ಚಿತ್ತಕಲುಕುವ ಘೋರ ಜನಾಂಗೀಯ ಯುದ್ಧದ ಪರಿಣಾಮ, 1994ರಲ್ಲಿ, ಅಂದರೆ ಸರಿಸುಮಾರು ಇಪ್ಪತ್ತೇಳು ವರುಷಗಳ ಹಿಂದೆ ರುವಾಂಡಾ ದೇಶದ ಜನಮಾನಸ ವ್ಯಾಕುಲತೆಯ ಪರಾಕಾಷ್ಠೆಯಲ್ಲಿ ಮುಳುಗಿತ್ತು. ಅತಿದ್ವೇಷ ಹಾಗೂ ಹಗೆತನದ ಘೋರ ಪರಿಣಾಮಗಳನ್ನು ಮನಗಂಡ ಆ ದೇಶ ಇಂದು, ಶಾಂತಿಯುತ ಸಹಬಾಳ್ವೆ, ಶಿಸ್ತು ಹಾಗೂ ಪರಿಶ್ರಮಗಳತ್ತ ಮನಹರಿಸಿ, ಮಧ್ಯಪೂರ್ವ ಆಫ್ರಿಕಾದ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮುತ್ತಲಿದೆ.
ರುವಾಂಡಾ ಸುಮಾರು ೨೩೦೦೦ ಚ. ಕಿ ಮೀ ವಿಸ್ತೀರ್ಣ ಹೊಂದಿರುವ ಪುಟ್ಟ ದೇಶ. ಇದನ್ನು ವಿಶ್ಲೇಷಕರು ಇತ್ತೀಚೆಗೆ ‘ಆಫ್ರಿಕಾದ ಸಿಂಗಾಪುರ’ ಎಂದು ವರ್ಣಿಸುತ್ತಿದ್ದಾರೆ. ವರ್ಷ ಪೂರ್ತಿ ಆಹ್ಲಾದಕರ ತಾಪಮಾನವಿರುವುದರಿಂದ ಈ ದೇಶದಲ್ಲಿ ಫ್ಯಾನ್ ಅಥವಾ ವಾತಾಯಾನ ವ್ಯವಸ್ಥೆಯ (AC) ಅವಶ್ಯಕತೆಯೇ ಇಲ್ಲ ಎಂಬುದು ಬಹಳ ವಿಶೇಷವಾದರೂ ನಿಜ. ಈ ದೇಶವನ್ನು Land of thousand Hills(ಸಾವಿರ ಬೆಟ್ಟಗಳ ಭೂಮಿ) ಎಂದು ಕರೆಯುತ್ತಾರೆ. ಮನ ತಣಿಸುವ ಭೌಗೋಳಿಕ ಸೌಂದರ್ಯ, ಹಿತಕರ ಹವೆ ಹಾಗೂ ದುಃಸ್ಸಪ್ನವಾಗಿ ಕಾಡುವ ರಕ್ತಸಿಕ್ತ ನರಮೇಧದ ಕೆಟ್ಟ ಚರಿತ್ರೆಯನ್ನು ಅಳಿಸಿ ನವ ರಾಷ್ಟ್ರ ನಿರ್ಮಾಣದ ಕನಸಿನೊಂದಿಗೆ ಉತ್ಸಾಹದಿಂದ ಕೆಲಸ ನಿರ್ವಹಿಸುವ ಆಡಳಿತ ಹಾಗೂ ಜನತೆ ಇವುಗಳ ಒಟ್ಟು ಮೊತ್ತವನ್ನು ನಾವು ಈಗಿನ ರುವಾಂಡಾ ದೇಶದಲ್ಲಿ ಕಾಣುತ್ತೇವೆ. ಸ್ವಚ್ಛ, side-walk (ಕಾಲು ದಾರಿ) ಇರುವ ರಸ್ತೆಗಳು, ನಗುಮೊಗದ ಜನತೆ, ದಟ್ಟಬಣ್ಣಗಳ ಅವರ ಉಡುಗೆ -ತೊಡುಗೆ, ದೇಶದ ಪರಂಪರೆ ಸಂಸ್ಕೃತಿಯನ್ನು ಉಳಿಸಿಕೊಂಡು ಸಾಧಿಸುತ್ತಿರುವ ಆರ್ಥಿಕ ಪ್ರಗತಿ ಇವು ಮೊದಲ ನೋಟಕ್ಕೆ ಸೆಳೆದ ಅಂಶಗಳು. ಒಟ್ಟು ಹತ್ತು ದಿನದ ಪ್ರವಾಸದಲ್ಲಿ ಆ ದೇಶದ ಸ್ಥೂಲ ಪರಿಚಯ ಮಾತ್ರವಲ್ಲದೆ, ವಿಶೇಷಾತಿ ವಿಶೇಷ ಎಂದೆನಿಸಿದ ಅನುಭವಗಳೂ ಆಗಿವೆ. ಅವುಗಳನ್ನು ಮುಂದೆ ಹೇಳುವ ಎಂದುಕೊಂಡಿದ್ದೇನೆ. ಪ್ರವಾಸದ ಸಮಯದಲ್ಲಿ ಕ್ಲಿಕ್ ಮಾಡಿದ ಕೆಲವು ಚಿತ್ರಗಳನ್ನು ಈ ಕೆಳಗೆ ಹಂಚಿಕೊಳ್ಳುತ್ತಿದ್ದೇನೆ
-ಸುಮನಾ