ಸಾಯಂಕಾಲದ ಹೊತ್ತು. ಅಮ್ಮ ಮನೆಯ ಕೆಲಸಗಳನ್ನು ಮುಗಿಸಿ ಬೆಳಗ್ಗೆ ಗುಡ್ಡೆಗೆ ಮೇಯಲು ಬಿಟ್ಟಿರುವ ದನ-ಕರುಗಳು ಹಿಂದೆ ಬರುವುದನ್ನೇ ಕಾಯುವ ಸಮಯ. ಇಳಿಹಗಲಿನ ಆ ಸಮಯದಲ್ಲಿ ದನ-ಕರುಗಳ ಗೊರಸಿನ ತಾಡನದಿಂದ ಮೇಲೇಳುವ ಧೂಳಿನ ಕಣಗಳು ಹಗಲೆಲ್ಲಾ ದುಡಿದು ವಿರಮಿಸಲು ಹೊರಟಿರುವ ಇಳಿಸೂರ್ಯನ ಮೃದು ರಶ್ಮಿ ಯಲ್ಲಿ ಮಿರುಗುತ್ತ ಸುಂದರ ದೃಶ್ಯ ನಿರ್ಮಿಸುತ್ತವೆ. ಅದು ಗೋಧೂಳೀ ಸಮಯ ಎಂದು ವಿಶೇಷವಾಗಿ ವರ್ಣಿತ.
ಅಂತಹ ಒಂದು ದಿನ, ಅಮ್ಮ, ದನ-ಕರುಗಳು ಮನೆಗೆ ಹಿಂದೆ ಬರುವುದನ್ನು ಕಾತರದಿಂದ ಕಾಯುತ್ತಿದ್ದರು. ಆ ದಿನದ ವಿಶೇಷವೆಂದರೆ ಆರು ತಿಂಗಳು ಮನೆಯಲ್ಲಿಯೇ ಇರಿಸಿ, ಪ್ರೀತಿಯಿಂದ ಸಾಕಿದ್ದ ಸಣ್ಣ ಕರುವನ್ನು ಮೊದಲ ಬಾರಿಗೆ ಇತರ ದನಗಳೊಂದಿಗೆ ಮೇಯಲು ಹೊರಗೆ ಕಳಿಸಿದ್ದು. ನಾವು ಮಕ್ಕಳು, ಮರದ ಕೋಲುಗಳನ್ನು ಉಪಯೋಗಿಸಿ ಮಾಡಿದ್ದ ತೋಟದ ಬದಿಯ ಗೇಟಿನ ಮೇಲೆ ಹತ್ತಿ ಇಳಿದು ಆಡುತ್ತಾ, ಅಮ್ಮ ನೊಂದಿಗೆ..’ಲಕ್ಷ್ಮೀ…ಬಾರೇ…ಗೋದಾ ಬಾರೇ… ಕೆಂಪಿ ಬಾರೇ…’ ಎಂದು ದನಿಗೂಡಿಸುತ್ತ ದನಗಳನ್ನು ಮನೆಗೆ ಕರೆಯುತ್ತಲಿದ್ದೆವು. ದನಗಳ ಚೆಹರೆಗೆ ಅನುಗುಣವಾಗಿ ನಾಮಕರಣ ಇರುತ್ತಿತ್ತು. ಗೋಧಿ ಬಣ್ಣದ ದನವನ್ನು ಗೋದಾ ಎಂದು, ಬಿಳಿಯ ವರ್ಣದವಳನ್ನು ಬೆಳ್ಳಿ ಎಂದು…ಹೀಗೆ ಬೇರೆ ಬೇರೆ ಹೆಸರುಗಳನ್ನಿಟ್ಟು ಗುರುತಿಸುತ್ತಿದ್ದೆವು..ತನ್ನ ಹೆಸರು ಕರೆದೊಡನೆ ಕುತ್ತಿಗೆ ನೆಟ್ಟಗೆ ಮಾಡಿ, ಕಿವಿ ಹಿಂದೆ ಮುಂದೆ ಆಡಿಸುತ್ತಾ ದನಗಳು ಓಡೋಡಿ ಬರುತ್ತಿದ್ದವು. ಆಗ ಮರದ ಕೋಲುಗಳನ್ನು ಹಿಂದೆ ಸರಿಸಿ ಅವುಗಳನ್ನು ‘ಹೈ..ಹೈ..ಬಾ..ಬಾ..’ಎನ್ನುತ್ತ ಗೇಟಿನ ಒಳಗೆ ಸೇರಿಸಿಕೊಳ್ಳುವುದು ನಮ್ಮ ಕೆಲಸ. ಜಾನುವಾರು ಹಟ್ಟಿಯೊಳಗೆ ಸೇರಿದ ನಂತರ ಮುಂಚಿನಂತೆಯೆ ಕೋಲುಗಳಿಂದ ಗೇಟನ್ನು ಭದ್ರಪಡಿಸಿ ನಾವೂ ಕೈಕಾಲು ತೊಳೆದು ಒಳಗೆ ಬರುತ್ತಿದ್ದೆವು.
