Posted in ಸಣ್ಣ ಕತೆ

ಭಾರತೀಯರು ನಾವು ಭಾರತೀಯರು

ಅದು ಯುನಿವರ್ಸಿಟಿಯ ಮೊದಲ ಸೆಮಿಸ್ಟರ್ ನ ಪರೀಕ್ಷೆ ಮುಗಿದು, ನಂತರದ ಸೆಮಿಸ್ಟರ್ ನ ನಡುವಿನ ರಜಾಕಾಲ ಆರಂಭದ ದಿನ. ಅಮೇರಿಕಾದ ನ್ಯೂಯಾರ್ಕ್ ನಿಂದ ಸುಮಾರು ನೂರು ಕಿ. ಮೀ. ದೂರದಲ್ಲಿರುವ ಲಾಂಗ್ ಐಲಾಂಡ್ ಎಂಬಲ್ಲಿ ಶಿಖಾ ಕಲಿಯುತ್ತಿದ್ದ ಯುನಿವರ್ಸಿಟಿ ಇದೆ. ಮೊದಲ ಬಾರಿಗೆ ತಾಯ್ನಾಡು ಭಾರತವನ್ನು ಬಿಟ್ಟು ಬೇರೆ ದೇಶದಲ್ಲಿ, ಹೊಸ ಪರಿಸರದಲ್ಲಿ ,ಶಿಖಾ ಶಿಕ್ಷಣ ಪಡೆಯುತ್ತಿದ್ದಾಳೆ. ಅಲ್ಲಿನ ಹೊಸ ಕಲಿಕಾ ವಿಧಾನ, ಪಾಶ್ಚಿಮಾತ್ಯ ಸಂಸ್ಕೃತಿ ಇವುಗಳನ್ನು ಗಮನಿಸುತ್ತ ಒಗ್ಗಿಕೊಳ್ಳುತ್ತ ಇದ್ದಾಳೆ.

ದಿನ ಮಧ್ಯಾಹ್ನ ಶಿಖಾಳ ಕೊನೆಯ ಪರೀಕ್ಷೆ ಮುಗಿದಿದೆ. ಆ ದಿನವೇ ಹೊರಡುವ ವಿಮಾನದಲ್ಲಿ ಮುಂಬಯಿಗೆ ಟಿಕೆಟ್ ಮುಂಚಿತವಾಗಿ ಬುಕ್ ಮಾಡಿ ಇಟ್ಟಿದ್ದಾಳೆ.

ಯುನಿವರ್ಸಿಟಿ ನಿಯಮದ ಪ್ರಕಾರ, ಹೊರಡುವ ಮುನ್ನ ತನ್ನ ಹಾಸ್ಟೆಲ್ ಕೊಠಡಿಯ ಸಾಮಾನುಗಳನ್ನು ಪ್ಯಾಕ್ ಮಾಡಿ ಅದನ್ನು ಯುನಿವರ್ಸಿಟಿ ಒದಗಿಸಿರುವ ಡಾಕ್ ಕೊಠಡಿಯಲ್ಲಿ ಇರಿಸಿ, ಅದರ ಬಾಡಿಗೆಯನ್ನು ಕೊಟ್ಟು, ತನ್ನ ಎರಡು ದೊಡ್ಡ ಬ್ಯಾಗ್ ಗಳೊಂದಿಗೆ ಯುನಿವರ್ಸಿಟಿ ಯಿಂದ ಹೊರಬಂದು ಕ್ಯಾಬ್ ಒಂದನ್ನು ಹಿಡಿದು ಏರ್ ಪೋರ್ಟ್ ಗೆ ಅವಸರದಿಂದ ಹೊರಟಿದ್ದಾಳೆ.

ಅಮೇರಿಕಾದಲ್ಲಿ ತನ್ನ ಎಲ್ಲ ಕೆಲಸಗಳನ್ನು ಸ್ವತಃ ಮಾಡಬೇಕಾಗಿ ಬಂದಿದ್ದರಿಂದಲೂ, ಪರೀಕ್ಷೆಗಾಗಿ ಬಹುದಿನಗಳ ಓದಿನ ತಯಾರಿಯಿಂದಲೂ ತಾನು ದಣಿದಿರುವುದು ಅವಳ ಗಮನಕ್ಕೆ ಬಂದಿದೆ. ಹಾಗಾಗಿ ಊರಿಗೆ ಹೋಗಿ ಮನೆಯಲ್ಲಿ ಹಾಯಾಗಿ ಕಾಲ ಕಳೆಯುವ ಸಮಯಕ್ಕೆ ಎದುರು ನೋಡುತ್ತಿದ್ದಾಳೆ.

