Posted in ಕವನ

ಹೊಸ ಪಚ್ಚೆ ಸೀರೆ

ಬಾಂದಳದಿಂ ಸುರಿದಿದೆ ಸೋನೆಮಳೆ ಧಾರೆ ಜಳಕವಾಡುತ ಕೊಳೆಕಳೆದು ಲಕಲಕಿಸಿದೆ ಧರೆ

ವರುಣ ನೀಡಿದ ಭೂತಾಯ್ಗೆ ಹೊಸಪಚ್ಚೆ ಸೀರೆ

ಸಂಭ್ರಮಿಸಿಹಳು ಅಮ್ಮ ಧರಿಸಿ ಹಸಿರುಡುಗೊರೆ

ನವಪತ್ತಲದ ಮೈತುಂಬ ಪಚ್ಚೆತೆನೆ ಸಿರಿಯು

ನೆರಿಗೆಯಲಿ ಚಿಮ್ಮುತಿದೆ ರಭಸದಿ ನೀರ್ಝರಿಯು

ಬೆಟ್ಟಗುಡ್ಡವು ಅವಳ ಮೃಣ್ಮಯದ ಕಂಚುಕವು

ಹಳ್ಳಕೊಳಗಳೆಲ್ಲ ಅವಳ ಮೆಚ್ಚಿನಾಭರಣಗಳು

ಪಚ್ಚೆ ಸೀರೆಯಂಚಿನ ತುಂಬ ಹೂವ ಪರಿವಾರ

ಹಚ್ಚಿ ಕೆಂಪು ಬಿಳಿ ನೀಲಿ ಹಳದಿ ವರ್ಣ ವಿಸ್ತಾರ

ಅರೆ ಬಿರಿದ ಮೊಗ್ಗು ಕುಸುರಿ ಗೊಂಡೆ ಅಲಂಕಾರ

ಮೂಡುತಿಹ ನವಅಂಕುರ ಹೆಚ್ಚಿಸಿವೆ ಶೃಂಗಾರ

ಮುಸಲಧಾರೆಗೆ ತೊಯ್ದು ಗಿಡಮರ ಬಳ್ಳಿ

ಪಡೆದಿವೆ ಆಶ್ರಯವ ಭೂತಾಯಿ ಸೆರಗಲ್ಲಿ

ಜೀರುಂಡೆಯ‌ ಕೂಗು ಸಂತಸದ ಗದ್ದಲ

ಮಂಡೂಕದ ವಟರು ಅವಳ ಹೆಜ್ಜೆ ಸಪ್ಪಳ

ತೊಯ್ದಷ್ಟು ಮಿರುಗುವ ಹೊಸಪಚ್ಚೆ ಸೀರೆ

ಮಡಿಲಲ್ಲಿ ಒರಗಿ ಮಗುವಾದೆ ಇಂದು ಖರೆ

ಹೊಸ ಸೀರೆಯ ಚೆಂದ ನಾ ಕೆಡಿಸಲಾರೆ

ನಿತ್ಯವಾಗಲಿ ಹಸಿರುಡುಗೆಯು ನಿನಗೆ ವಸುಂಧರೆ🙏💚

-ಸುಮನಾ

Leave a Reply

Your email address will not be published. Required fields are marked *