ರಜಾ ಸಮಯ. ಮಕ್ಕಳಿಗೆ ಹತ್ತಿರದ ನಗರ ತೋರಿಸಲೆಂದು ಅಪ್ಪ-ಅಮ್ಮ ನಿಶ್ಚಯಿಸಿದ್ದಾರೆ. ಆ ಊರಿನ ಬಗೆಗಿನ ಜ್ಞಾನ ವಿಕಸನಕ್ಕೂ ಆಯಿತು, ಮಕ್ಕಳೊಂದಿಗೆ ಬಾಂಧವ್ಯ ವೃದ್ಧಿಗೂ ಪೂರಕ ಎಂದುಕೊಂಡು ತಿರುಗಾಡಿಕೊಂಡು ಬರೋಣವೆಂದು ಬೆಳಿಗ್ಗೆ ಬೇಗನೆ ಹೊರಟಿದ್ದಾರೆ. ದಿನವಿಡೀ ಪಟ್ಟಿ ಮಾಡಿಟ್ಟಿರುವ ಬೇರೆ ಬೇರೆ ಸ್ಥಳಗಳ ಭೇಟಿ. ಊಟ ತಿಂಡಿ ಹೊರಗಡೆಯೇ ಮಾಡುವುದು ಅಂತ ಪ್ಲಾನ್.
ಬೆಳಿಗ್ಗೆ ದೇವಸ್ಥಾನ, ಮ್ಯೂಸಿಯಂ ಇತ್ಯಾದಿಗಳ ದರ್ಶನ, ಸಾಯಂಕಾಲ ಹೊತ್ತಿ ನಲ್ಲಿ ಉದ್ಯಾನವನ, ಸಮುದ್ರ ತೀರಗಳಲ್ಲಿ ವಿಹಾರ ಮಾಡುವುದೆಂದು ನಿಶ್ಚಯಿಸಿ ಬಸ್ಸಿನಲ್ಲಿ ಸವಾರಿ ಶುರು ಆಯಿತು. ಬಸ್ಸಿನ ನಿಗದಿತ ಸ್ಟಾಪ್ ಗಳಲ್ಲಿ ಇಳಿದು ನಂತರ ನಡೆದು ಕೆಲವು ಕ್ಷೇತ್ರಗಳ ಸಂದರ್ಶನ ಮಾಡಿಯಾಯಿತು. ಆದರೆ ಸೂರ್ಯ ಮೇಲೇರುತ್ತಿದ್ದಂತೆ, ಬಿಸಿಲಿಗೆ ಆಯಾಸವಾಗಿ ಬರುಬರುತ್ತಾ ನಡೆಯುವ ಉತ್ಸಾಹ ಕಡಿಮೆಯಾದಾಗ, ಅಪ್ಪ ತಮಗೆ ಹೋಗಬೇಕಾದ ಸ್ಥಳಗಳ ತನಕ ಹೋಗಲು ಒಂದು ರಿಕ್ಷಾ ಗೊತ್ತು ಮಾಡಿ, ಇನ್ನು ಇದರಲ್ಲೇ ಮುಂದಿನ ಸ್ಥಳಗಳ ಭೇಟಿ ಎಂದು ನಿಗದಿ ಪಡಿಸಿದರು.
