ಆಕೆಯ ಕಂಪೆನಿಯ ಆಫೀಸು ಒಂದು ‘Melting Pot’ (ಸಮ್ಮಿಳಿತ ಪ್ರದೇಶ). ಭಾರತದ ಬೇರೆ ಬೇರೆ ರಾಜ್ಯಗಳಿಗೆ, ಪ್ರದೇಶಗಳಿಗೆ ಸೇರಿದ ಉದ್ಯೋಗಿಗಳು ಕಂಪೆನಿಯು ತಮಗೆ ವಹಿಸಿದ ಕೆಲಸ ಮಾಡುತ್ತಿರುತ್ತಾ ರೆ. ವೃತ್ತಿ ಬದುಕಿನಲ್ಲಿ ಜೀವನ ನಿರ್ವಹಣೋಪಾಯ, ಮಾತ್ರವಲ್ಲ ಜ್ಞಾನ ಸಂಪಾದನೆ, ಸಹ ಉದ್ಯೋಗಿಗಳೊಂದಿಗೆ ಪರಸ್ಪರ ಸಹಕಾರ, ಸ್ನೇಹಭಾವ, ವಿನೋದ, ಹೀಗೆ ಅನೇಕ ಅರ್ಥವತ್ತಾದ ಕ್ಷಣಗಳು ನಿರ್ಮಾಣವಾಗುತ್ತಿರುತ್ತವೆ. ಅವಳು ಅಂತಹ ಗಳಿಗೆಗಳನ್ನು ಬೆರಗಿನಿಂದ ಆಸ್ವಾದಿಸುವುದುಂಟು.
ಬೇರೆ ಪ್ರದೇಶಗಳಿಂದ ಬಂದು ಕೆಲಸ ಮಾಡುವವರ ತಮ್ಮ ಊರಿನೊಂದಿಗಿನಭಾವನಾತ್ಮಕ ನಂಟು ಅನೇಕ ತರಹದಲ್ಲಿ ಪ್ರಸ್ತುತವಾಗುತ್ತಿರುತ್ತದೆ. ರಜೆ ಮುಗಿಸಿ ತಮ್ಮ ಊರಿನಿಂದ ಹಿಂದಿರುಗಿ ಬರುವಾಗ ಅಲ್ಲಿನ ತಿಂಡಿ ತಂದು ಆಫೀಸಿನಲ್ಲಿ ಎಲ್ಲರೊಂದಿಗೆ ಹಂಚಿ ತಿಂದು ಖುಶಿ ಪಡುತ್ತಾರೆ. ತಮ್ಮ ಊರಿನ ತೀರ್ಥಕ್ಷೇತ್ರದ ಪ್ರಸಾದ ವಿತರಣೆ ಮಾಡುತ್ತಾರೆ. ಅವರ ಹಾವ ಭಾವ, ಭಾಷೋಚ್ಚಾರಣೆಯ ಶೈಲಿ ಇವೆಲ್ಲ ಏಕತೆಯಲ್ಲಿನ ವಿವಿಧತೆಯನ್ನು ಪ್ರಚುರ ಪಡಿಸುತ್ತಿರುತ್ತವೆ. ಊರಿನಿಂದ ಬಹಳ ಸಮಯಕ್ಕೆ ಆಗುವಷ್ಟು ತಮ್ಮ ಇಷ್ಟದ ಆಹಾರ ಪದಾರ್ಥಗಳನ್ನು ತಂದಿಟ್ಟುಕೊಳ್ಳುವವರೂ ಇದ್ದಾರೆ.
ಆ ಒಂದು ಶನಿವಾರ ದಿನದ ಕೆಲಸ ಮುಗಿಸಿ ಪರಸ್ಪರ ಹ್ಯಾಪಿ ವೀಕೆಂಡ್ ಅಂತ ಹಾರೆೈಸಿಕೊಂಡು ಮನೆಗೆ ಹೊರಡುವ ಸಮಯ. ಇತ್ತೀಚೆಗಷ್ಟೇ ಮದುವೆಯಾಗಿ ತನ್ನ ಹೆಂಡತಿಯೊಂದಿಗೆ ಹೊಸ ಬದುಕು ಕಟ್ಟಿಕೊಳ್ಳುತ್ತಿರುವ ಆ ಚುರುಕು ಸಹೋದ್ಯೋಗಿಯನ್ನು ಆಕೆ ಮಾತಿಗೆಳೆಯುತ್ತಾಳೆ…
‘ನಿತಿನ್…ಈ ಸಲ ವೀಕೆಂಡ್ ಗೆ ಏನು ಪ್ಲಾನ್ ಮಾಡಿದ್ದೀರಿ? ಹೆಂಡತಿಗೆ ಊರು ತೋರಿಸುವಿರಿ ತಾನೇ’
‘ಹೌದು ಮ್ಯಾಡಮ್. ಕಳೆದ ವಾರ ಹತ್ತಿರದ ಬೆಟ್ಟಕ್ಕೆ ವಾಯುವಿಹಾರಕ್ಕೆ ಕರಕೊಂಡು ಹೋಗಿದ್ದೆ.. ಈ ವಾರ ಸಾಯಂಕಾಲ ದೇಗುಲಕ್ಕೆ ಹೋಗೋಣ ಅಂತ ಇದ್ದೇವೆ’
‘ಒಳ್ಳೆಯದು.. ಹೆಂಡತಿಗೆ ಒಳ್ಳೊಳ್ಳೆಯ ರೆಸ್ಟೋರೆಂಟ್ ಗೂ ಕರಕೊಂಡು ಹೋಗುತ್ತೀರಲ್ಲ..’ ಆಕೆ ನಸುನಗುತ್ತ ಸೂಚಿಸುತ್ತಾಳೆ..
