Posted in ಸಣ್ಣ ಕತೆ

ರುವಾಂಡಾ ದೇಶ ಪರ್ಯಟನೆಯ ಮೆಲುಕು-೩

ಜಾನುವಾರುಗಳು ರುವಾಂಡದ ಸಂಸ್ಕೃತಿಯ ಒಂದು ಅವಿಭಾಜ್ಯ ಹಾಗೂ ಮುಖ್ಯ ಅಂಗ. ಕಿನ್ಯಾರುವಾಂಡಾ ಭಾಷೆಯಲ್ಲಿ, ,ಗಿರ ಇಂಕಾ, ಎಂದರೆ ‘ನಿಮಗೆ ಒಂದು ದನ ಸಿಗಲಿ’ ಎಂದು, ಅದೇ ರೀತಿ, ‘ ಅಮಾಶ್ಯೋ’ ಎಂದರೆ, ನಿಮಗೆ ‘ಸಾವಿರ ದನಗಳು ದೊರೆಯಲಿ’, ಎಂದೂ ಅರ್ಥ. ಇದು ಒಬ್ಬರು ಇನ್ನೊಬ್ಬರಿಗೆ, ಶುಭಾಶಯ, ಧನ್ಯವಾದ ವ್ಯಕ್ತ ಪಡಿಸುವ ರೀತಿ !😊❤️ರುವಾಂಡಾದಲ್ಲಿ ಹೊಸ ಮದುಮಕ್ಕಳಿಗೆ ಕರುವನ್ನು ಉಡುಗೊರೆಯಾಗಿ ನೀಡುವ, ಮದುವೆಯಲ್ಲಿ ದನಗಳನ್ನು ವಧು ದಕ್ಷಿಣೆಯಾಗಿ ಕೊಡುವ ಪರಿಪಾಠವಿದೆ. ಮಕ್ಕಳಿಗೆ ದನಗಳಿಗೆ ಸಂಬಂಧಿಸಿದ ಹೆಸರುಗಳನ್ನೂ ಇಡುತ್ತಾರೆ. ಉದಾ: ‘ಕನ್ಯಾನ’ ಎಂಬ ಹೆಸರಿನ ಅರ್ಥ ಹೆಣ್ಣುಕರು ಎಂದು.. ನನಗೆ ಆಗ ನೆನಪಾದದ್ದು, ನಮ್ಮಲ್ಲಿ ಪ್ರಚಲಿತವಿರುವ, ನಂದಿನಿ, ಸುರಭಿ ಮುಂತಾದ ಹೆಸರುಗಳು ಮತ್ತು ನಮ್ಮ ಇತರ ಪದ್ಧತಿಗಳು.. ಗೃಹಪ್ರವೇಶ ಸಂದರ್ಭದಲ್ಲಿ, ದನವನ್ನು ಮನೆಹೊಕ್ಕಿಸುವುದು ಇತ್ಯಾದಿ…