ಮಕ್ಕಳಿಗೆ ರಿಕ್ಷಾದಲ್ಲಿ ಹೋಗುವುದೆಂದರೆ ಬಹಳ ಖುಶಿ. ರಿಕ್ಷಾ ಚಾಲಕ ಸುಮಾರು ಅರುವತ್ತು ವರುಷ ಮೇಲಿನವನ ಹಾಗೆ ತೋರುತ್ತಿದ್ದ. ಮಧ್ಯಾಹ್ನ ಸರಿ ಸುಮಾರು ಎರಡು-ಎರಡೂವರೆಗೆ ಗೊತ್ತು ಮಾಡಿದ ರಿಕ್ಷಾ, ಬೇರೆ ಬೇರೆ ಕಡೆಗೆ ಕುಟುಂಬವನ್ನು ಕೊಂಡೊಯ್ದಿತ್ತು. ಡುರ್ ಡುರ್ ಎಂದು ಸದ್ದು ಮಾಡುತ್ತಾ ರಿಕ್ಷಾ ಹೋಗುತ್ತಿದ್ದರೆ ಮಕ್ಕಳು ಹಿಂದಿನ ಸೀಟಿನಲ್ಲಿ ಕುಳಿತು ತಾವೇ ಡ್ರೈವರ್ ಆದ ಹಾಗೆ ಅಭಿನಯಿಸುತ್ತಾ, ಬಾಯಲ್ಲಿ ಹಾರ್ನ್ ಶಬ್ದ ಮಾಡುತ್ತಾ ಸಂತೋಷಪಡುತ್ತಿದ್ದರು. ಅವರ ಉತ್ಸಾಹ ಗಮನಿಸಿದ ಚಾಲಕ ಇಬ್ಬರನ್ನೂ ಸರದಿಯಲ್ಲಿ ತನ್ನ ಸೀಟಿನಲ್ಲೇ ಎದುರು ಕುಳ್ಳಿರಿಸಿ ಡ್ರೈವಿಂಗ್ ನ ಮಜಾ ಅನುಭವಿಸುವಂತೆ ಅನುವು ಮಾಡಿಕೊಟ್ಟ.
ನಗರದ ಪ್ರಸಿದ್ಧ ಬೋಟಿಂಗ್ ಪ್ರದೇಶ, ಬೀಚ್ ವಿಹಾರ, ನಂತರದ ಊಟ ಐಸ್ಕ್ರೀಮ್ ಎಲ್ಲಾ ಆದ ಮೇಲೆ, ಬಸ್ಸಿನಲ್ಲಿ ತಮ್ಮ ಊರಿಗೆ ಮರುಪ್ರಯಾಣ ಆರಂಭಿಸಲು ಕುಟುಂಬ ಬಸ್ ಸ್ಟ್ಯಾಂಡ್ ತಲುಪಿತು.
ರಿಕ್ಷಾ ಚಾಲಕನಿಗೆ ಕೃತಜ್ಞತೆ ಹೇಳಿ ಬಿಲ್ ಕೇಳಿದಾಗ ಆತ ಇವರು ಯೋಚಿಸಿದ್ದಕ್ಕಿಂತ ಸುಮಾರು ಐನೂರು ರುಪಾಯಿ ಜಾಸ್ತಿ ಕೇಳಿದ.
ಇದರಿಂದ ಪಾಲಕರಿಗೆ ಸ್ವಲ್ಪ ಬೇಸರವಾಗಿ, ‘ಲೆಕ್ಕಕ್ಕಿಂತ ಜಾಸ್ತಿ ದುಡ್ಡು ಕೇಳಬೇಡಿ, ಪುನಃ: ನಾವು ನಿಮ್ಮ ರಿಕ್ಷಾದಲ್ಲೇ ಬರಬೇಕಲ್ಲ’ ಅಂತ ಸೂಕ್ಷ್ಮ ವಾಗಿ ಆಕ್ಷೇಪಿಸಿದಾಗ, ಚಾಲಕ ವ್ಯಥಿತನಂತೆ ಈ ರೀತಿ ಹೇಳಿದ ‘ನೋಡೀಪ್ಪಾ ತಪ್ಪು ತಿಳೀಬೇಡಿ, ನನಗೆ ಮಕ್ಕಳಿದ್ದಿದ್ದರೆ ನಿಮ್ಮ ಪ್ರಾಯದವರೇ ಇರುತ್ತಿದ್ದರೋ ಏನೋ, ದೇವರು ನಮಗೆ ಆ ಭಾಗ್ಯ ಕೊಟ್ಟಿಲ್ಲ..