‘ನಾನಂತೂ ದಿನಾ ಇತ್ತೀಚೆಗೆ ಬೆಳಿಗ್ಗೆ ಬ್ರೇಕ್ಫಾಸ್ಟ್ ಗೆ ಓಟ್ಸ್ ತಿನ್ನೋದು..ದಿನೇ ದಿನೇ ಹೆಚ್ಚುವ ದೇಹದ ತೂಕ ಇಳಿಸುವುದಕ್ಕೆ ಇದು ಬಹಳ ಒಳ್ಳೆಯದಂತೆ ನೋಡು..ಅದೂ ಅಲ್ಲದೆ ಅದರಲ್ಲಿ ತುಂಬಾ ಫೈಬರ್ ಇರೋದ್ರಿಂದ ದೇಹಕ್ಕೆ ಇತರ ಪ್ರಯೋಜನಗಳೂ ಇವೆ..ಕೊಲೆಸ್ಟರಾಲ್ ನಿಯಂತ್ರಣ, ಸಕ್ಕರೆ ಕಾಯಿಲೆ ಹತೋಟಿ ಇತ್ಯಾದಿಗಳಿಗೂ ಇದು ರಾಮಬಾಣವಂತೆ..ನೀನೂ ಮಾಡು..ದಿನಾ ತಿಂಡಿಗೇನು.. ಇಡ್ಲಿ ..ದೋಸೆಗೆ ಅಕ್ಕಿ ಉದ್ದು ನೆನೆಸೋ ಕಡಿಯೋ ಯೋಚನೇನೂ ಇರೋದಿಲ್ಲ’…
ಓಟ್ಸ್ ತಿಂದು ಬಳುಕುವ ಬಳ್ಳಿಯಂತೆ ಓಡಾಡುವ ಕಲ್ಪನೆಯಿಂದಲೇ ಪುಳಕಗೊಳ್ಳುತ್ತಾ.. ಗೆಳತಿಯ ಮಾತು ಆಲಿಸುತ್ತಲಿದ್ದೆ…
‘ಬಹಳ ಸುಲಭ ರೆಸಿಪಿ ..ನಾನಂತೂ ಆರು ತಿಂಗಳಿಂದ ಅದೇ ಮಾಡ್ತಾ ಇದ್ದೀನಿ..ಸುಮಾರು ಅರ್ಧ ಕಪ್ ಓಟ್ಸ್ ಇಬ್ಬರಿಗೆ ಸಾಕಾಗುತ್ತೆ. ಅದಕ್ಕೆ ಒಂದು-ಒಂದೂವರೆ ಕಪ್ ನೀರು ಹಾಕಿ ಬೇಯಿಸಿದ್ರೆ ಆಯ್ತು…ಆದ್ರೆ ನಾನು ಸ್ವಲ್ಪ ರುಚಿಯಾಗಿರಲಿ ಅಂತ ನೀರಿನ ಬದಲಿಗೆ ನಂದಿನೀದು ಕೆಂಪು ಪ್ಯಾಕೆಟ್ ದಪ್ಪ ಹಾಲು ಒಂದೂವರೆ ಲೋಟ ಉಪಯೋಗಿಸ್ತಿದೀನಿ.. ಚೆನ್ನಾಗಿ ಬೆಂದ ನಂತರ ಅದಕ್ಕೆ ಟೇಸ್ಟ್ ಗೆ ಒಂದು ಟ್ವಿಸ್ಟ್ ಇರಲಿ ಅಂತ ಅರ್ಧ ಮುಷ್ಟಿ ಗೇರು ಬೀಜ ಮತ್ತು ಬಾದಾಮಿ ರೋಸ್ಟ್ ಮಾಡಿ ಹಾಕ್ತೀನಿ..ಆ ನಂತರ ಬಾಳೆ ಹಣ್ಣು, ಸೇಬು ಕತ್ತರಿಸಿ ಹಾಕ್ತೀನಿ..ಖಿಸ್ಮಿಸ್(ಒಣ ದ್ರಾಕ್ಷಿ) ಸೇರಿಸಿದರೆ ಚೆನ್ನಾಗಿರುತ್ತೆ.. ಸಪ್ಪೆ ತಿನ್ನಕ್ಕಾಗಲ್ಲ ಅಂತ ಮತ್ತೆ ಎರಡು ಚಮಚ ಸಕ್ಕರೆ..’ ಗೆಳತಿಯ ವಿವರಣೆಯನ್ನು ತದೇಕ ಚಿತ್ತದಿಂದ ಆಲಿಸುತ್ತಿದ್ದಂತೆ.. ಅವಳ ಸೊಂಟದ ಸುತ್ತಳತೆ ಇನ್ನೂ ಇಳಿಯದಿರುವ ಕಾರಣ ನನ್ನ ಅರಿವಿಗೆ ಬಂದು… ಅದು ಅವಳಿಗೂ ಗೊತ್ತಾಗಿ..ಇಬ್ಬರೂ ಜೋರಾಗಿ ನಕ್ಕು ಹಗುರವಾದೆವು
-ಸುಮನಾ