ಆ ದಿನ ಎಲ್ಲೂ ದನಗಳು ಹಿಂದೆ ಬಂದು ಕತ್ತಲು ಮುಸುಕಲು ಆರಂಭಿಸಿದರೂ ನಮ್ಮೆಲ್ಲರ ಪ್ರೀತಿಯ ಆ ಸಣ್ಣ ಕರು ಮಾತ್ರ ಮನೆಗೆ ಹಿಂದಿರುಗಲಿಲ್ಲ..ಅದರ ತಾಯಿ ಗೋದಾ ಹಟ್ಟಿ ಸೇರಿದ್ದಾಳೆ. ಅವಳೂ ಕರುವಿನ ನೆನಪಾಗಿ ಅಂಬಾ ಅಂತ ಕೂಗುತ್ತಿದ್ದಾಳೆ. ಮೊದಲ ಬಾರಿಗೆ ಮನೆಯಿಂದ ಹೊರಗೆ ಹೋದ ಕರು… ಅಮ್ಮ ಮ್ಲಾನವದನಳಾಗಿದ್ದಾಳೆ. ‘ಅಮ್ಮ ನೀವ್ಯಾಕೆ ಆ ಕರುವನ್ನು ಹೊರಗೆ ಬಿಟ್ಟದ್ದೂ… ಅದು ಎಲ್ಲಿ ಕಳೆದು ಹೋಯಿತೋ…ಹುಲಿ ಏನಾದರೂ ತಿಂದಿತೋ.. ಎಂದು ದು:ಖಿಸುತ್ತ ಮನೆ ಮಕ್ಕಳು ಬಿಕ್ಕಲಾರಂಭಿಸಿದ್ದಾರೆ..