ರುವಾಂಡಾ ಸಂಸ್ಕೃತಿಯಲ್ಲಿ, ಜಾನುವಾರುಗಳಿಗೆ ಪರಂಪರಾನುಗತವಾಗಿ, ಬಹಳ ಮಹತ್ವವಿದೆ ಎಂಬುದನ್ನು, ರಾಜಧಾನಿ ಕಿಗಾಲಿಯಿಂದ ಸುಮಾರು ಎಂಬತ್ತೆಂಟು ಕಿ.ಮೀ. ದೂರವಿರುವ ಪ್ರಾಚೀನ ರಾಜರ ವಾಸಸ್ಥಳವಾಗಿದ್ದ, ನ್ಯಾ ನ್ಝಾ ಅರಮನೆ(Nyanza palace)ಯ ಪ್ರತಿಕೃತಿಯಲ್ಲಿ ಕಾಣಬಹುದು. ಅರಮನೆ ಎಂದಾಕ್ಷಣ, ನಮ್ಮ ಮನದಲ್ಲಿ ಮೂಡುವ ಕಲ್ಪನೆಗೂ, ಅಲ್ಲಿ ಕಾಣುವುದಕ್ಕೂ ಬಹಳ ವ್ಯತ್ಯಾಸವಿದೆ. ಒಂದು ತರಹದ ಮರದ ಒಣಗಿದ ರೆಂಬೆಕೊಂಬೆಗಳ ಮಾಡು -ಕಂಬಗಳ ಅರಮನೆ, ಆಹಾರ, ಹಾಲು, ಮದಿರೆ ಇತ್ಯಾದಿಗಳನ್ನು ಸಂಗ್ರಹಿಸಲು, ಬೇರು-ಬೆತ್ತ, ಚೀನಿಕಾಯಿ-ಸೋರೆಕಾಯಿಯ ಒಣಗಿಸಿದ ಬುರುಡೆ ಇತ್ಯಾದಿಗಳಿಂದ ತಯಾರಿಸಿದ ಬುಟ್ಟಿ-ಪಾತ್ರೆಗಳನ್ನು ಇಲ್ಲಿ ಕಾಣುತ್ತೇವೆ. ಇಲ್ಲಿ ಇನ್ಯಂಬೋ ಎಂಬ ತಳಿಯ ಎತ್ತರದ ನಿಲುವಿನ, ಆನೆಯ ದಂತವನ್ನು ಹೋಲುವ ಉದ್ದನೆಯ ಕೊಂಬುಗಳುಳ್ಳ ಸುಂದರ ದನಗಳು ಮನಮೋಹಕವಾಗಿವೆ. ಈ ತಳಿಯ ದನಗಳ ಹಾಲನ್ನು ರಾಜಮನೆತನದವರು ಉಪಯೋಗಿಸುತ್ತಿದ್ದರಂತೆ.

‘ಇಮಿಗೊಂಗೊ’, ಸೆಗಣಿಯನ್ನು ಉಪಯೋಗಿಸಿ ತಯಾರಿಸುವ ಒಂದು ಬಗೆಯ ಕಲಾಕೃತಿ. ಅದನ್ನು ಕಲಿಯುಬೇಕೆಂದು ಮನಸ್ಸಾದರೂ ಸಮಯದ ಅಭಾವದಿಂದ ಸಾಧ್ಯವಾಗಲಿಲ್ಲ.

‘ಮಿಲ್ಕ್ ಬಾರ್’( Milk Bar)ನ ಪರಿಕಲ್ಪನೆ, ರುವಾಂಡಾ ದೇಶದ ಇನ್ನೊಂದು ವಿಶೇಷ. Milk Barಗಳಲ್ಲಿ ಮದ್ಯ ದೊರೆಯದು, ಬದಲಾಗಿ, ದನದ ಬಿಸಿ ಹಾಲು, ಲಸ್ಸಿ(ಮಜ್ಜಿಗೆ) ತರಹದ ಇನ್ನೊಂದು ಪೇಯ ಹಾಗೂ ಬ್ರೆಡ್ ತರಹದ ತಿಂಡಿ ದೊರೆಯುತ್ತದೆ. ರುವಾಂಡನ್ನರು, ಪರಸ್ಪರ ಭೇಟಿಗೆ(hang out), ಮಿಲ್ಕ್ ಬಾರ್ ಗೆ ಹೋಗುವುದನ್ನು ಇಷ್ಟ ಪಡುತ್ತಾರೆ. ನಮಗೂ ಇದೊಂದು ವಿಶೇಷ ಅನುಭವವಾಯಿತು😊

ರುವಾಂಡಾ ಇತರ ತಳಿಯ ದನಗಳನ್ನು ನೋಡುವ ಅವಕಾಶವೂ ದಾರಿಮಧ್ಯದಲ್ಲಿ ದೊರಕಿತ್ತು. ಅವು ಕಪ್ಪು-ಬಿಳಿ ಮಿಶ್ರ ವರ್ಣದವುಗಳಾಗಿದ್ದು, ನಮ್ಮ ಸ್ಥಳೀಯ ದನಗಳಿಗಿಂತ ದೊಡ್ಡವಿವೆ.

-ಸುಮನಾ❤️🌹🙏😊

Leave a Reply

Your email address will not be published. Required fields are marked *