ಶಾಂತ ಪ್ರಕೃತಿಯ ಅವಳು, ತನ್ನ ಊರಿನ ವರ್ಷಂಪ್ರತಿಯ ರಥೋತ್ಸವದ ಸಮಯ, ಜಾತ್ರೆಯ ಪಟಾಕಿ, ಬೆಂಡು ಬತ್ತಾಸು, ಬಗೆಬಗೆಯ ಊರ- ಪರವೂರಿನ ಟ್ಯಾಬ್ಲೋಗಳು, ಹರಕೆಯ ವೇಷಗಳು, ತಟ್ಟೀರಾಯ, ಕೋಲುಕುದುರೆ, ಅಂಗಡಿ-ತಿಂಡಿ ತಿನಿಸು.. ಜನಜಂಗುಳಿ ಇತ್ಯಾದಿ ಎಲ್ಲವೂ ಮನೆಯ ಎದುರು ರಸ್ತೆಯಲ್ಲೇ ಸಾಗುತ್ತಿದ್ದರೂ ಅಲ್ಲಿ ಹೋಗಬೇಕೆಂದು ಬಯಸಿದ್ದಿಲ್ಲ..ಕಿಟಕಿಯಿಂದಲೇ ಎಲ್ಲವನ್ನೂ ಸ್ವಲ್ಪ ಸಮಯ ವೀಕ್ಷಿಸಿ, ದೇವರಿಗೆ ಅಲ್ಲಿಂದಲೇ ನಮಿಸಿ ಒಳಸರಿಯುತ್ತಿದ್ದದ್ದು ಅವಳ ವಾಡಿಕೆ.
ಜಾತ್ರೆಗೆ ಹೋಗುವುದರ ಬಗ್ಗೆ ಆಕೆ ಯೋಚಿಸಿದ್ದೇ ಎರಡರ ಹರೆಯದ ತನ್ನ ಮಗು’ಅಮ್ಮಾ ಹೋಗೋಣ ಜಾತ್ರೆಗೆ’ ಅಂದಾಗ! ಪ್ರೀತಿಯ ಅಪ್ಪನೊಂದಿಗೆ ಕಳಿಸಲೆತ್ನಿಸಿದರೂ ಮಗು ತಾಯಿಯನ್ನು ಬಿಟ್ಟು ಹೋಗಲಾರ.. ಉಸಿರುಗಟ್ಟಿಸುವ ಜನಜಂಗುಳಿಯ ನಡುವೆ ಅಮ್ಮನ ಸೊಂಟದಲ್ಲಿ ಅವಳನ್ನು ಅಪ್ಪಿಕೆೊಂಡು ಸುರಕ್ಷತೆಯ ಭಾವದಲ್ಲಿ ಮಗು ಜಾತ್ರೆಯ ಸಂಭ್ರಮ ನೋಡುತ್ತಿದ್ದರೆ.. ಇವಳ ಒಳಗೂ ಬೆಚ್ಚನೆಯ ಭಾವದ ಮೃದು ಆಲಾಪ!
ಒಂದೆರಡು ವರ್ಷ ಹಾಗೇ ಕಳೆದಿದೆ. ಮಗ ಆಗತಾನೇ ಬಾಲವಾಡಿಗೆ ಹೋಗುತ್ತಿದ್ದಾನೆ. ಎತ್ತಿಕೊಳ್ಳಲು ಸ್ವಲ್ಪ ದೊಡ್ಡವ. ಈ ಸಲ ತಾಯಿ ಕೈ ಬೆರಳಲ್ಲಿ ತನ್ನ ಪುಟ್ಟ ಕೈಬೆರಳು ಪೋಣಿಸಿ ಜಾತ್ರೆಯ ವೀಕ್ಷಣೆ. ಆ ಮೃದು ಬೆರಳುಗಳು ಹೆಣೆದ ಭಾವಬಂಧದ ಬಿಗಿ ಮಗ ‘ಇನ್ನು ಮನೆಗೆ ಹೋಗೋಣ ಅಮ್ಮ’.. ಎಂದಾಗಲೇ ಸಡಿಲಾಗುತ್ತಿದ್ದದ್ದು.
ಮಗ ಈಗ ಏಳನೆಯ ಕ್ಲಾಸ್. ಸಾಧಾರಣ ಅವಳ ಎತ್ತರಕ್ಕೆ ಬೆಳೆದಿದ್ದಾನೆ. ಈ ವರುಷ ಜಾತ್ರೆಗೆ ಹೋಗುವ ಸಂದರ್ಭ, ಹಿಡಿದ ಕೈ ಕೊಸರಿಕೊಂಡು ಮಗ ಹೇಳಿದ,’ಅಮ್ಮಾ ಕೈ ಹಿಡೀಬೇಡಾ.. ಬಿಡೂ..ನಾನು ದೊಡ್ಡವನಾಗಿದ್ದೇನೆ’.. ಈ ಮಾತು ಇವನೇ ಹೇಳುತ್ತಿದ್ದಾನಾ..ಆಶ್ಚರ್ಯದಿಂದ ಮಗನನ್ನು ದಿಟ್ಟಿಸಿ ನೋಡಿದ ಇವಳ ಕಣ್ಣಲ್ಲಿ ಯಾಕೋ ನೀರ ಅಭಿಷೇಕ
ಹಾಗೆಯೇ ಕಳೆದ ನಂತರದ ವರ್ಷಗಳು. ಈಗ ಮಗ ಕಾಲೇಜಲ್ಲಿ.. ಜಾತ್ರೆಯ ಸಂಭ್ರಮ ಇದ್ದೇ ಇದೆ. ಮಗ ಹೇಳುತ್ತಾನೆ’ ಅಮ್ಮ.. ಈ ಸಲ ನಾನು ಫೆಂಡ್ಸ್ ಒಟ್ಟಿಗೆ ಜಾತ್ರೆಗೆ ಹೋಗುತ್ತೇನೆ.. ನೀನು ನನಗೆ ಕಾಯಬೇಡ.. ನಾವು ಎಲ್ಲ ಮುಗಿಯುವ ತನಕ ಇದ್ದು ಬರುತ್ತೇವೆ’ ಇವಳು ನಕ್ಕು ಸಮ್ಮತಿ ಸೂಚಿಸಿದರೂ ಕಣ್ಣಿಂದ ದಳದಳ ನೀರ ಧಾರೆಆಶ್ಚರ್ಯದಿಂದ ಅವಳನ್ನು ನೋಡಿದ ಅಪ್ಪ ‘ಹೆದರ ಬೇಡ.. ಬರ್ತಾನೆ ಬಿಡು’ ಅಂದ.
ಅವರಿಗೇನು ಗೊತ್ತು..ಈಗಲೂ ಊರ ಜಾತ್ರೆಯ ದಿನ ಅವಳಲ್ಲಿ ಹೇಳಲಾಗದ ನೂರು ನೆನಪುಗಳ ಓಕುಳಿಯ ಗದ್ದಲ, ವರ್ಣ ವೈವಿಧ್ಯ
ಸುಮನಾ Photo credit: Amba Kamath and friends