ಮನೆಯಲ್ಲಿ ಹೆಂಡತಿಗೆ ಸೌಖ್ಯ ಇರೋದಿಲ್ಲ.. ಆಸ್ಪತ್ರೆ ಖರ್ಚು ಸುಮಾರು ಆಗುತ್ತದೆ..ನನಗೂ ವಯಸ್ಸಾಯಿತು..ಮೊದಲಿನಂತೆ ದುಡಿಯಲು ಆಗುತ್ತಿಲ್ಲಾ..ಸುಮಾರು ನಲವತ್ತು ವರುಷಗಳಿಂದ ಈ ಕೆಲಸ ಮಾಡುತ್ತಾ ಇದ್ದೇನೆ. ಈಗ ಶಕ್ತಿ ಇಲ್ಲದಿದ್ದರೂ ಅಭ್ಯಾಸ ಬಲದಲ್ಲಿ ದುಡಿಯುತ್ತಿದ್ದೇನೆ. ನಾನು ನಿಮ್ಮ ಹತ್ತಿರ ಸ್ವಲ್ಪ ಜಾಸ್ತಿ ದುಡ್ಡು ಕೇಳಿದ್ದೇನೆ ..ಹೌದು..ನೀವು ದೊಡ್ಡ ಮನಸ್ಸು ಮಾಡಿದರೆ ನನ್ನ ದಿನ ದಿನದ ಕಷ್ಟ ಸ್ವಲ್ಪ ಪರಿಹಾರ ಆಗುತ್ತದೆ.. ಸುಮ್ಮನೆ ಕೆಲಸ ಮಾಡದೇ ಬೇಡುವುದಕ್ಕಿಂತ ಇದು ಮೇಲಲ್ಲವೇ’ ಎಂದು ಹೇಳಿದಾಗ, ದಂಪತಿಗಳು ಮರುಮಾತಿಲ್ಲದೆ, ಆತ ಕೇಳಿದ್ದ ಮೊತ್ತಕ್ಕೆ, ಸಾವಿರ ರೂಪಾಯಿ ಸೇರಿಸಿ ‘ಇಟ್ಟುಕೊಳ್ಳಿ’ ಎನ್ನುತ್ತ ಕೊಟ್ಟರು.
ಆತ ಇದನ್ನು ನೋಡಿ, ಉಕ್ಕಿ ಬಂದ ಸಂತೋಷದಿಂದ, ‘ದೇವರು ನಿಮ್ಮನ್ನು, ಮಕ್ಕಳನ್ನು ಚೆನ್ನಾಗಿ ಇಟ್ಟಿರಲಿ’ ಎಂದು ಶುಭ ಹಾರೈಸಿದ. ಮಕ್ಕಳು ಆತನಿಗೆ ಟಾಟಾ ಎನ್ನುತ್ತಾ ಬೀಳ್ಕೊಟ್ಟರು.
ಪ್ರವಾಸ ಮಾಡಿ ಬಂದ ಸಂತೋಷದಲ್ಲಿ ಮಕ್ಕಳು ವಟಗುಟ್ಟುತ್ತಿದ್ದರೆ, ಬದುಕು ತಂದೊಡ್ಡಿರುವ ಪರಿಸ್ಥಿತಿ ಯ ನಡುವೆ ರಿಕ್ಷಾ ಚಾಲಕ ತೋರುತ್ತಿರುವ ಕಾಯಕ ನಿಷ್ಠೆ, ಸ್ಥಿರತೆ, ಧೈರ್ಯ, ಪ್ರಾಮಾಣಿಕತೆ ದಂಪತಿಯ ಮನ:ಪಟಲದ ಮುಂದೆ ಹಿರಿದಾಗಿ ವ್ಯಾಪಿಸಿ, ಅವರ ಮಾತು ಮೂಕವಾಗಿತ್ತು.
-ಸುಮನಾ