕ್ಕೆ ಇಲ್ಲಿ ವಿಶಿಷ್ಟ ಕಾರ್ಯಯೋಜನೆಯಿದೆ. ಲಂಚ ಪಡೆಯುವವರೂ, ಕೊಡುವವರೂ ಐದು ವರ್ಷ ಸಜೆಯಂತಹ ಕಠಿಣ ಶಿಕ್ಷೆಗೆ ಒಳಗಾಗುತ್ತಾರೆ. ಸರ್ಕಾರದ ಕಡೆಯಿಂದ ಪ್ರತಿ ಡಿಪಾರ್ಟ್ಮೆಂಟ್ ಗಳಲ್ಲಿ ನಿಯೋಜಿಸಲ್ಪಟ್ಟಿರುವ ‘EYES’(ಕಣ್ಣುಗಳು) ಪಡೆ, ಸದಾ ಎಚ್ಚರವಾಗಿದ್ದು, ಲಂಚ ಚಟುವಟಿಕೆಗಳೇನಾದರೂ ಕಂಡಲ್ಲಿ ರಿಪೋರ್ಟ್ ಮಾಡುತ್ತಾರೆ. ಆದ್ದರಿಂದ ಯಾರಾದರೂ ಲಂಚ ನೀಡಲು ಬಂದರೆ, ಎದುರಿನವರಿಗೆ, ಇವರು ‘EYES’ ಇರಬಹುದೇನೋ ಎಂಬ ಶಂಕೆ ಮೂಡಿ, ಶಿಕ್ಷೆಗೊಳಗಾಗುವ ಭಯದಿಂದ ಲಂಚ ಪ್ರಕರಣಗಳೇ ಇಲ್ಲ ಎನ್ನುವಷ್ಟು ಕಡಿಮೆ ಎನ್ನುತ್ತಾರೆ ಇಲ್ಲಿನ ಜನ!

ಪ್ರವಾಸಿಗರ ಸುರಕ್ಷತೆಗೂ ಆದ್ಯತೆಯಿದೆ. ಪ್ರವಾಸೋದ್ಯಮ ದೇಶದ ಪ್ರಮುಖ ಆದಾಯಗಳಲ್ಲಿ ಒಂದು ಎಂದು ಸ್ಥಳೀಯರಿಗೆ ಮನವರಿಕೆ ಮಾಡಿರುವುದರಿಂದ ಅವರು ಅನ್ಯದೇಶೀಯರನ್ನು ಗೌರವದಿಂದ ಕಾಣುತ್ತಾರೆ. ಅಲ್ಲಿನ Moto (ಬಾಡಿಗೆಯ ದ್ವಿಚಕ್ರ ವಾಹನ)ದ ಚಾಲಕರ ಸಭ್ಯ ನಡವಳಿಕೆಯಿಂದ ಸ್ತ್ರೀಯರೂ ಸಹಜವಾಗಿ Motoದಲ್ಲಿ ರೈಡ್ ಹೋಗಬಹುದು. ಅಲ್ಲಿನ ಸುಸಜ್ಜಿತ ರಸ್ತೆಗಳಲ್ಲಿ ಮಾಡಿದ Moto ಪ್ರಯಾಣ ಒಂದು ಸುರಕ್ಷಿತವೆನಿಸಿದ ಚೇತೋಹಾರಿ ಸ್ವಾನುಭವ! ಈ Moto ವಾಹನಗಳು ಭಾರತದಿಂದ ಅಲ್ಲಿಗೆ ರಫ್ತಾಗುತ್ತವೆ ಎಂಬುದು ಹೆಮ್ಮೆಯ ವಿಚಾರ🤝🤝🤝

ವಾಹನಗಳ ಅತಿವೇಗದ ಚಾಲನೆಯಿಂದ ಆಗಬಹುದಾದ ಅವಘಡಗಳನ್ನು ತಪ್ಪಿಸಲು, ಟ್ರಾಫಿಕ್ ಪೋಲಿಸ್ ಮಾತ್ರವಲ್ಲದೆ, ರಸ್ತೆಯ ಬದಿಯ ಗಿಡಗಳೆಡೆಯಲ್ಲಿ ಸುಲಭವಾಗಿ ಕಾಣದಂತೆ ಅಡಗಿಸಿ ಇಟ್ಟಿರುವ ಕ್ಯಾಮೆರಾಗಳಿವೆ. ಸಿಕ್ಕಿ ಬಿದ್ದ ವಾಹನ ಬಿಡಿಸಲು, ಒಂದು ಸಲಕ್ಕೆ ಮುನ್ನೂರು ಡಾಲರಷ್ಟು ಅಧಿಕ ಮೊತ್ತದ ಫೈನ್ ಇದೆಯಂತೆ!

ಇನ್ನು ಸ್ವಲ್ಪ ಹೇಳಲಿಕ್ಕುಂಟು ಮುಂದಿನ ವಾರ ಕೊನೆಯ ಸಂಚಿಕೆಯಲ್ಲಿ😊🙏

-ಸುಮನಾ🙏✍️🌹❤️

Leave a Reply

Your email address will not be published. Required fields are marked *