‘ಹೌದು ಮ್ಯಾಡಮ್..ನಾವು ಪ್ರತೀ ಆದಿತ್ಯವಾರ ಮಧ್ಯಾನ್ಹ ಊಟಕ್ಕೆ ಹೊರಗೆ ರೆಸ್ಟೋರೆಂಟ್ ಗೇ ಹೋಗೋದು.. ಅದೂ ಒಂದೇ ಕಡೆ.. ನಮ್ಮೂರಿನವರು ನಡೆಸುತ್ತಿರುವ ರೆಸ್ಟೋರೆಂಟ್ ಗೇ… ಬೇರೆ ಎಲ್ಲೂ ಹೋಗಲ್ಲ’..
ಆಗ ಸಹಾನುಭೂತಿಯಿಂದ ಆಕೆ ‘ನನಗೆ ಅರ್ಥವಾಗುತ್ತದೆ.. ನಮ್ಮ ನಮ್ಮ ಊರಿನ ಊಟ, ತಿಂಡಿಯ ಸೆಳೆತ ಸಹಜವಾದದ್ದೇ..ನೀವು ನಿಮ್ಮ ಊರಲ್ಲಿ ಇರುವಾಗ ಅದೇ ತಿನ್ನುತ್ತಿದ್ದಿರಲ್ಲ..’ ಅಂದಾಗ ಅವನು ನೀಡಿದ ಉತ್ತರ ಆಕೆಗೆ ಒಂದು ಕ್ಷಣಕ್ಕೆ ವಿಶೇಷ ಎನಿಸುತ್ತದೆ..
‘ಇಲ್ಲ ಮ್ಯಾಡಮ್.. ನಾನು ನನ್ನೂರಲ್ಲಿರುವಾಗ ಆ ಖಾದ್ಯಗಳನ್ನು ತಿನ್ನುತ್ತಲೇ ಇರಲಿಲ್ಲ! ಪಿಝಾ, ಬರ್ಗರ್, ರೋಟಿ ನಾನ್, ಚಾಟ್ ಇಂತಹವುಗಳೇ ಇಷ್ಟವಿತ್ತು. ಊರಿನ ಸಾಂಪ್ರದಾಯಿಕ ಊಟ ಮಾಡುತ್ತಲೇ ಇರಲಿಲ್ಲ..!’
ಯುವಜನರ ಅಭಿರುಚಿಗಳ ಅರಿವಿರುವ ಆಕೆ ‘ಮತ್ಯಾಕೆ ಈಗ ಅದೇ ಊಟ!’ ಎಂದು ಕಿಚಾಯಿಸುತ್ತಾಳೆ! ಕೊಂಚ ಯೋಚಿಸಿದ ಆತ , ‘ಮ್ಯಾಡಮ್.. ಯಾಕೋ ಆದಿತ್ಯವಾರ ಆ ಕಡೆಗೇ ಸೆಳೆತ.. ಅಲ್ಲಿ ಬಂದವರು ನಮ್ಮ ಮಾತೃಭಾಷೆ ಮಾತನಾಡುತ್ತಿರುತ್ತಾರೆ. ನಮ್ಮ ಪರಿಚಯದವರು, ಓರಗೆಯವರು ಸಿಗುವುದೂ ಉಂಟು..ನಮ್ಮ ಊರಿನ ಸುದ್ದಿ ತಿಳಿಯುತ್ತದೆ…ಏನೋ ಖುಶಿ’
ಆತನ ಮಾತಿಗೆ ತಲೆಯಾಡಿಸಿ ಸಹಮತ ತೋರಿ ಬೈ ಎಂದ ಅವಳಿಗೆ ‘distance makes only hearts grow fonder’(ದೂರವಿರುವಾಗ ಪ್ರೀತಿ ಜಾಸ್ತಿ) ಎಂಬ ನುಡಿಯ ನಿದರ್ಶನ ಅವನ ಮಾತಲ್ಲಿ ಕಾಣುತ್ತದೆ
-ಸುಮನಾ