Posted in ಸಣ್ಣ ಕತೆ

ಕೂಡಿ ಬಾಳೋಣ

ಆ ಮನೆಯಲ್ಲಿ ಅಂದು ಕುಟುಂಬ ಹಿರಿಯ ಕಿರಿಯ ಸದಸ್ಯರೆಲ್ಲ ಒಟ್ಟು ಸೇರಿದ್ದರು. ಯಜಮಾನ ಅಪ್ಪಣ್ಣಯ್ಯ..ಅವರ ಕುಟುಂಬ. ಅಣ್ಣ ತಮ್ಮ ಇವರ ಹೆಂಡಂದಿರು..ಅಕ್ಕ ತಂಗಿಯರು.. ಅವರ ಗಂಡಂದಿರು, ಮಕ್ಕಳು, ಮೊಮ್ಮಕ್ಕಳು ಸೇರಿ ಸುಮಾರು ಐವತ್ತು ಜನ ಆಗುತ್ತಾರೆ..ಆ ದಿನದ ಸಂಭ್ರಮಾಚರಣೆಯ ಕಾರಣ, ಅಪ್ಪಣ್ಣಯ್ಯನವರ ತಂಗಿ ಕಾವೇರಮ್ಮ ಗಳಿಸಿದ್ದ ಕಾನೂನಾತ್ಮಕ ಹೋರಾಟದ ಗೆಲುವು.. ಇಪ್ಪತ್ತು ವರುಷಗಳ ಕೆಳಗೆ ಬಸ್ ಪ್ರಯಾಣದ ವೇಳೆ ಕಾಲಿಗೆ ತೀವ್ರ ಪೆಟ್ಟಾಗಿ ಸುಮಾರು ಒಂದು ವರುಷದ ಶುಶ್ರೂಷೆಯ ನಂತರ ಆಕೆ ಸ್ಟ್ರೆಚರ್ ನೆರವಿನಲ್ಲಿ ನಡೆಯುವಂತಾದದ್ದು.. ಅಪಘಾತದ ವಿಮಾ ಪರಿಹಾರಕ್ಕೆ, ಹದಿನೈದು ವರ್ಷ ಕೋರ್ಟ್ ಕೇಸ್ ನಡೆದು ರೂಪಾಯಿ ಇಪ್ಪತ್ತೈದು ಲಕ್ಷ ಈಗ ಕಾವೇರಮ್ಮನಿಗೆ ದೊರೆತಿದೆ. ಕುಟುಂಬದವರ ನಿರಂತರ ಸಹಕಾರ, ಆರೈಕೆ, ಬೆಂಬಲದಿಂದ ಕಾವೇರಮ್ಮ, ತಮ್ಮ ಕೆಲಸ ಮಾಡುವಷ್ಟು ಚೇತರಿಸಿ ಕುಟುಂಬದವರ ಸಂತೋಷಕ್ಕೆ ಕಾರಣವಾಗಿದ್ದಾರೆ..

ಕೂಡು ಕುಟುಂಬದಲ್ಲಿನ ಆಪ್ತತೆ ಅನುಭವಿಸಿಯೇ ತಿಳಿಯಬೇಕಾದದ್ದು..ಅಪ್ಪಣ್ಣಯ್ಯ ಮೃದು ಮಾತಿನ, ಧೃಡ ನಿಲುವಿನ ಸಮರ್ಥ ಯಜಮಾನ. ತನ್ನ ಕುಟುಂಬದಲ್ಲಿ ಒಗ್ಗಟ್ಟು, ಸಾಮರಸ್ಯ ಕಾಪಾಡಿಕೊಂಡು ಬಂದಿದ್ದಾರೆ. ಕಾವೇರಮ್ಮನಿಗೆ ದೊರಕಿದ ಗೆಲುವನ್ನು ತನ್ನ ಗೆಲುವೆಂದು ಎಲ್ಲರೂ ಭಾವಿಸಿದ್ದಾರೆ..ಆ ದಿನದ ವಿಶೇಷ ಪಾಯಸದ ಊಟದ ನಂತರ, ಹೊರ ಚಾವಡಿಯಲ್ಲಿ ಕುಳಿತು ಇಪ್ಪತ್ತು ವರ್ಷಗಳ ಕೆಳಗೆ ಅಪ್ಪಳಿಸಿದ ದುರ್ಘಟನೆಯ ಕಷ್ಟಗಳನ್ನು ಎಲ್ಲರೂ ಒಟ್ಟು ಸೇರಿ ಎದುರಿಸಿ ಇಂದು ಪರಿಹಾರದ ದೊರಕಿದ ಬಗ್ಗೆಯೇ ಮಾತಾಡುತ್ತಾ ಹೆಮ್ಮೆ ಅನುಭವಿಸುತ್ತಿದ್ದಾರೆ..

“ಆ ದಿನ ಅಪಘಾತವಾದಾಗ, ಕಾವೇರಿಯ ಕಾಲು ತುಂಡಾಗಿ.. ಆ ರಕ್ತಸಿಕ್ತ ಬಟ್ಟೆಗಳನ್ನೆಲ್ಲ ಚೀಲದಲ್ಲಿ ತುಂಬಿಸಿ.. ಆಸ್ಪತ್ರೆಯ ಡಾಕ್ಟರ್ ಮಾಡಿದ್ದ ಪರೀಕ್ಷಾ ವರದಿ ಹಾಗೂ ಬಿಲ್ಲುಗಳನ್ನು ಗಮನಿಸಿ ಜೋಪಾನ ಮಾಡಿ ತಂದು ಕೊಟ್ಟಿದ್ದೆ..ಆ ಬಿಲ್ಲುಗಳು ಇದ್ದುದಕ್ಕೆ ಕೇಸ್ ಇವತ್ತು ನಮ್ಮ ಪರವಾಯಿತು” ಬೀಗಿದರು ಅಪ್ಪಣ್ಣಯ್ಯ.

