ಕ್ಲಾಸಿನಲ್ಲಿ ಎದ್ದು ನಿಲ್ಲಿಸಿ ಪ್ರಶ್ನೆ ಕೇಳಿ ಗಲಿಬಿಲಿ ಗೊಳಿಸುವ, ಏರಿಳಿತವಿಲ್ಲದ ಸ್ವರದಿಂದ ಪಾಠ ಮಾಡಿ ಬೋರ್ ಹೊಡೆಸುವ ಆ ಮೇಡಂ ಬಗ್ಗೆ ಮನೀಷಾಗೆ ಅಸಮಾಧಾನ. ಇಂದು ತರಗತಿಯಲ್ಲಿ ಪಾಠದ ಕಡೆಗೆ ಗಮನ ಕೊಡದ್ದಕ್ಕೆ ಮೇಡಂ ಕೈಯಲ್ಲಿ ಉಗಿಸಿಕೊಂಡಳು ಕೂಡ. ‘ಪಾಠ ಇಂಟರೆಸ್ಟಿಂಗ್ ಆಗಿದ್ದರೆ ತಾನೆ ಕೇಳೋಣ ಅನಿಸುವುದು’…. ಉದ್ವೇಗದಿಂದ ಮನೀಷಾ ನಂತರದ ಕ್ಲಾಸ್ ಬಂಕ್ ಮಾಡಿ ಕಂಪ್ಯೂಟರ್ ಲ್ಯಾಬ್ ನಲ್ಲಿ ಯಾರೂ ಇಲ್ಲದ್ದು ಗಮನಿಸಿ ಅಲ್ಲೇ ಹಿಂದಿನ ಒಂದು ಟೇಬಲ್ ಗೆ ಧಿಮಿಗುಡುತ್ತಿರುವ ತಲೆಯಾನಿಸಿ ಕುಳಿತು ತನಗರಿವಿಲ್ಲದಂತೆ ಟೇಬಲ್ ಮೇಲೆ ಪೆನ್ಸಿಲ್ನಿಂದ ,’ ಇಂಗ್ಲಿಷ್ ಮೇಡಂ ನನಗಿಷ್ಟವಿಲ್ಲ’ ಎಂದು ಗೀಚಿದಳು. ಸ್ವಲ್ಪ ಹೊತ್ತು ಅಲ್ಲೇ ಕಣ್ಣು ಮುಚ್ಚಿ ಕುಳಿತು ನಂತರ ಮುಖ ತೊಳೆದು ನೀರು ಕುಡಿದು ಬಂದಾಗ ಕದಡಿದ ಮನಸ್ಸು ತಹಬದಿಗೆ ಬಂದಿತ್ತು.
ಮರುದಿನ ಕ್ಲಾಸ್ನಲ್ಲಿ ಅಂತಹುದೇ ಘಟನೆಯ ಪುನರಾವರ್ತನೆ. ಅವರು ನನ್ನನ್ನೇ ಯಾಕೆ ಗಮನಿಸಬೇಕು.. ಯಾಕೆ ನನ್ನ ಮೇಲೆ ಹಟ ಸಾಧಿಸಬೇಕು…. ಕುಪಿತಗೊಂಡ ಮನೀಷಾ ಹಿಂದಿನ ದಿನದ ತರಹವೇ ಕಂಪ್ಯೂಟರ್ ಲ್ಯಾಬ್ ನ ಹಿಂದಿನ ಅದೇ ಡೆಸ್ಕ್ ಬಳಿ ಕುಳಿತುಕೊಂಡಳು. ಕಣ್ಣಲ್ಲಿ ನೀರು ತುಂಬಿ ತನ್ನನ್ನು ಯಾರೂ ನೋಡುವುದು ಬೇಡ ಎನಿಸಿ ತಲೆತಗ್ಗಿಸಿದಾಗ ಒಂದು ಅಚ್ಚರಿ ಕಾದಿತ್ತು. ತನ್ನ ಹಿಂದಿನ ದಿನದ ಬರಹದ ಕೆಳಗೆ ,’ನನಗೂ ಆ ಮೇಡಂ ಕಂಡರೆ ಇಷ್ಟ ಇಲ್ಲ’ ಅಂತ ಬರೆದಿತ್ತು. ಓ! ತನ್ನಂತೆಯೇ ಯೋಚಿಸುವ ಇನ್ನೂ ಯಾರೋ ಇದ್ದಾರೆ’..
