ಗಂಗಾನದಿಯ ದಡದಲ್ಲಿರುವ ಕ್ಷೇತ್ರದರ್ಶನ ಕ್ಕೆಂದು ಒಂದು ವಾರದ ಕೆಳಗೆ ಉತ್ತರಭಾರತದ ಆ ಪ್ರದೇಶಕ್ಕೆ ಬಂದಿದ್ದ ಆಕೆ ಇಂದು ಆ ಊರಿನ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಬಂದು ನಂತರ ತನ್ನೂರಿಗೆ ಇನ್ನೊಂದು ವಿಮಾನದಲ್ಲಿ ಹೋಗುವವಳಿದ್ದಳು. ಗಂಗಾ ನದಿಯ ದಡದ ಪ್ರಶಾಂತತೆ, ಅಲ್ಲಿನ ರಮಣೀಯ ನೋಟಗಳು, ಆಧ್ಯಾತ್ಮಿಕ ಕೇಂದ್ರಗಳು.. ಅವಳಿಗೆ ಸಂತೋಷ ಕೊಟ್ಟಿದ್ದವು. ಸಾರ್ಥಕ ಭಾವದಿಂದ ಅಂದು ಮರುಪ್ರಯಾಣ ಆರಂಭವಾಗಿತ್ತು. ಆ ದಿನ ಬೆಳಗ್ಗೆ ಬೇಗನೆ ನಾಲ್ಕು ಗಂಟೆಗೆ ಎದ್ದು ತಯಾರಾಗಿ ವಿಮಾನ ನಿಲ್ದಾಣ ತಲುಪಿ ಅಲ್ಲಿನ ಭದ್ರತಾ ತಪಾಸಣೆಗಳನ್ನು ಮುಗಿಸಿ ಪ್ರಯಾಣದ ಆರಂಭ.
ವಿಮಾನದಲ್ಲಿ ಹಾಗೇ ಕಣ್ಣು ಮುಚ್ಚಿ ಕುಳಿತಿದ್ದಂತೆ, ಸ್ವಲ್ಪ ಹೊತ್ತಿನಲ್ಲಿ ಗಗನಸಖಿ ಬಂದು ‘ಮ್ಯಾಡಮ್, ನಿಮ್ಮ ಬೆಳಗಿನ ಉಪಾಹಾರ…ದಯವಿಟ್ಟು ಸ್ವೀಕರಿಸಿ’ ಎಂದು ಅವಳನ್ನು ಎಚ್ಚರಿಸಿ ಉಪಾಹಾರದ ಪ್ಯಾಕೆಟ್ ಹಾಗೂ ಕಾಫಿ ಕೊಟ್ಟು ಮುಂದುವರೆದಳು. ಇವಳಿಗೆ ತಾನು ವಿಮಾನದ ಟಿಕೆಟ್ ಕೊಳ್ಳುವಾಗ ಉಪಾಹಾರ ಆರ್ಡರ್ ಮಾಡಿರಲಿಲ್ಲವಲ್ಲ ಎಂದು ನೆನಪಾಗಿ ಗಗನಸಖಿಯನ್ನು ತಿರುಗಿ ಕರೆದು ಆ ಉಪಾಹಾರ ದ ಪ್ಯಾಕೆಟ್ ನ್ನು ವಾಪಾಸುಕೊಂಡು ಹೋಗಲು ವಿನಂತಿಸಿದಳು. ಗಗನಸಖಿ ಕೂಡಲೇ ಆರ್ಡರ್ ಮಾಡಿದವರ ಪಟ್ಟಿಯನ್ನು ಪರಿಶೀಲಿಸಿ, ಅವಳ ಪಕ್ಕದಲ್ಲಿ ಕುಳಿತಿದ್ದ ಗಂಭೀರವದನ ಹೊತ್ತ ಮಹನೀಯರೊಬ್ಬರಿಗೆ ಆ ಪ್ಯಾಕೆಟ್ ಹಾಗೂ ಕಾಫಿಯನ್ನು ಕೊಡುತ್ತಾ ‘ಕ್ಷಮಿಸಿ ಸರ್, ನಾನು ನೀವಿಬ್ಬರೂ ಒಂದೇ ಮನೆಯವರೆಂದು ಎಣಿಸಿ ಅವರ ಕೈಯಲ್ಲಿ ಪ್ಯಾಕೆಟ್ ಕೊಟ್ಟೆ’ ಎಂದು ವಿವರಣೆ ಕೊಟ್ಟು ಮುಂದೆ ಹೋದಳು.
