ಆ ಹಳ್ಳಿಯಲ್ಲಿ, ಕಾಡ ಅಂಚಿನಲ್ಲಿರುವ ಆ ಮೂರು ಮನೆಯವರು ನೀರಿಗೆ ತಮ್ಮ ತೋಟದ ಬದಿಯಿಂದ ಹಾದು ಹೋಗುವ ಸುವರ್ಣಾ ನದಿಯನ್ನು ಅವಲಂಬಿಸಿದ್ದಾರೆ. ಸುವರ್ಣಾ ನದಿಯು ಆ ಮನೆಗಳಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಜಲಪಾತವಾಗಿ ಇಳಿದು ನಂತರ ರಭಸದಿಂದ ಇಳಿಹಾದಿಯಲ್ಲಿ ಮುಂದುವರೆಯುತ್ತಾಳೆ . ಆ ನದಿಗೆನಾಲೆಯನ್ನು ಕಟ್ಟಿ ಆ ಮೂರು ಮನೆಗಳವರು ನೀರನ್ನು ಉಪಯೋಗಿಸುತ್ತಾರೆ.
ನೀರು ಹಂಚಿಕೆಯ ಒಪ್ಪಂದದ ಪ್ರಕಾರ, ಮನೆ ಉಪಯೋಗಕ್ಕೆ ಮೂರೂ ಮನೆಯವರು ಪ್ರತೀದಿನ ನೀರನ್ನು ಉಪಯೋಗಿಸಬಹುದು. ಆದರೆ ತೋಟಕ್ಕೆ ಹಾಯಿಸಲು, ವಾರದಲ್ಲಿ ತಲಾ ಏರಡು ದಿನ ಎರಡು ಮನೆಯವರಿಗೂ, ದೊಡ್ಡ ತೋಟದ ಮೂರನೆ ಮನೆಯವರಿಗೆ ಮೂರುದಿನವೆಂತಲೂ ನಿಗದಿಯಾಗಿದೆ. ತಮ್ಮ ಮನೆಯ ನೀರಿನ ಪಾಳಿ ಇರುವ ದಿನ ಸಂಬಂಧಿಸಿದ ಮನೆಯವರು ಬೆಳಿಗ್ಗೆ ಸುಮಾರು ಐದು ಐದೂವರೆ ಗಂಟೆಗೆ ಎದ್ದು ಸುಮಾರು ಅರ್ಧ ಕಿಲೋ ಮೀಟರ್ ಕಾಡುದಾರಿಯಲ್ಲಿ ಏರುಗುಡ್ಡದ ದಾರಿಯಲ್ಲಿಸಾಗಿ ಕಲ್ಲು ಹಾಗೂ ಎಡೆಗಳಲ್ಲಿ ಮರದ ಚೆಕ್ಕೆಗಳನ್ನು ಉಪಯೋಗಿಸಿ ನಿರ್ಮಿಸಿರುವ ಕಟ್ಟ(ನೀರು ಬಂಧ)ದಿಂದ ಬೇರೆ ಮನೆಯವರಿಗೆ ಕುಡಿಯಲು ಬೇಕಾದ ನೀರನ್ನು ಬಿಟ್ಟು ತಮ್ಮ ತೋಟಕ್ಕೆ ನೀರು ತಿರುಗಿಸಿ ತರುತ್ತಾರೆ. ಆ ನೀರು ಮಣ್ಣಿನ ಕೊಳ್ಳದ ಮೂಲಕ ಸಾಗಿ ತೋಟ ಸೇರುತ್ತದೆ. ಆ ನೀರನ್ನು ಅಡಿಕೆ ಹಾಳೆಯನ್ನು ಕತ್ತರಿಸಿ ತಯಾರಿಸಿದ ಸಾಧನದ ಮೂಲಕ ತೋಟಕ್ಕೆ ಹಾಯಿಸಿ ತೋಟ ತಂಪಾಗಿರುವಂತೆ ನೋಡಿಕೊಳ್ಳುವುದು ಬೇಸಿಗೆಯ ಒಂದು ದೊಡ್ಡ ಜವಾಬ್ದಾರಿ. ಇಲ್ಲದಿದ್ದರೆ ತೋಟ ಬಿಸಿಲಿಗೆ ಬೆಂದು ಇಳುವರಿಗೆ ಹೊಡೆತ ಬೀಳುತ್ತದೆ.
