ಹೊಸದಾಗಿ ಮದುವೆಯಾದ ತಾರಿಣಿಗೆ ಗಂಡನ ಮನೆಯಲ್ಲಿ ಅತ್ತೆಮಾವಂದಿರೊಂದಿಗಿದ್ದು ತನ್ನ ಆಫೀಸು ಕೆಲಸದ ನಿರ್ವಹಣೆ ಮಾತ್ರವಲ್ಲ, ಆ ಮನೆಯ ರೀತಿರಿವಾಜುಗಳನ್ನೂ ಕಲಿಯುವ ಸಂದರ್ಭ. ಚುರುಕಿನ ಹುಡುಗಿ ತಾರಿಣಿ ಎಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಮೆಚ್ಚಿನ ಸೊಸೆಯಾಗಿದ್ದಾಳೆ. ಅತ್ತೆ ಮಾವ ಅವಳನ್ನು ಮಗಳೆಂದೇ ಭಾವಿಸಿದ್ದಾರೆ. ಅವಳ ಗಂಡನಿಗೂ ತನ್ನ ಹೆಂಡತಿ ಎಲ್ಲರ ಪ್ರೀತಿ ಪಾತ್ರಳು ಎಂಬ ಹೆಮ್ಮೆ. ‘ನೀನು ಈಗಷ್ಟೆ ಬಂದಿದ್ದೀಯ. ಇಷ್ಟು ಬೇಗ ಎಲ್ಲರನ್ನು ಬುಟ್ಟಿಗೆ ಹಾಕ್ಕೊಂಡಿದ್ದೀಯ’ ಅಂತ ಹೆಂಡತಿಯನ್ನು ಛೇಡಿಸುತ್ತಿರುತ್ತಾನೆ.
ಹಾಗಂತ ತಾರಿಣಿಗೆ ಕೂತಲ್ಲಿ ಎದ್ದಲ್ಲಿ ತವರು ಮನೆಯ ನೆನಪಾಗುತ್ತಿರುತ್ತದೆ. ತನ್ನ ಅತ್ತೆ ಯೊಡನೆ ಸಂಭಾಷಿಸುವಾಗ ತವರು ಮನೆಯ ಬಗ್ಗೆ ಹೇಳುತ್ತಿರುತ್ತಾಳೆ. ತಂದೆತಾಯಿಯ ಬಗ್ಗೆ ಅಭಿಮಾನದ ಮಾತನಾಡುತ್ತಾಳೆ. ಗಂಡನೊಂದಿಗೂ ಹಾಗೇ. ತನ್ನ ಊರು ಪರಿಸರದ ಬಗ್ಗೆ ಹೇಳುವಾಗ ಭಾವುಕಳಾಗುತ್ತಾಳೆ. ಇದನ್ನೆಲ್ಲ ಗಮನಿಸುವ ಅತ್ತೆ, ಅವಳು ಬೇಸರಿಸಬಾರದೆಂದು ಮಗನಲ್ಲಿ ಹೇಳಿ ಹಲವೊಂದು ಸಲ ಇಬ್ಬರನ್ನೂ ಅವಳ ತವರು ಮನೆಗೆ ಹೋಗಿ ಇದ್ದು ಬರಲು ಕಳಿಸುವುದೂ ಉಂಟು.
ಮೊದಲ ವರುಷದ ದೀಪಾವಳಿಗೆ ತನ್ನೂರಿಗೆ ಹೋಗಿ ಬಂದ ನೆನಪು ಹಸಿಯಾಗಿರುವಾಗಲೇ ಎರಡನೆಯ ವರುಷದ ದೀಪಾವಳಿಯೂ ಬಂದಿದೆ. ದಿನತುಂಬ ಹಬ್ಬದ ಮನೆಯ ಸಡಗರದಲ್ಲಿ ಪೂರ್ತಿ ಮುಳುಗಿ, ಸಂಜೆ ದೀಪ ಹಚ್ಚುವ ಸಮಯ. ಮನೆಯೆಲ್ಲ ದೀಪದ ಮಂದ ಬೆಳಕಲ್ಲಿ ಶೋಭಿಸುತ್ತಿರುವುದನ್ನು ನೋಡುತ್ತ, ಗಂಡನೆೊಡನೆ,’ಎಷ್ಷು ಚೆನ್ನಾಗಿ ಕಾಣುತ್ತಿದೆಯಲ್ಲ, ನಾಳೆ ಎಲ್ಲ ಸ್ನೇಹಿತರನ್ನು ಕರೆದು ದೀಪಾವಳಿ ಮಾಡೋಣ. ನಿಮ್ಮ ಮನೆಯಲ್ಲಿ ಈ ತರಹ ಖುಶಿಯಾದರೆ, ನಮ್ಮ ಮನೆಯಲ್ಲಿ ಬೇರೆ ತರಹ. ಅಲ್ಲಿ ನಮ್ಮ ಮನೆಯಲ್ಲಿ ಕಸಿನ್ಸ್ ಎಲ್ಲ ಸೇರ್ಕೊಂಡು…..’ ಎನ್ನಲು ಹೆೊರಟಾಗ, ಗಂಡ, ತನ್ನ ಕೈಯಿಂದ ಅವಳ ಬಾಯನ್ನು ಮೆಲ್ಲನೆ ಮುಚ್ಚಿ, ‘ಪ್ಲೀಸ್ ತಾರಿಣಿ.. ಹಾಗಾದರೆ ನಿನಗಿನ್ನೂ ಈ ಮನೆ ನಿನ್ನ ಮನೆ ಅಂತ ಅನಿಸಿಲ್ವ’ ಅಂತ ಮುಖ ಸಣ್ಣದು ಮಾಡಿ ಹೇಳಿದಾಗಲೇ ಅವಳಿಗೆ ಅರಿವಾದದ್ದು, ಓ… ತಾನು ಈ ರೀತಿ ಅರಿವಿಲ್ಲದೆ, ‘ನಿಮ್ಮ ಮನೆ’ ಅಂತ ಹೇಳಿದ್ದರಿಂದ ಅವನಿಗೆ ನೋವಾಗಿದೆಯೆಂದು !..
ಎಚ್ಚೆತ್ತ ತಾರಿಣಿ ಪ್ರೀತಿ ತುಂಬಿದ ಕಣ್ಣುಗಳಿಂದ ಗಂಡನನ್ನು ನೋಡುತ್ತಾ, ‘ ಓಕೇ ಓಕೇ ನಾಳೆ ‘ನಮ್ಮ ಮನೆ’ಯಲ್ಲಿ ಎಲ್ಲರನ್ನೂ ಕರೆದು ಇವತ್ತಿಗಿಂತಲೂ ಗಡದ್ದಾಗಿ ದೀಪಾವಳಿ ಆಚರಿಸೋಣ’ ಎಂದು ಅವನ ಕೈ ಹಿಡಿದಾಗ ಅವರಿಬ್ಬರ ನಗೆಯ ಬೆಳಕು ಅಲ್ಲಿ ಎಲ್ಲರ ಮನವನ್ನು ಬೆಳಗಿ ಮುಖದಲ್ಲಿ ಮಂದಹಾಸವನ್ನು ಮೂಡಿಸುತ್ತದೆ
-ಸುಮನಾ