ವಿವರಣೆ ಕೇಳಿದ ಆಕೆ ಆ ಮಹನೀಯರನ್ನು ನೋಡಿ ನಕ್ಕು ಪರಿಚಯ ಮಾಡಿಕೊಂಡಳು. ಆತ ಕೂಡ ಗಗನಸಖಿಯ ಊಹೆಗೆ ಆಶ್ಚರ್ಯ ವ್ಯಕ್ತಪಡಿಸಿ, ತನ್ನ ಪರಿಚಯ ಹೇಳಿ ಕಾಫಿ ಶೇರ್ ಮಾಡುವಂತೆ ಕೇಳಿಕೊಂಡರು. ಕಾಫಿಯ ಘಮ್ ಎನ್ನುವ ಪರಿಮಳದಿಂದ ಇವಳಾಗಲೇ ಆಕರ್ಷಿತಳಾಗಿದ್ದು ಅರ್ಧ ಕಪ್ ಕಾಫಿಯನ್ನು ಒತ್ತಾಯವಿಲ್ಲದೇ ಸ್ವೀಕರಿಸಿ ಕೃತಜ್ಞತೆ ಹೇಳಿದಳು. ಅಲ್ಲಿಂದ ಶುರುವಾಯಿತು ಮಾತುಕತೆ. ಯಾತ್ರೆಯ ಅನುಭವ, ಹವಾಮಾನ, ರಾಜಕೀಯ, ಇತರ ಪ್ರಚಲಿತ ವಿದ್ಯಮಾನಗಳ ಬಗ್ಗೆ ಇಬ್ಬರೂ ಹರಟುತ್ತಾ, ಕಾಫಿ ಗುಟುಕರಿಸಿದರು.
ಇನ್ನೇನು..ಬೆಂಗಳೂರು ತಲುಪಲು ಸ್ವಲ್ಪ ಹೊತ್ತಿರುವಾಗ, ಆತ ನಿಮ್ಮ ಮುಂದಿನ ವಿಮಾನ ಎಷ್ಟು ಹೊತ್ತಿಗೆ ..ಎಂದು ಆಕೆಯನ್ನು ಕೇಳಿದಾಗ, ಅವರಿಗೆ ಹೇಳಲೆಂದು, ಅದೂ ಅಲ್ಲದೆ ಸರಿಯಾದ ಸಮಯವೆಷ್ಟು ಎಂದು ನೋಡಿಕೊಂಡರೆ ತನಗೂ ಒಳ್ಳೆಯದು ಎಂದುಕೊಂಡು, ಮೊಬೈಲಿ ಗಾಗಿ ಆಕೆ ಬ್ಯಾಗಿನಲ್ಲಿ ನೋಡಿದಾಗ ಅಲ್ಲಿ ಅದು ಕಾಣಲಲಿಲ್ಲ. ಪುನಃ: ಪರಿಶೀಲಿಸಿದರೂ ಸಿಗದಾಗ ಅವಳು ಜಾಗೃತಳಾಗಿ ಮತ್ತೆ ಮತ್ತೆ ಹುಡುಕಲಾರಂಭಿಸಿದಳು. ‘ನಾನು ಸುಮ್ಮನೆ ಕೇಳಿದೆ ಬಿಡಿ’ ಎಂದು ಆತ ಎಂದರೂ ಬ್ಯಾಗಿನಲ್ಲಿ ಮೊಬೈಲು ಖಂಡಿತಕ್ಕೂ ಇಲ್ಲ ಅಂತ ಪರೀಕ್ಷಿಸಿಕೊಂಡ ಆಕೆ ತಾನು ಹ್ಯಾಂಡ್ ಬ್ಯಾಗ್ ಇಟ್ಟಿದ್ದ ಸೀಟಿನ ತಳಭಾಗದಲ್ಲಿ ಬಗ್ಗಿ ಉದ್ದಕ್ಕೂ ನೋಡಿ ದಾಗ ತನ್ನ ಮೊಬೈಲ್ ಮುಂದಿನ ಸೀಟಿನಲ್ಲಿ ಇದ್ದವರ ಕಾಲಿನ ಬಳಿ ಬಿದ್ದಿರುವುದು ಕಂಡಿತು. ಅಬ್ಬ.. ಬಚಾವ್ ಸಿಕ್ಕಿತಲ್ಲ ಎಂದುಕೊಂಡು ಆಕೆ ಆ ಪ್ರಯಾಣಿಕರಲ್ಲಿ ವಿನಂತಿಸಿದಾಗ ಅವರು ಮೊಬೈಲನ್ನು ಹೆಕ್ಕಿ ಆಕೆಗೆ ಕೊಟ್ಟರು.