‘ಇಲ್ಲೇ ಎಲ್ಲೋ ಇರಬೇಕು ಕರು…ಅಳಬೇಡಿ..ಅದಕ್ಕೆ ದಾರಿ ತಪ್ಪಿದೆ..ನಾವು ಹುಡುಕಿಕೊಂಡು ಬರುತ್ತೇವೆ’ ಅನ್ನುತ್ತ ಅಪ್ಪ ಅಮ್ಮ ನಮ್ಮನ್ನು ಸಮಾಧಾನ ಪಡಿಸಿ, ಕಂದೀಲು ಹಿಡಿದು ಕರುವನ್ನು ಹುಡುಕಲು ಹೊರಟರೆ, ‘ನಾವೂ ಹುಡುಕುತ್ತೇವೆ’ ಅನ್ನುತ್ತ ಅವರ ಹಿಂದೆ ಆ ಕತ್ತಲಲ್ಲಿ ಮಕ್ಕಳ ಸೈನ್ಯ ಹೊರಟಿದೆ.. ಸ್ವಲ್ಪ ಹೊತ್ತು ತೋಟದ ಒತ್ತಿನಲ್ಲಿರುವ ಗುಡ್ಡೆಯಲ್ಲಿ ಸಾಗುತ್ತಿರುವಾಗ ಮರವೊಂದರ ಬುಡದಲ್ಲಿ ಸಣ್ಣ ಪ್ರಾಣಿಯ ಆಕೃತಿ ಕಾಣಿಸುತ್ತಿದ್ದಂತೆ, ‘ಕರು ಸಿಕ್ಕಿತು.. ಕರು ಸಿಕ್ಕಿತು’ ಎಂದು ಸಂತೋಷದಿಂದ ಅಪ್ಪ, ಅಮ್ಮ.. ಅವರ ಹಿಂದೆ ನಾವು ಮಕ್ಕಳು ಬಗ್ಗಿ ನೋಡಿದಾಗ… ಕಂಡದ್ದೇನು..ಮೈ ಸೆಟೆದು ಕೋಪದಿಂದ ನಿಂತಿರುವ ಮುಳ್ಳು ಹಂದಿ! ಅದನ್ನು ನೋಡುತ್ತಲೇ ಅಪ್ಪ ಅಮ್ಮ ಹಿಂದೆ ಸರಿದು ‘ ಬನ್ನಿ ಬನ್ನಿ.. ವಾಪಾಸು ಹೋಗೋಣ.. ಅದೇನಾದರೂ ಮುಳ್ಳು ಬಿಟ್ಟು ಅದು ನಮ್ಮ ಕಣ್ಣು -ಗಿಣ್ಣಿಗೆ ಚುಚ್ಚಿದರೆ ಬಹಳ ನಂಜು.. ದೃಷ್ಟಿ ಗೂ ಅಪಾಯ ನಡೀರಿ ನಡೀರಿ ‘ ಅಂದದ್ದೇ ತಡ..ನಾವೆಲ್ಲ ಮನೆಗೆ ದೌಡು..ಢವಗುಟ್ಟುವ ಎದೆಯೊಂದಿಗೆ ಮೈ ಝುಮ್ಮೆನ್ನುವ ಆ ಘಟನೆಯಿಂದ ಗೇಟು ತೆಗೆದು ಮನೆಯೊಳಗೆ ಹೇಗೆ ಸೇರಿದೆವೋ ತಿಳಿಯಲಿಲ್ಲ..
ಅಷ್ಟು ಹೊತ್ತಿಗೆ ಗೇಟಿನ ಬಳಿ ಬದಿಯಲ್ಲಿ ಕತ್ತಲಿಗೆ ಹೆದರಿಕೊಂಡು ನಿಂತಿದ್ದ ಕರು..ಅಮ್ಮ ಗೇಟಿನ ಬಳಿ ಬರುತ್ತಿದ್ದಂತೆ.. ಅಡ್ಡ ನಿಂತು ತನ್ನ ಮೈಯನ್ನು ಅಮ್ಮನಿಗೆ ಒತ್ತಿ ಹಿಡಿದು ಅಂಬಾ.. ಎಂದಾಗ.. ಅದರ ಧ್ವನಿ ಕೇಳಿ ಎಲ್ಲರಿಗೆ ಸಂತಸ..’ಎಲ್ಲಿ ಹೋಗಿದ್ದೆ ನೀನು, ಕತ್ತಲೊಳಗೆ ಮನೆಗೆ ಬರಬೇಕೆಂದು ತಿಳಿದಿಲ್ಲವೇ’. ಅನ್ನುತ್ತಾ ಅಮ್ಮ ಮೃದುವಾಗಿ ಗದರಿಸಿ ಅದನ್ನು ಒಳತಂದು ಹಟ್ಟಿಯಲ್ಲಿ ಸೇರಿಸಿದಾಗ ಹಟ್ಟಿಯಲ್ಲಿ ಹಾಗೂ ಮನೆ ತುಂಬ ಸಂತಸದ ಕಲರವ!
-ಸುಮನಾ