ಆ ಇಡೀ ದಿನ ಆತನ ಮನಸ್ಸು ‘ತಾಯಮ್ಮ’ನ ಕುರಿತು ಧೇನಿಸುತ್ತಿತ್ತು. ಅದಕ್ಕೆ ಕಾರಣ, ‘ತಾಯಮ್ಮ’ನ ಕುರಿತು ಸ್ವಾಮೀಜಿಯವರು ಹೇಳಿದ ಮಾತು.
ಸುಮಾರು 20 ವರ್ಷಗಳ ಹಿಂದಿನ ದಿನಗಳು. ಅವನಿಗೆ ಆಗ 12-13 ವರ್ಷ. ಹಳ್ಳಿಯಲ್ಲಿ ಪ್ರಾಥಮಿಕ ಶಾಲೆ ಮಾತ್ರವಿದ್ದು ಪ್ರೌಢಶಾಲಾ ಶಿಕ್ಷಣಕ್ಕೆ ಪಟ್ಟಣಕ್ಕೇ ಹೋಗಬೇಕಿತ್ತು. ಅವನ ತಂದೆ, ಶಿಸ್ತಿನ ಜೀವನಕ್ರಮಕ್ಕೆ ಹೆಸರಾಗಿದ್ದ ಹತ್ತಿರದ ಪಟ್ಟಣದಲ್ಲಿನ ರಾಮಕೃಷ್ಣಾಶ್ರಮಕ್ಕೆ ಅವನನ್ನು ಸೇರಿಸಿ ಅಲ್ಲಿಂದ ಪ್ರೌಢಶಾಲೆಗೆ ಹೋಗುವ ಏರ್ಪಾಡು ಮಾಡಿದ್ದರು.
ಮೂರು ವರ್ಷಗಳ ಕಾಲ ಆತ ಅಲ್ಲಿ ಇದ್ದ ದಿನಗಳಲ್ಲಿ ರಾಮಕೃಷ್ಣಾಶ್ರಮಕ್ಕೆ ‘ತಾಯಮ್ಮ’ ಎಂದು ಎಲ್ಲರಿಂದಲೂ ಕರೆಯಲ್ಪಡುತ್ತಿದ್ದ ಮಹಿಳೆಯೊಬ್ಬರು ನಿಯಮಿತವಾಗಿ ಬರುತ್ತಿದ್ದರು. ಅವರ ಕೆಲಸ, ಮಕ್ಕಳ ಹರಿದುಹೋದ, ಗುಂಡಿ ಕಿತ್ತು ಕೊಂಡಿರುವ, ಝಿಪ್ ಹಾಳಾಗಿರುವ ಅಂಗಿ, ಚಡ್ಡಿ, ಕೊಡೆ, ಚೀಲಗಳನ್ನು ಹೊಲಿದು, ತೇಪೆ ಹಚ್ಚಿ ಸರಿಮಾಡಿಕೊಡುವುದು. ತಾಯಮ್ಮನನ್ನು ಕಂಡ ಕೂಡಲೇ ಆಶ್ರಮದ ಮಕ್ಕಳೆಲ್ಲ ತಮ್ಮ ರಿಪೇರಿಯಾಗಬೇಕಾದ ಬಟ್ಟೆ, ಇತ್ಯಾದಿಗಳನ್ನು ಒಂದು ಕಡೆ ಗುಡ್ಡೆ ಮಾಡಿ ಇಡುತ್ತಿದರು. ಆಕೆ ಅವುಗಳನ್ನೆಲ್ಲ ತಾಳ್ಮೆಯಿಂದ ಹೊಲಿದು, ಉಪಯೋಗಿಸಲು ಆಗುವಂತೆ ಮಾಡಿ ಕೊಡುತ್ತಿದ್ದರು.
ತಾಯಮ್ಮ ಹೆಚ್ಚೇನೂ ಮಾತನಾಡುತ್ತಿರಲಿಲ್ಲ. ಒಮ್ಮೊಮ್ಮೆ ಆಕೆ ಅವನ ತಲೆಯನ್ನು ನೇವರಿಸಿ, ಬೆನ್ನು ತಟ್ಟಿ, ಡ್ರೆಸ್ ನೀಟಾಗಿ ಇಟ್ಟುಕೊಳ್ಳುವುದು ಹೇಗೆ, ಜೀವನದಲ್ಲಿ ಶಿಸ್ತಿನಲ್ಲಿ ಇರುವುದು ಹೇಗೆ ಎಂದು ತಿಳಿ ಹೇಳುತ್ತಿದ್ದದ್ದು ಆತನಿಗೆ ನೆನಪಿದೆ. ಆಗ ಕನ್ನಡಕದ ಎಡೆಯಿಂದ ಕಾಣುತ್ತಿದ್ದ ಅವರ ಕಣ್ಣುಗಳು ವಾತ್ಸಲ್ಯದ ಝರಿಯನ್ನೇ ಹರಿಸುತ್ತಿದ್ದವು. ಆ ಪ್ರಾಯದಲ್ಲಿ ಸದಾ ಆಟದ ಕಡೆಗೇ ಗಮನವಿರುತ್ತಿದ್ದ ಅವನಿಗೆ ಅವರ ಮಾತಿನ ಕಡೆ ಹೆಚ್ಚು ಲಕ್ಷ್ಯವಿರುತ್ತಿರಲಿಲ್ಲ. ಆದರೆ ಅವರು ಯಾವಾಗಲೂ ಆಶ್ರಮಕ್ಕೆ ಬರುತ್ತಿರಲಿ ಎಂದು ಅವನ ಬಾಲ ಮನಸ್ಸು ಬಯಸುತ್ತಿತ್ತು.
