Posted in ಸಣ್ಣ ಕತೆ

ದತ್ತು(adoption)-ದತ್ತ(taken for granted)

ಅಂದು ಆಕೆಯನ್ನು ಅದೇ ಪರಿಸರದಲ್ಲಿರುವ ಸ್ನೇಹಿತೆ ತನ್ನ ಮಗಳ ಹುಟ್ಟುಹಬ್ಬಕ್ಕೆ ಆಹ್ವಾನಿಸಿದ್ದಳು. ಕಳೆದ ಎರಡು ವರ್ಷ ಸಹ ಆಹ್ವಾನಿಸಿದ್ದಳಾದರೂ ಕೆಲಸದಲ್ಲಿ ಪರ ಊರಿಗೆ ವರ್ಗಾವಣೆಯಾಗಿದ್ದುದರಿಂದ ಆ ಹುಟ್ಟುಹಬ್ಬದ ಸಂಭ್ರಮಾಚರಣೆಗಳಲ್ಲಿ ಭಾಗವಹಿಸಿರಲಾಗಲಿಲ್ಲ. ಈ ಸಲ ಊರಲ್ಲೇ ಇದ್ದೀ..ಬರದಿದ್ದರೆ ನೋಡು ಅಂತ ಅದಾಗಲೇ ಸ್ನೇಹಿತೆ ಸಲಿಗೆಯಲ್ಲಿ ಎಚ್ಚರಿಕೆ ನೀಡಿದ್ದಳು!.

ಸ್ನೇಹಿತೆಯ ಮಗಳಿಗೆ ಈಗ ಹತ್ತುವರ್ಷವಿರಬಹುದೇನೋ..ಅವಳನ್ನು ನೋಡಬೇಕೆಂಬ ಉತ್ಸಾಹ ಮನಸ್ಸಲ್ಲಿ ತುಂಬಿದೆ. ಅದಕ್ಕೂ ಒಂದು ಕಾರಣವಿದೆ. ವರ್ಷಗಳ ಕೆಳಗೆ, ಸ್ನೇಹಿತೆ ಆ ಮಗುವನ್ನು ಸುಮಾರು ಐದು ತಿಂಗಳಿರುವಾಗ ದತ್ತು ತೆಗೆದುಕೊಂಡಿದ್ದು, ಆ ಸಂಬಂಧ ಕಾನೂನು ಪ್ರಕ್ರಿಯೆಗಳನ್ನು ನೆರವೇರಿಸಲು ಆಕೆ ಅವಳಿಗೆ ಜತೆಯಾಗಿ ಸಹಾಯ ಮಾಡಿದ್ದಳು. ಅಲ್ಲದೆ, ಆ ಸಣ್ಣ ಮಗುವನ್ನು ನೋಡಿಕೊಳ್ಳುವ ವಿಷಯದಲ್ಲ ಹಲವು ಸಲ ಸ್ನೇಹಿತೆ ಆಕೆಯ ಸಲಹೆಯನ್ನು ಪಡೆಯುತ್ತಿದ್ದಳು. ಇಂದು ಆ ಮಗು ಬೆಳೆದು ಕಿಶೋರಾವಸ್ಥೆಗೆ ಕಾಲಿಡುತ್ತಿದ್ದಾಳೆ. ಸಹಜವಾಗಿಯೇ ಅವಳನ್ನು ನೋಡಿ ಉಡುಗೊರೆ ನೀಡಿ ಶುಭಹಾರೆೈಸಲು ಆಕೆ ಕಾತರಳಾಗಿದ್ದಾಳೆ.