ಕ್ಯಾಬ್ ಏರಿ ಬಂದು ಏರ್ ಪೋರ್ಟ್ ತಲುಪುವಷ್ಟರಲ್ಲಿ, ಹಸಿವಾಗಿರುವುದು ಅರಿವಾಗಿ, ಹೊಟ್ಟೆ ತಣಿಸಲೆಂದು, ಅಲ್ಲೇ ಹೊರ ಆವರಣದಲ್ಲಿರುವ ಆ ಸ್ನಾಕ್ ಕಾರ್ನರ್ ಒಂದರ ಉದ್ದದ ಕ್ಯೂ ಹಿಡಿದು ಒಂದು ಸ್ಯಾಂಡ್ವಿಚ್ ಮತ್ತು ಕಾಫಿ ಆರ್ಡರ್ ಮಾಡಿ ಉಸ್ಸಪ್ಪಾ ಎಂದುಕೊಳ್ಳುತ್ತಾ ಳೆ…ಸ್ಯಾಂಡ್ ವಿಚ್ ತಿಂದು ವಿಮಾನದ ಸೆಕ್ಯೂರಿಟಿ ಚೆಕ್ ಮುಗಿಸಿ ಗೇಟ್ ತಲುಪಿದರೆ ಮತ್ತೆ ರಿಲಾಕ್ಸ್.. ಎಂದುಕೊಳ್ಳುತ್ತ, ಊರು ತಲುಪುವ ಬಗ್ಗೆ ಕನಸು ಕಾಣುತ್ತ ಇರುವಷ್ಟರಲ್ಲಿ, ಕೌಂಟರ್ ನ ವ್ಯಕ್ತಿ, ಒಂಭತ್ತು ಡಾಲರ್ ಗೆ ಬಿಲ್ ಕೊಡುತ್ತಾನೆ. ಬಿಲ್ ಕೊಡಲೆಂದು ಹಾಂಡ್ ಬ್ಯಾಗ್ ನೋಡಿದಾಗ ಅಲ್ಲಿ.. ಅರೆ.. ಪರ್ಸ್ ಇಲ್ಲ..ಹೂಂ…ಬಹುಶ: ತಾನು ಪರ್ಸನ್ನು ತರಾತುರಿಯಲ್ಲಿ ತಪ್ಪಿ ದೊಡ್ಡ ಬ್ಯಾಗ್ ನಲ್ಲಿ ಇಟ್ಟಿರಬೇಕೆಂದು ಎಣಿಸಿ, ದೊಡ್ಡ ಬ್ಯಾಗ್ ತೆರೆದು ಹುಡುಕಬೇಕೆ..ಅಥವಾ ಹಾಂಡ್ ಬ್ಯಾಗ್ ನ ಸಂದಿ ಮೂಲೆಯಲ್ಲಿ ಎಲ್ಲಾದರೂ ಹತ್ತು ಡಾಲರ್ ಅಡಗಿ ಇರಬಹುದೇ ಎಂದು ತಡಕಾಡುತ್ತಿರುವಷ್ಟರಲ್ಲಿ ಕ್ಯೂನಲ್ಲಿ ಅವಳ ಹಿಂದಿರುವ ವ್ಯಕ್ತಿ ಅವಳ ಬೆನ್ನು ತಟ್ಟಿ ತನ್ನ ವಾಲೆಟ್ ನಿಂದ ಹೊತ್ತು ಡಾಲರ್ ತೆಗೆದು ಕೌಂಟರ್ ನಲ್ಲಿ ಕೊಟ್ಟು ಅವಳನ್ನು ನೋಡಿ ‘ Hey Girl, grab your food and run.. don’t miss your flight’ (ನಿನ್ನ ಆಹಾರ ಪೊಟ್ಟಣವನ್ನು ತೆಗೆದುಕೊಂಡು ಬೇಗ ಹೋಗು..ವಿಮಾನ ತಪ್ಪಿಸಿಕೊಳ್ಳಬೇಡ) ಎನ್ನುತ್ತಾರೆ..ಈ ಅಪರಿಚಿತರ ನಡುವೆ ಇವರು ಯಾರು ನನ್ನ ಸಹಾಯಕ್ಕೆ ಬಂದದ್ದು ..ಎಂದು ಆಶ್ಚರ್ಯ ದಿಂದ ಅವರನ್ನು ನೋಡುತ್ತಾ, ಥಾಂಕ್ಯೂ…ಥಾಂಕ್ಯೂವೆರಿ ಮಚ್..ಎಂದು ಆಹಾರ ಪೊಟ್ಟಣವನ್ನು ತೆಗೆದುಕೊಂಡು, ಶಿಖಾ ಬದಿಗೆ ಬಂದು, ಪರ್ಸ್ ಹುಡುಕಿ ದುಡ್ಡು ಹಿಂದಿರುಗಿಸಲು ಹವಣಿಸುವಾಗ, ಆತ ದೂರದಿಂದಲೇ ‘ No need to return the money..you look Indian.somebody did this for me in my trip to India. Great Indian people.. I love India..go..have a safe trip (ಹಣವನ್ನು ಹಿಂದಿರುಗಿಸುವುದು ಬೇಡ..ನೀನು ಭಾರತೀಯಳ ಹಾಗೆ ಕಾಣುತ್ತೀ..ನಾನು ಭಾರತಕ್ಕೆ ಬಂದಿದ್ದಾಗ ನನಗೆ ಯಾರೋ ಹೀಗೇ ಮಾಡಿದ್ದರು..ನನಗೆ ಭಾರತವೆಂದರೆ ಇಷ್ಟ..ಭಾರತೀಯರು ಒಳ್ಳೆಯ ಜನಾಂಗ..ಹೋಗು ಹೋಗು.. ಶುಭಪ್ರಯಾಣ) ಎನ್ನಲು..ಆತನಿಗೆ ನಗುತ್ತಾ ಕೈಬೀಸಿ ವಿಮಾನದ ಸೆಕ್ಯೂರಿಟಿ ಚೆಕ್ ದ್ವಾರದೆಡೆಗೆ ಸ್ಯಾಂಡ್ ವಿಚ್ ತಿನ್ನುತ್ತಾ ಹೆಮ್ಮೆ ಯಿಂದ ಅಡಿಯಿಡುತ್ತಾಳೆ ಶಿಖಾ.

-ಸುಮನಾ🌹🙏

Leave a Reply

Your email address will not be published. Required fields are marked *