ಹೂವುಗಳನ್ನು ನೋಡಿದಾಗ ಹೂವಿನಂತೆಯೆ ಮನಸ್ಸೂ ಅರಳುವುದು. ಅವುಗಳ ವಿಶಿಷ್ಟ ಸುಗಂಧವು ಸುತ್ತಲೂ ಹರಡುವಾಗ ವಿಶೇಷ ಅನುಭೂತಿಯಾಗುವುದು.
ಇಂದು ಬೆಳಗ್ಗೆ ಹೂದೋಟದಲ್ಲಿ ಬಳ್ಳಿ ತುಂಬ ಅರಳಿ ನಗುತ್ತಿದ್ದ ಈ ಗಡಿಯಾರ ಹೂವುಗಳನ್ನು ಕಟ್ಟಿ ಮಾಲೆ ಮಾಡುವ ಮನಸ್ಸಾಯಿತು.
ಈ ಹೂಮಾಲೆಯನ್ನು ಎರಡು ದಾರಗಳನ್ನು ಉಪಯೋಗಿಸಿ ಕಟ್ಟುತ್ತಿರುವಂತೆ, ಒಂದೆಳೆ, ಎರಡೆಳೆ, ಮೂರೆಳೆ ದಾರಗಳನ್ನು ಉಪಯೋಗಿಸಿ ಮಾಡುವ ಅನೇಕ ಸುಂದರ ಹೂಹಾರಗಳು ಮನದಲ್ಲಿ ಮೂಡಿದವು. ನನ್ನ ಅನೇಕ ಪರಿಚಿತರು, ಗೆಳತಿಯರು, ಬಂಧುಗಳು ಈ ಕಲೆಯಲ್ಲಿ ನುರಿತವರಿದ್ದಾರೆ.
ಈ ಗಡಿಯಾರ ಹೂವು ಬಳ್ಳಿಯ ಮೇಲೆ ಬೆಳೆಯುತ್ತದೆ. ಇದನ್ನು ಪ್ಯಾಶನ್ ಹೂ ಎಂದು ಇಂಗ್ಲಿಷ್ ನಲ್ಲಿ ಹೇಳುತ್ತಾರೆ. ಕಾಡು ಪುಷ್ಪವಾಗಿರುವ ಇದು ಭಾರತ ಮತ್ತು ಜಪಾನ್ ದೇಶದಲ್ಲಿ ಹೆಚ್ಚಿಗೆ ಕಾಣಸಿಗುವುದೆಂದೂ ಇದರಲ್ಲಿ ಸುಮಾರು ಐನೂರು ತಳಿಗಳಿವೆಯೆಂದೂ ಇಂಟರ್ನೆಟ್ನಲ್ಲಿ ಓದಿ ಸೋಜಿಗವಾಯಿತು.
ಈ ಪುಷ್ಪ ಗಡಿಯಾರದಂತೆ ಆಕಾರ ಹೊಂದಿದ್ದು, ಇದರ ನಡುಭಾಗದಲ್ಲಿ ಸೆಕೆಂಡ್, ನಿಮಿಷ ಹಾಗೂ ಗಂಟೆಗಳನ್ನು ತೋರಿಸುತ್ತಿರುವಂತೆ ಅನಿಸುವ ಮೂರು ರಚನೆಗಳಿವೆ. ಎಷ್ಟೊಂದು ಸಾಮ್ಯತೆಯೆಂದರೆ, ಇದು ಕಾಕತಾಳೀಯವೇ ಅಥವಾ ಮಾನವ ಗಡಿಯಾರ ರಚಿಸುವಾಗ ಪ್ರಕೃತಿಯಿಂದ ಸ್ಫೂರ್ತಿ ಪಡೆದನೇ ಎಂದೆನಿಸದಿರದು.
ಸುಮನಾ