ಆ ಮೂರು ಮನೆಗಳಲ್ಲಿ ಒಂದು ಮನೆಯ ಯಜಮಾನರಾದ ಕೇಶವ ಭಟ್ಟರಿಗೆ ಆ ಬೇಸಗೆಯ ರಾತ್ರಿ ಜ್ವರ ಕಾಯುತ್ತಿತ್ತು. ಕಷಾಯ ಕುಡಿದು ಮಲಗಿದ ಭಟ್ಟರಿಗೆ ಮರುದಿನ ಬೆಳಗ್ಗಿನ ನೀರಿನ ಪಾಳಿಯದೇ ಚಿಂತೆ. ತನಗೆ ಎದ್ದು ಹೋಗಲು ಸಾಧ್ಯವಾಗುವುದೇ ಎಂಬ ಆತಂಕ. ಆ ಚಿಂತೆಯಲ್ಲೇ ಮಲಗಿದವರಿಗೆ ಹೇಗೋ ನಿದ್ದೆ ಆವರಿಸಿ ಒಂದು ನಿದ್ದೆ ಆಗಿ ಎಚ್ಚರವಾದೊಡನೆ ತಡಬಡಾಯಿಸಿ ಎದ್ದು ಅಂಗಳಕ್ಕೆ ಹೋಗಿ ನೋಡಿದಾಗ ತಿಂಗಳ ಬೆಳಕು ಹಾಲಿನಂತೆ ಸುತ್ತಲೂ ಹಬ್ಬಿತ್ತು. ಜ್ವರದಿಂದ ತಲೆ ಮೇಲೆತ್ತಲೂ ಆಗುತ್ತಿಲ್ಲ. ಏನು ಮಾಡುವುದೆಂದು ಯೋಚಿಸಿ ಕೊನೆಗೆ, ಮಗೂ..ಪುಟ್ಟಾ.. ಇವತ್ತು ಒಂದು ದಿನ ಕಟ್ಟದಿಂದ ನೀರು ತಿರುಗಿಸಿಕೊಂಡು ಬಾರಪ್ಪ’ ಎಂದು ಮಗನನ್ನು ತಟ್ಟಿ ಎಬ್ಬಿಸಿದರು. ಕಣ್ಣು ಹೊಸಕಿಕೊಂಡು ಎದ್ದ ಹತ್ತರ ಹರೆಯದ ಹುಡುಗ.. ‘ಅಪ್ಪ… ಈಗ ಹೋಗಿ ಬರುತ್ತೇನೆ ‘ ಎಂದು ಹೇಳಿ ಬಾಲತನದ ನೆಗೆತದಲ್ಲಿ ಓಡಿಕೊಂಡು ಹೋಗಿ ನೀರು ತಿರುಗಿಸಿಕೊಂಡು ಬಂದ.
ಅಬ್ಬ ಒಂದು ದೊಡ್ಡ ಕೆಲಸವಾಯಿತು ಮಗಾ..ಇನ್ನೇನು ಬೆಳಗಾಗುತ್ತದೆ. ನೀನು ಇವತ್ತು ಶಾಲೆಗೆ ಹೋಗುವುದು ಬೇಡ..ತೋಟಕ್ಕೆ ನೀರು ಹಾಯಿಸುವುದನ್ನು ನೋಡಿಕೋ.. ನನ್ನಿಂದ ಏನೂ ಕೂಡದು. ನಾಳೆಗೆ ನಾನು ಹುಶಾರಾಗುತ್ತೇನೆ..ಮತ್ತೆ ನಾನು ನೋಡಿಕೊಳ್ಳುತ್ತೇನೆ ಎಂದು ಶಾಲೆ ತಪ್ಪಿಸಲು ಮನಸ್ಸಿಲ್ಲದ ಮಗನನ್ನು ಪುಸಲಾಯಿಸಿದರು. ಭಟ್ಟರ ಹೆಂಡತಿ ಎದ್ದು ಗಂಡನಿಗೆ ಕಾಫಿ ಹಾಗೂ ಮಗನಿಗೆ ಹಾಲು ತಯಾರಿಸಿ ಕೊಟ್ಟರು.
ಆಷ್ಟು ಹೊತ್ತಿಗೆ ಹಕ್ಕಿಗಳ ಚಿಲಿಪಿಲಿ, ಆಕಾಶದ ರಂಗಿನ ಬದಲಾವಣೆ ಇದ್ಯಾವುದೂ ಕಾಣದಿದ್ದಾಗ ಸಂಶಯವಾಗಿ ಭಟ್ಟರು ಟಾರ್ಚ್ ಲೈಟಿನಲ್ಲಿ ಸಮಯ ನೋಡುತ್ತಾರೆ.. ಗಂಟೆ ಎರಡು ಆಗಿದೆ ಅಷ್ಟೇ.. ಗಾಬರಿಗೊಂಡ ಭಟ್ಟರು ಈಗ ತನ್ನಿಂದ ತಪ್ಪಾಯಿತಲ್ಲ.. ಮಗಾ.. ಇನ್ನೂ ಬೆಳಗಾಗಲು ಬಹಳ ಸಮಯವಿದೆ. ಪುನ: ಕಟ್ಟದ ಬಳಿ ಹೋಗಿ ವಾಪಾಸು ಆ ಮನೆಯವರಿಗೆ ತಿರುಗಿಸಿ ಬಾರಪ್ಪ..ಬೇರೆಯವರಿಗೆ ನಾವು ನೀರು ತಪ್ಪಿಸಿ ತೊಂದರೆ ಮಾಡಕೂಡದು.. ಬೇಗ ಹೋಗು ..ಎಂದು ಮಗನಿಗೆ ಆದೇಶಿಸಿದರು.
ಈ ಸಲ ಕಟ್ಟದ ದಾರಿಗೆ ಆತನಿಗೆ ಧೆೈರ್ಯಕ್ಕೆ ತಮ್ಮ ಸಣ್ಣು ಜೊತೆಯಾದ. ಮುಂಚಿನ ಸಲ ಆಕಾಶದಲ್ಲಿ ಹೊಳೆಯುವ ಚಂದ್ರನ ಬೆಳಕಲ್ಲಿ ಕುಣಿದುಕೊುಡು ಹಾಡಿಕೆೊಂಡು ಹೋಗಿದ್ದ ಹುಡುಗ ಈ ಸಲ ತಿರುಗಿ ಬರುವ ತನಕ ಹೆದರಿಕೆಯಲ್ಲಿ ಗಡಗಡ ನಡುಗುತ್ತಿದ್ದ.. ಬೆಟ್ಟಗುಡ್ಡ ಮರಗಿಡಗಳೆಲ್ಲ ಅಜ್ಜ ಹೇಳುತ್ತಿದ್ದ ಕತೆಗಳ ರಾಕ್ಷಸರ ಹಾಗೆ ಕಾಣುತ್ತಿದ್ದವು!
ಆಕಾಶದಲ್ಲಿ ಚಂದ್ರ ಹೊಳೆಯುತ್ತಲೇ ಇದ್ದ…