ಬೆಂಗಳೂರು ತಲುಪಿ ವಿಮಾನ ನಿಲ್ದಾಣದಲ್ಲಿ ಮುಂದಿನ ವಿಮಾನಕ್ಕೆ ಕಾಯುತ್ತಿರುವಾಗ ಅವಳಿಗೆ ಹಿಂದಿನ ಪ್ರಯಾಣದ ಘಟನೆಯೇ ತಿರುತಿರುಗಿ ನೆನಪಿಗೆ ಬರುತ್ತಿತ್ತು.. ವಿಮಾನದಲ್ಲಿ ಮೊಬೈಲು ಕಳಕೊಂಡಿದ್ದರೆ ತಿರುಗಿ ಪಡೆಯುವುದು ಕಷ್ಟವಿತ್ತು..ಟಿಕೆಟ್ ಹಾಗೂ ಬೋರ್ಡಿಂಗ್ ಕಾರ್ಡ್ ನ ಪ್ರಿಂಟ್ ಸಹ ತನ್ನಲ್ಲಿಲ್ಲ. ತನ್ನೆಲ್ಲ ಕಾಂಟ್ಯಾಕ್ಟ್ ಗಳೂ ಅದರಲ್ಲೇ ಇರುವುದು. ಗಗನ ಸಖಿ ತಪ್ಪಿ ತನ್ನಲ್ಲಿ ಉಪಾಹಾರ ಪೊಟ್ಟಣವನ್ನು ನೀಡಿ ಉಪಕಾರವನ್ವೇ ಮಾಡಿದಳು..ಆ ಘಟನೆಯಿಂದಲೇ ತಾನೇ ಆ ಗಂಭೀರ ವದನದ ಅಪರಿಚಿತರೊಂದಿಗೆ ತಾನು ಸಂಭಾಷಣೆ ಆರಂಭ ಮಾಡಿದ್ದು.. .ಆತ ಮಾತಿನ ಮಧ್ಯೆ ಮುಂದಿನ ವಿಮಾನದ ವೇಳೆಯನ್ನು ಕೇಳಿದ್ದರಿಂದ ತಾನೇ ತಾನು ಮೊಬೈಲ್ ಕಳೆದುಕೊಂಡಿರುವುದು ಗೊತ್ತಾದದ್ದು…ಎಂದು ಯೋಚಿಸುತ್ತಾ ಆ ಸಣ್ಣ ಘಟನೆಗಳು ಒಂದಕ್ಕೊಂದು ಜೋಡಿಕೊಂಡು ಹೇಗೆ ಆವಾಂತರ ತಪ್ಪಿಸಿದವು..ಕಾಣದ ಕೈಯೊಂದು ಈ ರೀತಿ ತನಗೆ ಸಹಾಯ ಮಾಡಿದಂತೆನಿಸಿ ಕೃತಜ್ಞಭಾವದೊಂದಿಗೆ ಉಲ್ಲಸಿತಳಾಗಿ ಮುಂದಿನ ಪ್ರಯಾಣಕ್ಕೆ ಸಿದ್ಧಳಾದಳು.
-ಸುಮನಾ