ಮನೆಯಲ್ಲಿ ಪಚ್ಚುವಿನ ಉಪನಯನದ ತಯಾರಿ. ಹಾಲ್ ಬುಕಿಂಗ್, ಆಮಂತ್ರಣ ಪತ್ರಿಕೆಯ ವಿನ್ಯಾಸ ಹಾಗೂ ಮುದ್ರಣ, ಆ ನಂತರ ಸಂಬಂಧಿಕರ, ಮಿತ್ರರ ಮನೆಗೆ ಆಹ್ವಾನ, ಕೇಟರಿಂಗ್ ನವರೊಂದಿಗೆ ಭಕ್ಷ ಭೋಜ್ಯಗಳ ಬಗ್ಗೆ ನಿರ್ಣಯ, ವಟುವಿನ ಉಡುಪು-ಅಲಂಕಾರ, ಮನೆಯವರಿಗೆ, ಬಂಧುಗಳಿಗೆ ಬಟ್ಟೆಬರೆ ಎಲ್ಲ ತಯಾರಿಯೂ ಜೋರಾಗಿ ನಡೆದಿತ್ತು.
ಏಳು ಕಳೆದು ಎಂಟು ವರುಷಕ್ಕೆ ಕಾಲಿಡುತ್ತಿರುವ ವಟು ಅಮ್ಮನ ಹಿಂದೆ ಸುತ್ತಾಡುತ್ತಾ, ಕುತೂಹಲದಿಂದ ಕಾರ್ಯಕ್ರಮದ ಬಗ್ಗೆ ಹಲವು ಪ್ರಶ್ನೆ ಕೇಳುತ್ತಲಿದ್ದ. ಎಷ್ಟು ಜನ ಬರ್ತಾರಮ್ಮ?, ನನ್ನ ಗೆಳೆಯರೊಂದಿಗೆ ಆ ದಿನ ಆಟ ಆಡಬಹುದಾ?, ನನ್ನ ಟೀಚರ್ ಬರ್ತಾರಾ? ಆ ದಿನ ಐಸ್ಕ್ರೀಮ್ ಇದೆಯಾ? ಹೀಗೆ ಹಲವು ತರಹ. ನೀನು ಆ ದಿನ ಹಿರಿಯರು ಹೇಳಿದ ಹಾಗೆ ಶಿಸ್ತಲ್ಲಿರಬೇಕು, ಪಂಚೆ ಉಡಬೇಕು, ಮಂತ್ರ ಪಠಿಸಬೇಕು, ದೊಡ್ಡವರ ಒಪ್ಪಿಗೆ ಪಡೆಯದೆ ಸ್ಟೇಜ್ ಬಿಟ್ಟು ಹೋಗಬಾರದು, ಇತ್ಯಾದಿ ಅಮ್ಮ ಹೇಳುತ್ತಿದ್ದರೆ, ಎಲ್ಲದಕ್ಕು ಖುಶಿಯಿಂದ ಜಿಗಿದಾಡುತ್ತ ಹೂಗುಟ್ಟುತ್ತಿದ್ದ ಹುಡುಗ!
ಇನ್ನೇನು..ಉಪನಯನದ ದಿನಕ್ಕೆ ಮೂರು-ನಾಲ್ಕು ದಿನ ಇರುವಾಗ ಒಂದು ದಿನ ಓಡಿ ಬಂದ ಪಚ್ಚು ಅಮ್ಮನ ಮಡಿಲಿನಲ್ಲಿ ಜೋರಾಗಿ ಅಳಲಾರಂಭಿಸಿದ. ಅಮ್ಮನಿಗೆ ಗಾಬರಿ. ‘ಯಾಕೆ ಮಗಾ ಏನಾಯ್ತು? ‘ ಎಂದಾಗ ಅಳುತ್ತಲೇ ‘ಅಮ್ಮ, ಉಪನಯನದ ದಿನ ನನಗೆ ಗಿಫ್ಟ್ ಇಲ್ಲಾಂತೆ.. ಯಾಕಮ್ಮ ಹಾಗೆ ಇನ್ವಿಟೇಶನ್ ನಲ್ಲಿ ಬರೆದದ್ದೂ.. ಊಂ.. ನನ್ಗೆ ಗಿಫ್ಟ್ ಬೇಕೂ.. ಈಗಲೇ ನಾವಿಬ್ಬರೂ ಎಲ್ಲರ ಮನೆಗೆ ಹೋಗಿ ಕಾಗದದಲ್ಲಿ ಕೈ ತಪ್ಪಿ ಗಿಫ್ಟ್ ಇಲ್ಲ ಅಂತ ಬರೆದಿದ್ದೇವೆ.. ಸಾರಿ(sorry)ಅಂತ ಹೇಳಿ ಬರೋಣ.. ಬಾ ಹೊರಡು… ಹೋಗೋಣ ಎನ್ನಬೇಕೇ
ಸುತ್ತಲಿದ್ದ ಎಲ್ಲರೂ ನಗು ಅಡಗಿಸಲು ಪ್ರಯತ್ನ ಪಡುತ್ತಿರುವಾಗ, ‘ನಿನಗೆ ಗಿಫ್ಟ್ ತರೋದಿದೆ. ಆಟಿಕೆ, ಪುಸ್ತಕ, ಕಲರ್ ಪೆನ್ಸಿಲ್ ಏನೇನು ಬೇಕೋ ಕೊಡಿಸ್ತೇನೆ, ಇವತ್ತೇ ಹೋಗೋಣ’ ಅಮ್ಮನೆಂದಾಗ ಕ್ಷಣಿಕ ಸಮಾಧಾನದಲ್ಲಿ ಮಗು ಸುಮ್ಮನಾದ. ಅವನಿಗೆ ತಿಳಿಸಿ ಹೇಳುವುದು ಹೇಗೆ ಅಂತ ಯೋಚಿಸುತ್ತಲಿದ್ದ ಅಮ್ಮನ ಮುಖದಲ್ಲಿ ತೆಳುನಗೆಯ ಲೇಪವಿತ್ತು
-ಸುಮನಾ