‘ಮನೆಯಲ್ಲೇ ಓದಿಕೊಳ್ಳಿ ಮಕ್ಕಳೇ, ನದಿಯಲ್ಲಿ ಹುಳು ಹುಪ್ಪಟೆ ಕಚ್ಚಬಹುದು, ನೀವು ಸಣ್ಣವರು, ನಿಮ್ಮಷ್ಟಕ್ಕೆೇ ಹೋಗಬೇಡಿ’ ಎನ್ನುತ್ತಿರುವುದನ್ನು ಲೆಕ್ಕಿಸದೆ, ‘ಅಮ್ಮಾ.. ಅಲ್ಲಿ ಕಲ್ಲು ಬಂಡೆಗಳ ಮೇಲೆ ಕುಳಿತು ಓದಿಕೊಳ್ಳುತ್ತೇವೆ ಬಿಡಮ್ಮಾ’
ಎಂದು ಹೇಳಿ, ಮನೆಯಲ್ಲಿರುವ ಕುರು ಮುರು ತಿಂಡಿ ಮತ್ತು ಪುಸ್ತಕ ಹಿಡಿದುಕೊಂಡು ನಾವು ಬೆಳಗಿನ ಹೊತ್ತು ತೋಟದ ಪಕ್ಕದಲ್ಲಿರುವ ನದೀಪಾತ್ರಕ್ಕೆ ಓಡುತ್ತಿದ್ದೆವು. ಪುಸ್ತಕ ಓದಿದ ಶಾಸ್ತ್ರ ಮಾಡಿ ನಂತರ ತಂದ ತಿಂಡಿ ತಿಂದುಕಲ್ಲು ಬಂಡೆಗಳ ಮೇಲೆ ಕುಪ್ಪಳಿಸಿ ಹಾರಿದ ಆಟಗಳಲ್ಲಿ , ನದಿಯಲ್ಲಿರುವ ಸಣ್ಣ ಪುಟ್ಟ ಜಲಧಾರೆಗಳು ಹಾಗೂ ಹಳ್ಳಕೊಳ್ಳಗಳ ನೀರ ಚಿಮುಕಿನಲ್ಲಿ ಪ್ರಕೃತಿ ಶಿಕ್ಷಣ ಧಾರಾಳ ಲಭಿಸುತ್ತಿತ್ತು!
ನದೀಪಾತ್ರಗಳಲ್ಲಿರುವ ನಮ್ಮ ಊರಿನ ಮನೆಗಳವರ ಜೀವನದಲ್ಲಿ ನದಿಯ ಪಾತ್ರ ಬಹಳ ದೊಡ್ಡದು. ತೋಟಕ್ಕೆ ಹಾಯಿಸಲು, ಕುಡಿಯಲು ನದಿಯ ನೀರನ್ನೇ ಬಳಸುವುದು. ಕಾಡಿನಿಂದ ಸುಲಭವಾಗಿ ಪ್ರಾಣಿಗಳು ಈ ಬದಿಗೆ ಬಾರದಂತೆ ತಡೆಯುವ ಜಲಗೋಡೆ ಈ ನದೀಪಾತ್ರ
ನದಿಯಲ್ಲಿ ದೊರೆಯುವ ನುಣುಪಾದ, ಉರುಟಾದ, ಕೆಲವು ಓರೆ ಮೈಯ ಸಣ್ಣ ದೊಡ್ಡ ಕಲ್ಲುಗಳು ಒಂದು ವಿಶೇಷವೆಂದು ಯಾವಾಗಲೂ ಅನಿಸುವುದು. ಸಣ್ಣ ಉರುಟು, ಉದ್ದದ ಕಲ್ಲುಗಳು ಕುಟ್ಟಾಣಿ ಹಾಗೂ ಅರೆಯುವ ಕಲ್ಲಿನಂತೆ ಉಪಯೋಗಕ್ಕೆ ಬರುವವು. ದೊಡ್ಡ ಕಲ್ಲುಗಳು ಮಾತನಾಡಲು ಬಯಸುತ್ತಿರುವ ಶಾಪಗ್ರಸ್ತ ದೇವ, ದಾನವ, ಸ್ತ್ರೀ-ಪುರುಷರಂತೆ ಅನಿಸುವುದು!
ಹುಟ್ಟೂರಿನ ನೆನಪಿಗಾಗಿ ನದಿಯಿಂದ ಆಯ್ದು ತಂದ ಕಲ್ಲುಗಳ ಮೇಲೆ ಪೈಂಟ್ ಮಾಡಿದಾಗ ದೊರೆತ ಸಂತೋಷಕ್ಕೆ ಬೆಲೆ ಕಟ್ಟಲಾಗದು
-ಸುಮನಾ