ಅವರು ಬಂದು ಹೋದ ದಿನ ತನಗೆ ಖುಷಿಯೆನಿಸುತ್ತಿದ್ದದ್ದು ಸ್ಪಷ್ಟವಾಗಿ ಆತನಿಗೆ ನೆನಪಿದೆ.
ತಾಯಿಯಂತೆ ಪ್ರೀತಿಯನ್ನು ತೋರಿದ್ದ ‘ತಾಯಮ್ಮ’ನ ನೆನಪು ಇತ್ತೀಚಿನ ದಿನಗಳಲ್ಲಿ ಅವನಿಗೆ ತುಂಬಾ ಸಲ ಆಗುತ್ತಿತ್ತು. ತಾಯಮ್ಮನ ಮೇಲಿನ ಕೃತಜ್ಞತಾಭಾವದಿಂದ ಈಗ ಅವರ ಅವಶ್ಯಕತೆಗ�
ಅವಶ್ಯಕತೆಗಳೇನಾದರೂ ಇದ್ದಲ್ಲಿ ಕೈಲಾದಷ್ಟು ಸಹಾಯ ಮಾಡುವ ಉದ್ದೇಶದ ಬಗ್ಗೆ ಈ ಸಲದ ಹಳೆ ವಿದ್ಯಾರ್ಥಿಗಳ ವಾರ್ಷಿಕ ಸಮ್ಮಿಲನ ಕಾರ್ಯಕ್ರಮಕ್ಕೆ ಆಶ್ರಮಕ್ಕೆ ಹೋದಾಗ ಸ್ವಾಮೀಜಿಯವರಲ್ಲಿ ಆತ ಹೇಳಿದ್ದ. ಆಗ ಅವರು ಕೊಟ್ಟ ಮಾಹಿತಿಯು ಅವನನ್ನು ಆಶ್ಚರ್ಯದ ಕಡಲಿಗೆ ನೂಕಿತ್ತು ಮಾತ್ರವಲ್ಲ ಮನಸ್ಸು ದ್ರವಿಸುವಂತೆ ಮಾಡಿತ್ತು.
‘ತಾಯಮ್ಮ’ ಅವನು ತಿಳಿದುಕೊಂಡಂತೆ ಕೆಲಸಕ್ಕೆ, ಸಂಬಳಕ್ಕಾಗಿ ಬರುತ್ತಿರಲಿಲ್ಲ.ಆಕೆ ನಗರದ ತುಂಬ ಆಢ್ಯ ಮನೆತನವೊಂದಕ್ಕೆ ಸೇರಿದ ಮಹಿಳೆಯಾಗಿದ್ದು, ಉನ್ನತ ಚಿಂತನೆಯ ಮೃದು ಮನಸ್ಸಿನ ದಯಾಮಯಿಯಾಗಿದ್ದರು. ಮಕ್ಕಳ ಮೇಲಿನ ಪ್ರೀತಿಯಿಂದ ತನಗೆ ತಿಳಿದಿದ್ದ ಹೊಲಿಗೆಯ ಕೆಲಸವನ್ನು ಉಚಿತವಾಗಿ ಮಾಡಿ ತನ್ನ ಜೀವವನ್ನೇ ಸೇವಾ ಕಾರ್ಯ ಸಾಧನೆಯ ಕ್ಷೇತ್ರವನ್ನಾಗಿಸಿಕೊಂಡಿದ್ದರು. ಮಾತ್ರವಲ್ಲ, ತನ್ನ ಶ್ರೀಮಂತ ಹಿನ್ನೆಲೆಯ ಬಗ್ಗೆ ಮಕ್ಕಳಿಗೆ ಹೇಳಬಾರದಾಗಿ ಕೇಳಿಕೊಂಡಿದ್ದರು.
ಓ.. ತಾನೆಂತಹ ದಡ್ಡ..ತನಗೆ ಇದೊಂದೂ ತಿಳಿಯದಾಯಿತೇ.. ಅವರಿಗೆ ಒಂದು ಬಾರಿಯೂ ಕಿಂಚಿತ್ ಗೌರವವನ್ನೂ ಸಲ್ಲಿಸಿಲ್ಲವಲ್ಲ.. ಕೃತಜ್ಞತೆಯನ್ನು ಹೇಳಿಲ್ಲವಲ್ಲ ಎಂದು ದಿನವಿಡೀ ಪರಿತಪಿಸಿ ಮಲಗಿ ನಿದ್ದೆ ಹೋದ ಅವನಿಗೆ ಆ ರಾತ್ರೆ ದೇವತೆಯೊಬ್ಬಳು ಬಂದು ಹರಸಿದಂತೆ ಕನಸು. ಆ ದೇವತೆಯ ಮುಖಚಹರೆ ‘ತಾಯಮ್ಮ’ನಂತೆಯೆ ಇತ್ತು.