ಹಲವಾರು ದಿನಗಳು
ಬಾನಂಗಳದಲ್ಲಿ ಫಕ್ಕನೆ ಮೂಡುವ
ರಂಗುರಂಗಿನ ನೋಟವ ತೆರೆದಿಡುತ್ತವೆ!
ಹತ್ತಾರು ದಿನಗಳಲದೋ
ಅನುನಯದ ಎಳೆಬಿಸಿಲ ಹಿತದಲ್ಲಿ
ಸೊಕ್ಕುತಲಿ ಹಿಗ್ಗುತಲಿ
ಬದುಕು ಸುಖದ ತಾವಿನಲಿ ಅರಳುತ್ತದೆ!
ಕೆಲವೊಮ್ಮೆ ದಿನಗಳು ಬಿಸಿಲಬ್ಬರಕೆ
ಒಣಗುವ ಅಡಿಕೆ ತೋಟದ ಹಾಗೆ!
ವಿದ್ಯಮಾನಗಳ ಬಿಸಿಗೆ ಅಂತ:ಸತ್ವವು ಆರಿ
ತನುಮನವೆಲ್ಲ ಒಣಗಿ ಬರಡೆನಿಸುತ್ತದೆ…
ಇನ್ನು ಕೆಲವೊಮ್ಮೆ ದಿನಗಳು
ಬಾನಂಗಳದಲ್ಲಿ ಮೆಲ್ಲಮೆಲ್ಲನೆ
ತೇಲುವ ಕಪ್ಪು ಮೋಡಗಳಂತೆ..
ನೋವಭಾರವನು ಹೊತ್ತು ತೆವಳುತ್ತವೆ…
ಕೆಲದಿನ ಸುಳಿವಿರದ ಮಿಂಚಿನಾಘಾತ
ತತ್ತರಿಸಿ ಬಿದ್ದೆದ್ದು ಯೋಜನೆ ಬುಡಮೇಲಾಗಿ
ಯಥಾರ್ಥದೆದುರು ನಂಬಿಕೆ ಕನವರಿಕೆಯಾಗಿ
ಮನದ ಮೂಲೆಯಲಿ ಗೂಡು ಕಟ್ಟುತ್ತದೆ..
ಕಾಲಚಕ್ರವು ತಿರುತಿರುಗಿ
ಕಠಿಣದಾರಿಯು ಮಧುರಸ್ಮೃತಿಪಾಠವಾಗಿ
ಸವಾಲಿನ ದಿನಗಳ ಆಯಾಸ ಚೇತೋಹಾರಿಯಾಗಿ ಮಾರ್ಪಡುತ್ತದೆ!
ತನ್ನಂತಾನೆ ಸಾಗುವ ಬದುಕ ಬಂಡಿಯು
ಬಿಸಿಲು ಮಳೆ ಛಳಿ ಏನೇ ಇರಲಿ
ನಿರ್ಲಿಪ್ತ ಮೌನಮಾರ್ಗದಲಿ
ಜನಜೀವನವ ಮುಂದಕ್ಕೊಯ್ಯುತ್ತದೆ..
-ಸುಮನಾ