“ಭಾವಯ್ಯ..ನೀವು ಬಿಲ್ಲು ತಂದು ಕೊಟ್ಟದ್ದೇನೋ ಹೌದು…ಆ ದು:ಖ, ಗಡಿಬಿಡಿಯಲ್ಲಿ ಕೂಡ ನಾನು ಕೂಡಲೇ ಅವುಗಳನ್ನು ಗೊಡ್ರೇಜ್ ಕಪಾಟಿನಲ್ಲಿ ಇಟ್ಟು ಜೋಪಾನ ಮಾಡಿದ್ದೆ ಗೊತ್ತಾ..ಇಲ್ಲದಿದ್ದರೆ…ಪರಿಹಾರ ಸಿಕ್ತಾನೇ ಇರ ಲಿಲ್ಲ” ತನ್ನ ಜಾಣ್ಮೆಯನ್ನು ಹೇಳಿಕೊಂಡಳು ಅಪ್ಪಣ್ಣಯ್ಯನ ತಮ್ಮನ ಹೆಂಡತಿ ಜಾನಕಿ.

“ತಡೀರಿ ತಡೀರಿ.. ಆಸ್ಪತ್ರೆಗೆ ಅತ್ತೆಯ ಒಟ್ಟಿಗೆ ಇದ್ದದ್ದು ನಾನು ತಾನೇ.. ಮೂರ್ಛೆ ಹೋಗಿದ್ದ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ನಿದ್ದೆ ಬಿಟ್ಟು ನಾನಲ್ಲವೇ ನೋಡಿಕೊಂಡದ್ದು.. ಅಲ್ವಾ ಕಾವೇರತ್ತೇ”….ಅಂದಳು ಅಣ್ಣನ ಮಗಳು ಕಾವ್ಯಾ.. ಕಾವೇರಮ್ಮನ ಮಡಿಲಲ್ಲಿ ಒರಗಿ ಸುಖಿಸುತ್ತಾ.

“ನೀವೆಲ್ಲ ಇಲ್ಲಿ ಕೂತು ಅಳುತ್ತಾ ಇದ್ದಿರಿ..ಕೋರ್ಟ್ ಕೇಸ್ ಮಾಡೋಣ.. ತನ್ನದಲ್ಲದ ತಪ್ಪಿಗೆ ಕಷ್ಟ ಪಟ್ಟ ಕಾವೇರಿಗೆ ದುಡ್ಡಾದರೂ ಸಿಗಲಿ ಅಂತ ಕೇಸ್ ಹಾಕಲು ನಾನು ತಾನೇ ಸೂಚಿಸಿದ್ದು”..ಅಂತ ಅಂದರು ಹತ್ತಿರದ ಪೇಟೆಯ ಶಾಲೆಯಲ್ಲಿ ಮಾಸ್ತರಿಕೆ ಮಾಡುತ್ತಿರುವ ಅಣ್ಣಪ್ಪಯ್ಯನವರ ಸಣ್ಣ ತಮ್ಮ ಎಲೆ ಅಡಿಕೆ ತಿನ್ನುತ್ತಾ..

“ಮೂರ್ತಿಯವರು ಹೆಸರುವಾಸಿ ಲಾಯರ್..ಅವರ ಹತ್ತಿರ ಅಪಾಯಿಟ್ಮೆಂಟ್ ಸಿಗೋದೇ ಕಷ್ಟ.. ನನ್ನ ಸ್ನೇಹಿತರಾಗಿದ್ದಕ್ಕೇ ಈ ಕೇಸ್ ತಗೊಂಡ್ರು” ಅಭಿಮಾನದಿಂದ ಹೇಳಿಕೊಂಡರು ಅಂಗಡಿ ವ್ಯಾಪಾರ ಮಾಡಿಕೊಂಡಿರುವ ಕಾವೇರಿ ತಂಗಿ ಗಂಡ..

ಮಾತು- ಕತೆ, ನಗು -ಹರಟೆ, ಕಾಫಿ- ತಿಂಡಿ..ಮುಂದುವರೆದಿತ್ತು. ಕಾರ್ಯಕ್ರಮ ಕ್ಕೆಂದು ಸಿಟಿಯಿಂದ ಬಂದಿದ್ದ ಕುಟುಂಬದ ತರುಣ ತರುಣಿಯರು ಮೊಬಾಯ್ಲ್ ಚಾಟ್ ನಲ್ಲಿ ಇದ್ದರೂ ಹಿರಿಯರ ಈ ಸಂವಾದದಲ್ಲಿ ಅಡಗಿರುವ ಬಾಂಧವ್ಯದ ಸವಿಯನ್ನು ಸವಿದು, ಆ ಏಕತೆಯ ಭಾವದಲ್ಲಿ ತಾವೂ ಬಂದಿಯಾಗಲು ತವಕಿಸುತ್ತಿದ್ದರು..

ಸುಮನಾ🙂🙏❤️

Leave a Reply

Your email address will not be published. Required fields are marked *