ಚಕಿತಗೊಂಡ ಮನೀಷಾ.. ಸ್ವಲ್ಪ ಯೋಚಿಸಿ, ಆ ಎರಡೂ ಬರಹಗಳನ್ನು ಅಳಿಸಿ, ‘ಅವರ ಟೀಕಿಸುವ ವರ್ತನೆ ನನಗಿಷ್ಟವಿಲ್ಲ ಅಷ್ಟೇ’ ಎಂದು ಬರೆದಳು….ಕುತೂಹಲದಿಂದ ಮರುದಿನ ನೋಡಿದಾಗ..’ಅದು ಅವರ ಮನೋಧರ್ಮ ಬಿಡು’ ಎಂದು ಬರೆದಿತ್ತು.
‘ಅವರನ್ನು ಸಹಿಸುವ ಅಗತ್ಯ ಏನು..ನಾನು ಕಂಪ್ಲೇಂಟ್ ಮಾಡ್ತೇನೆ’ ಮನೀಷಾ ಒಂದು ದಿನ ಕೆಂಡವಾಗಿದ್ದರೆ, ‘ಕೆಂಡಕ್ಕೆ ಕೈಯಿಕ್ಕಿದರೆ ನಮ್ಮ ಕೈಯೇ ಸುಡುವುದು…. ಸಮಾಧಾನವಾಗಿರು..’ ಎಂಬ ಹಿತವಚನ… ಹೀಗೇ ಪರಸ್ಪರ ಬರಹಗಳ ವಿನಿಮಯ.. ದಿನಗಳು ಉರುಳಿದವು..ಇನ್ನೇನು ಫೈನಲ್ ಪರೀಕ್ಷೆಗಳ ಮುಂಚಿನ ರಜೆಯ ಆರಂಭ… ಮನೀಷಾಗೆ ಇಷ್ಟು ದಿನ ತನ್ನ ಮಾನಸಿಕ ತುಮುಲವನ್ನು ಕಡಿಮೆ ಮಾಡಿದ pen-pal ನನ್ನು ನೋಡುವ, ಮಾತನಾಡಿಸುವ ಆಸೆ.
“ನಿನ್ನ ಬರಹಗಳನ್ನು ಓದಿ ನಾವಿಬ್ಬರೂ ಒಂದೇ ದೋಣಿ ಯ ಪಯಣಿಗ ಪಯಣಿಗರು ಎನಿಸಿದೆ. ನೀನಾರೆಂದು ತಿಳಿಸುವೆಯಾ” ಮನೀಷಾ ತನ್ನ ಮನಸನ್ನು ಬರಹದಲ್ಲಿ ತೆರೆದಿಟ್ಟಳು. ‘ನೀನೆಷ್ಟು ನನಗೆ ಆಭಾರಿಯೋ..ನಾನೂ ಅಷ್ಟೇ ನಿನಗೆ ಋಣಿಯಾಗಿದ್ದೇನೆ. ಇದಕ್ಕಿಂತ ಹೆಚ್ಚು ನೀನು ನನ್ನನ್ನು ತಿಳಿದು ಕೊಳ್ಳುವ ಅಗತ್ಯವಿಲ್ಲ ಬಿಡು…. bye.. ಸುಖವಾಗಿರು’ ಎಂದಿತ್ತು ಮರುದಿನದ ಬರಹ.
ಆಕಸ್ಮಿಕವಾಗಿ ಲಭಿಸಿದ್ದ ಸ್ನೇಹ ಅಜ್ಞಾತವಾಗಿ ಉಳಿಯಿತು!