ಕಳೆದ ನವೆಂಬರ್ ೧೦ರಂದು ಮುಂಬೈ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಂಟು ಗಂಟೆ ಪ್ರಯಾಣಿಸಿ, ಬೆಳಗ್ಗೆ ರುವಾಂಡಾದ ರಾಜಧಾನಿ, ಕಿಗಾಲಿಯ ವಿಮಾನ ನಿಲ್ದಾಣ ತಲುಪಿದಾಗ,
Hello.. how are you..you are welcome.. ಎನ್ನುತ್ತ ಸ್ವಾಗತದ ಮುಖಮುದ್ರೆಯೊಂದಿಗೆ ನಮ್ಮನ್ನು ಬರಮಾಡಿಕೊಂಡರು ಅಲ್ಲಿನ ಸಿಬ್ಬಂದಿ. ರುವಾಂಡಾ ಪ್ರಜೆಗಳು, ಕಿನ್ಯಾರುವಾಂಡಾ(ಸ್ಥಳೀಯ ಭಾಷೆ), ಫ್ರೆಂಚ್ (ವಸಾಹತುಶಾಹಿಗಳಿಂದ ಬಂದ ಭಾಷೆ) ಹಾಗೂ ಪ್ರಾಚೀನ ಭಾಷೆ, ಸ್ವಾಹಿಲಿ(ಸಂಸ್ಕೃತಕ್ಕೆ ಹತ್ತಿರವಿದೆ ಎಂದು ಕೇಳಿದ್ದೇನೆ)ಗಳನ್ನು ಬಲ್ಲವರಿದ್ದಾರೆ. ಇಂಗ್ಲಿಷ್ ಭಾಷೆಯು ಈಗ ಸರ್ವವ್ಯಾಪಿಯಾಗುತ್ತಿರುವುದರಿಂದ ಆ ಭಾಷೆಯೂ ಬಹುತೇಕರಿಗೆ ತಿಳಿದಿದೆ.
ಅಲ್ಲಿನ ವಾಸದ ಅಷ್ಟೂ ದಿನಗಳಲ್ಲಿ ಮನಸ್ಸನ್ನು ಪ್ರಫುಲ್ಲಗೊಳಿಸಿದ್ದು, ಕಂಡ ಪ್ರಾಣಿ, ಪಕ್ಷಿ ಹಾಗೂ ಸಸ್ಯ ಸಂಕುಲ. ಆದ್ದರಿಂದ ರುವಾಂಡಾದ ಹಿಂದಿನ ದಾರುಣ ಚರಿತ್ರೆ, ಚಾರಿತ್ರಿಕ ಸ್ಥಳಗಳು, ಮತ್ತು ಇಂದಿನ ವ್ಯಾಪಾರ-ವ್ಯವಹಾರಗಳ ಆರೋಗ್ಯಕರ ಬೆಳವಣಿಗೆಗಳ ಬಗೆಗೆ ಕಂಡುದನ್ನು ಹೇಳುವ ಮೊದಲು, ಪಕ್ಷಿ, ಪ್ರಾಣಿ ಹಾಗೂ ಸಸ್ಯಗಳ ಬಗ್ಗೆ ಸ್ವಲ್ಪ ಮಾತು
ಅಲ್ಲಿ, ಸುಮಾರು ಮುಂಜಾನೆ, ಐದು-ಐದೂವರೆ ಹೊತ್ತಿಗೆ, ಬೆಳಕು ಮೂಡಲಾರಂಭಿಸುತ್ತದೆ. ಅದಕ್ಕಿಂತ ಒಂದುಗಂಟೆ ಮೊದಲೇ ಆರಂಭವಾಗುವ ಹಕ್ಕಿಗಳ ಚಿಲಿಪಿಲಿ, ನಾವು ಕಾಫಿ ಕಪ್ ನೊಂದಿಗೆ, ಸುಂದರ ಸುವಿಶಾಲ ಬಾಲ್ಕನಿಯಿಂದ ಹೊರಗೆ ನೋಡುವಷ್ಟರಲ್ಲಿ, ತಾರಕಕ್ಕೇರಿರುತ್ತದೆ. ಆಗ ದೊರೆತದ್ದು, ತೆಂಗಿನ ಮರದಲ್ಲಿ ಗೂಡುಗಟ್ಟಿರುವ ಹಳದಿ ರಂಗಿನ ಹಕ್ಕಿಗಳ, ನಭದಲ್ಲಿ ಹಾರಾಡುವ ಬಿಳಿ ಹದ್ದುಗಳ, ಮರ, ಮಾಡುಗಳ ಮೇಲೆ ಕುಳಿತಿರುವ ಬಿಳಿಕೊರಳಿನ ದಷ್ಟಪುಷ್ಟ ಕಾಗೆಗಳ ದರ್ಶನ.!
ಮುಂದೆ, ದೊರೆತದ್ದು, ಅಲ್ಲಿನ ಅಕಾಗೆರ ನ್ಯಾಶನಲ್ ಪಾರ್ಕ್ ನಲ್ಲಿ, ಓಪನ್ ಲ್ಯಾಂಡ್ ಕ್ರೂಜರ್ ಒಂದರಲ್ಲಿ, ಸಾಗಿ, ವಿಶಾಲ ಬಯಲು, ಹಾಗೂ ದೂರ ದೂರದಲ್ಲಿ ಮಟ್ಟಸ ಮರಗಳನ್ನು ಹೊಂದಿರುವ ಸವನ್ನಾ ಕಾಡುಗಳ ಮಧ್ಯೆ ಇರುವ ಜಿರಾಫೆ, ಝೀಬ್ರಾ, ಸಿಂಹ, ಚಿರತೆ ಮುಂತಾದ ಪ್ರಾಣಿಗಳ ಬಹಳ ರೋಮಾಂಚಕಾರಿ ಭೇಟಿ. ಆನಂತರ ಮುಂಚಿನ ರಾಜರ ಅರಮನೆ ಪ್ರದೇಶದಲ್ಲಿ ಅಲ್ಲಿನ ಜಾನುವಾರುಗಳ ಪೈಕಿ, ದೊಡ್ಡ ಬಿಳಿಕೊಂಬಿನ ದನಗಳನ್ನು ಕಂಡು ಮೂಡಿದ್ದು ಅಪರಿಮಿತ ಬೆರಗು. ನಮ್ಮ ದೇಶದಲ್ಲಿರುವಂತೆಯೇ, ರುವಾಂಡಾ ಸಂಸ್ಕೃತಿಯಲ್ಲಿ ಹೈನುಗಳಿಗೆ ಮಹತ್ವದ ಉಚ್ಚ ಸ್ಥಾನವಿದೆ. ಆ ಬಗ್ಗೆ ಮುಂದೆ ಹೇಳುವೆ..
ತಮ್ಮೆಲ್ಲರ ಸ್ನೇಹಾಂಕಿತೆ,
ಸುಮನಾ