Posted in ಕವನ

ಹೇಗೆ ಹೇಳಲಿ ನಿನಗೆ…

‘ಬಹಳ ಇಷ್ಟವು ಎನಗೆ ಮೈಸೂರು ಮಲ್ಲಿಗೆ’

ಉಸುರಿದಳಾಕೆ ಸಹಜ ಮಾತು ಮಾತಲ್ಲಿ..

ನಸುಕಲ್ಲೆ ಹೊರಟನಾತ ದೂರ ಮೈಸೂರಿಗೆ

ತುಸು ಕೆಲಸಗಳಿವೆ ಎಂದು ಕೂಡಿಸುತ ಕಣ್ಣಾಲಿ..

ಬೇಸರದ ಛಾಯೆ ಆತನಿಲ್ಲದೆ ಮನೆಯಲ್ಲಿ

ತಾಸುತಾಸಿಗು ಅವನ ಕಾಳಜಿಯು ಮನದಲ್ಲಿ

ಊಂ.. ಸಾಕಿನ್ನು ಚಿಂತೆ ಎಂದೆಚ್ಚೆತ್ತು ಕೊಳ್ಳುತಲಿ

ಬೆಸದಿ ಮುಳುಗಿದಳಾಕೆ ಕೆಲಸ ಕಾರ್ಯಗಳಲ್ಲಿ

ತಿರುಗಿ ಬಂದನು ಮಾರ ಶರವೇಗದಲ್ಲಿ

ಮಿರುಗು ಮಿಂಚು ಮಲ್ಲಿಗೆ ನಗೆಯಲ್ಲಿ

ಮಾರುದ್ದ ಮಲ್ಲಿಗೆಮಾಲೆ ಅವನ ಕೈಯ್ಯಲ್ಲಿ

ಅರೆಕ್ಷಣದಲಿ ಸುತ್ತ ಹಬ್ಬಿ ಸುಗಂಧ ರಂಗವಲ್ಲಿ

ಹೋದ ಕೆಲಸವಾಯಿತೇ ಕೇಳಿದಳಾಕೆ ಅವನಲ್ಲಿ

ಅಂದನಾತ ‘ಬೇರೆ ಕೆಲಸವಿರಲಿಲ್ಲ ಮೈಸೂರಲ್ಲಿ!

ತಂದಿಹೆನು ನಿನ್ನಿಷ್ಟದ ಮಲ್ಲಿಗೆಯ ನೋಡಿಲ್ಲಿ

ಒಂದಷ್ಟು ಹೂ ಬಳ್ಳಿಗಳೂ ನೆಡಲು ನಮ್ಮಲ್ಲಿ’

‘ನಿನಗಿಂತ ಮಹತ್ವದ್ದಲ್ಲವೋ ಈ ಹೂವೆನಗೆ

ನಿನ್ನ ಸುರಕ್ಷೆಯೆ ಚಿಂತೆ ಕಾಡಿತೆಷ್ಟು ಪ್ರಿಯ ನನಗೆ

ನಿನಗರ್ಥವಾಗುವುದೇ..ಹೇಗೆ ಹೇಳಲಿ ನಿನಗೆ’

ಎನ್ನುತ ನಸುನಕ್ಕು ಆಕೆ ಹೂವನಿಟ್ಟಳು ಮುಡಿಗೆ!

-ಸುಮನಾ

Leave a Reply

Your email address will not be published. Required fields are marked *