ಉಡುಗೊರೆ, ಶುಭಾಶಯ ಪತ್ರ ಇತ್ಯಾದಿಗಳನ್ನು ಖರೀದಿಸಿ, ಸ್ನೇಹಿತೆಯ ಮನೆಗೆ ಕಾಲಿಟ್ಟಾಗ ಅಲ್ಲಿನ ಮೇರೆ ಮೀರಿದ ಸಂಭ್ರಮ ಸಡಗರ ಅವಳನ್ನೂ ಆವರಿಸಿತ್ತು. ಆ ಮಗು ಮುಗ್ಧತೆ, ಕುತೂಹಲ ತುಂಬಿಕೊಂಡು ಅಮ್ಮನ ಪ್ರೀತಿಯ ಮಗಳಾಗಿ, ಅವಳ ಅಕ್ಕರೆಯಲ್ಲಿ ಸೊಂಪಾಗಿ ಕಣ್ತುಂಬುವಂತೆ ಬೆಳೆದಿದ್ದಳು. ಒಳ್ಳೆಯ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಲಿರುವುದು ನಡೆನುಡಿಯಲ್ಲಿ ಕಾಣುತ್ತಿತ್ತು. ಅಮ್ಮ…ಅಮ್ಮ.. ಎನ್ನುತ್ತ ಸ್ನೇಹಿತೆಯ ಬೆನ್ನ ಹಿಂದೆ ತಿರುಗುತ್ತ ಇರುವುದನ್ನು ನೋಡುವಾಗ ಆ ಮಗುವಿನ ದಯನೀಯ ಹಿನ್ನೆಲೆಯ ಅರಿವಿದ್ದ ಅವಳು ಸಂತೋಷದಿಂದ ಲಘುವಾಗಿ ಕಂಪಿಸಿದಳು. ಯಾರೋ ಕಸದ ತೊಟ್ಟಿಗೆ ಎಸೆದಿದ್ದ ಆ ಮಗುವನ್ನು ಸ್ನೇಹಿತೆ ದತ್ತು ಪಡೆದದ್ದು ಅವಳಿಗೆ ನೆನಪಾಗಿತ್ತು.

ಅದೇ ಭಾವದಲ್ಲಿ ಸ್ನೇಹಿತೆಯನ್ನು ಪಕ್ಕಕ್ಕೆ ಕರೆದು, ‘ ನೀನು ನಿಜವಾಗಿಯೂ ಅತಿ ಒಳ್ಳೆಯ ಕೆಲಸ ಮಾಡುತ್ತಿದ್ದೀಯ..ಆ ಮಗುವಿನ ಪಾಲಿಗೆ ನೀನು ಪ್ರತ್ಯಕ್ಷ ದೇವರೇ ಸರಿ. ಮಗುವಿಗೆ ಉತ್ಕೃಷ್ಟ ಜೀವನ ನಿನ್ನಿಂದಾಗಿ ದೊರೆತಿದೆ. ನಿಜವಾಗಿಯೂ ಮಗು ಭಾಗ್ಯಶಾಲಿ..’ ಎನ್ನುತ್ತಿದ್ದಾಗ ಒತ್ತಿ ಬರುತ್ತಿರುವ ಭಾವನೆಗಳನ್ನು ನಿಗ್ರಹಿಸಿಕೊಳ್ಳುತ್ತ, ಆಕೆಯ ಕೈ ಹಿಡಿದ ಸ್ನೇಹಿತೆ ‘ಹಾಗೆನ್ನಬೇಡ ಗೆಳತಿ, ನೀನು ತಿಳಿದ ಹಾಗಿಲ್ಲ.. ಈ ಮಗುವನ್ನು ಪಡೆದ ನಾನೇ ತುಂಬ ಭಾಗ್ಯಶಾಲಿ.. ನನಗೆ ದೈವಿಕ ಪ್ರೀತಿಯ, ಮುಗ್ಧ ಅವಲಂಬನೆಯ, ನಿರ್ಮಲ ಬಾಂಧವ್ಯದ ಶಕ್ತಿಲೋಕವನ್ನೇ ಈ ಮಗು ತೋರಿಸಿದೆ. ನನ್ನ ಬಾಳನ್ನು ಬೆಳಗಿಸಿದ್ದಾಳೆ ಇವಳು. ಅವಳ ಒಲವ ತಂಪಿನ ಆಶ್ರಯದಲ್ಲಿ ನಾನಿಂದು ಪರಮ ಸುಖಿ’ ಎಂದಳು.

ಸ್ನೇಹಿತೆಯ ಮಾತು ಅವಳಿಗೆ ಹೊಸ ಸತ್ಯದ ಅರಿವು ಮಾಡಿಸಿತ್ತು. ತನ್ನ ಮಕ್ಕಳನ್ನು ನೆನೆಯುತ್ತ, ಅವರ ಪ್ರೀತಿಯ ರೀತಿಗಳನ್ನು ‘taken for granted’(ದತ್ತ )ಎಂದು ಇಷ್ಟುದಿನ ತಿಳಿದುಕೊಂಡಿದ್ದೇನೋ ಎಂದೆನಿಸಿ, ಮಕ್ಕಳನ್ನು ತಬ್ಬಿ ತನ್ನ ಭಾವನೆಯನ್ನು ಹೇಳಿಕೊಳ್ಳಬೇಕೆಂಬ ಆತುರದಿಂದ ತನ್ನ ಮನೆಯ ಕಡೆ ಆಕೆ ಹೆಜ್ಜೆ ಹಾಕಿದಳು.🥰😍

ಸುಮನಾ😊🌹

Leave a Reply

Your email address will not be published. Required fields are marked *